ಬೆಂಗಳೂರು: ನಗರದಲ್ಲಿ ರಸ್ತೆ ಅಪಘಾತದಲ್ಲಿ (Accident) ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. 2022ರಲ್ಲಿ ಶೇ75 ರಷ್ಟು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ (Helmet) ಧರಿಸಿದ್ದರೂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ನಗರ ಸಂಚಾರ ಪೊಲೀಸರ (Bengaluru Traffic Police) ವಿಸ್ತೃತ ವಿಶ್ಲೇಷಣಾ ವರದಿಯಿಂದ ತಿಳಿದುಬಂದಿದೆ. ಈ 75 ರಷ್ಟು ಜನರು ಗುಣಮಟ್ಟದ ಮತ್ತು ಅರ್ಧ ಹೆಲ್ಮೆಟ್ ಧರಿಸಿದ್ದರು ಎಂಬುವುದು ತಿಳಿದುಬಂದಿದೆ. ಬೆಂಗಳೂರು ಟ್ರಾಫಿಕ್ ಪೊಲೀಸ್ ಅಂಕಿ-ಅಂಶಗಳ ಪ್ರಕಾರ ನಗರದಲ್ಲಿ ಹೆಲ್ಮೆಟ್ ಧರಿಸಿದ ನಂತರವೂ ಅಪಘಾತದಲ್ಲಿ ತಲೆಗೆ ಮಾರಣಾಂತಿಕ ಗಾಯಗಳಾಗಿ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ತಿಳಿಸುತ್ತದೆ.
ಸಾವನ್ನಪ್ಪಿದ ದ್ವಿಚಕ್ರ ವಾಹನ ಸವಾರರಲ್ಲಿ ಶೇ 25 ರಷ್ಟು ವಾಹನ ಸವಾರರು ಹೆಲ್ಮೆಟ್ ಧರಿಸಿರಲಿಲ್ಲ, ಆದರೆ ಸುಮಾರು ಶೇ 75 ರಷ್ಟು ಸವಾರರು ಹೆಲ್ಮೆಟ್ ಧರಿಸಿದ್ದರು. ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ಮಾತನಾಡಿ, ‘ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರ ಐಎಸ್‌ಐ ಪ್ರಮಾಣೀಕೃತ ಹೆಲ್ಮೆಟ್ ಧರಿಸಿ ತಲೆ ಕಿವಿ ಮುಚ್ಚಿಕೊಳ್ಳಬೇಕು ಎಂದರು.
ಹೆಲ್ಮೆಟ್ ಬಕಲ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಅರ್ಧ ಹೆಲ್ಮೆಟ್ ಅಥವಾ ಐಎಸ್‌ಐ ಪ್ರಮಾಣೀಕೃತ ಹೆಲ್ಮೆಟ್ ಧರಿಸದಿದ್ದರೇ ಸವಾರರಿಗೆ ನಾವು ದಂಡ ವಿಧಿಸುತ್ತೇವೆ ಎಂದು ಹೇಳಿದರು. 2022 ರಲ್ಲಿ ಹೆಲ್ಮೆಟ್ ಇಲ್ಲದೆ ಸಂಚರಿಸದ 43 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 2020 ರಲ್ಲಿ 31 ಲಕ್ಷ ಪ್ರಕರಣಗಳು ದಾಖಲಾಗಿದ್ದವು.
2022 ರಲ್ಲಿ ಶೇ50 ರಷ್ಟು ಪಾದಾಚಾರಿಗಳು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 2022 ರಲ್ಲಿ 247 ಪಾದಚಾರಿಗಳು, 2021 ಮತ್ತು 2020 ರಲ್ಲಿ ಕ್ರಮವಾಗಿ 161 ಮತ್ತು 164 ಪಾದಾಚಾರಿಗಳು ಮೃತಪಟ್ಟಿದ್ದಾರೆ. 2022 ರಲ್ಲಿ 64, 2021 ರಲ್ಲಿ 47 ಮತ್ತು 2020 ರಲ್ಲಿ 52 ಜನರು ದ್ವಿಚಕ್ರ ವಾಹನಗಳಿಂದ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಸಿಲಿಕಾನ್ ಸಿಟಿ ಈಗ ಸೇಫ್ ಸಿಟಿ: ಬೆಂಗಳೂರಿನ ಜನರ ಸಹಾಯಕ್ಕೆ ಬಂತು ತುರ್ತು ಸಹಾಯವಾಣಿ
ಇದಲ್ಲದೇ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳಿಂದ ಸಾವುನೋವುಗಳೂ ಹೆಚ್ಚುತ್ತಿವೆ. 2020 ಮತ್ತು 2021 ರಲ್ಲಿ ಈ ಸಂಖ್ಯೆ 44 ಮತ್ತು 46 ಆಗಿದ್ದರೇ, ಇದು 2022 ರಲ್ಲಿ 69 ಕ್ಕೆ ತಲುಪಿದೆ. ಈ ಮೂಲಕ ಶೇ 50 ರಷ್ಟು ಏರಿಕೆಯಾಗಿದೆ. ಬಿಎಂಟಿಸಿ ಬಸ್‌ಗಳಿಂದ 2020 ಮತ್ತು 2021 ರಲ್ಲಿ 27 ಜನ, ಮತ್ತು 2022 ರಲ್ಲಿ 33 ಜನರು ಸಾವನ್ನಪ್ಪಿದ್ದಾರೆ.
ನಿರಂತರ ಪಾರ್ಕಿಂಗ್ ಸಮಸ್ಯೆ ಎದುರಿಸುತ್ತಿರುವ ನಗರಕ್ಕೆ ಇತ್ತೀಚಿನ ಬಿಬಿಎಂಪಿ ಅಂಕಿಅಂಶಗಳ ಪ್ರಕಾರ, ನಾಲ್ಕು ಚಕ್ರ ವಾಹನಗಳಿಗೆ ಕೇವಲ 2,670 ಪಾರ್ಕಿಂಗ್ ಸ್ಲಾಟ್‌ಗಳಿವೆ. 2021 ಕ್ಕೆ ಹೋಲಿಸಿದರೆ 2022 ರಲ್ಲಿ 12 ಲಕ್ಷ ನೋ ಪಾರ್ಕಿಂಗ್ ಪ್ರಕರಣಗಳು ದಾಖಲಾಗಿವೆ. 2022 ರಲ್ಲಿ 1.5 ಲಕ್ಷಕ್ಕಿಂತ ಹೆಚ್ಚು ಫುಟ್‌ಪಾತ್ ಪಾರ್ಕಿಂಗ್ ಪ್ರಕರಣಗಳು ದಾಖಲಾಗಿವೆ.
ಸಾರಿಗೆ ಇಲಾಖೆ ಅಂಕಿ-ಅಂಶಗಳ ಪ್ರಕಾರ, ಏಪ್ರಿಲ್ 2021 ಮತ್ತು ಮಾರ್ಚ್ 2022 ರ ನಡುವೆ 12,682 ನಾಲ್ಕು ಚಕ್ರದ ವಾಹನಗಳು ನೋಂದಣಿಯಾಗಿವೆ. 2022 ರಲ್ಲಿ ಬೆಂಗಳೂರಿನಲ್ಲಿ ಸುಮಾರು 17.5 ಲಕ್ಷ ನಾಲ್ಕು ಚಕ್ರದ ವಾಹನ ನೋಂದಣಿಯಾಗಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:48 am, Tue, 20 June 23