
ಬೆಂಗಳೂರು, ನವೆಂಬರ್ 18: ಖಾಸಗಿ ಶಾಲೆಗಳ ದುಬಾರಿ ಶುಲ್ಕಕ್ಕೆ ಸುಸ್ತಾಗಿರುವ ಪೋಷಕರೀಗ ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿಗೆ ನಿರೀಕ್ಷೆಗೂ ಮೀರಿ ಬೇಡಿಕೆ ವ್ಯಕ್ತವಾಗುತ್ತಿದೆ. ಹೀಗಾಗಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಲು ಸರ್ಕಾರ ಚಿಂತಿಸಿದೆ. ಈಗಾಗಲೇ ಸಾವಿರಾರು ಶಾಲೆಗಳಲ್ಲಿ ಆರಂಭವಾಗಿರುವ ಎಲ್‌ಕೆಜಿ, ಯುಕೆಜಿ ತರಗತಿಗಳನ್ನ ಮತ್ತಷ್ಟು ವಿಸ್ತರಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.
ಸದ್ಯ ರಾಜ್ಯದ ಸುಮಾರು 6ರಿಂದ 7 ಸಾವಿರ ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಎಲ್‌ಕೆಜಿ, ಯುಕೆಜಿ ತರಗತಿಗಳು ನಡೆಯುತ್ತಿವೆ. ಇದೀಗ ಹೊಸದಾಗಿ ಇನ್ನೆಷ್ಟು ಶಾಲೆಗಳಲ್ಲಿ ಈ ತರಗತಿಗಳನ್ನ ಆರಂಭಿಸಬಹುದು ಅನ್ನೋದರ ಬಗ್ಗೆ ಶಿಕ್ಷಣ ಇಲಾಖೆ ಸಮೀಕ್ಷೆ ನಡೆಸಲು ಮುಂದಾಗಿದೆ. ಆರಂಭಿಕ ಹಂತದಲ್ಲಿ ಪೋಷಕರಿಂದ ಹೆಚ್ಚಿನ ಬೇಡಿಕೆ ಇರುವ ಶಾಲೆಗಳಿಗೆ ಆದ್ಯತೆ ನೀಡಲು ಚಿಂತನೆ ನಡೆದಿದೆ. ವಿಶೇಷ ಅಂದ್ರೆ, ಕೆಲವು ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ಅಧಿಕೃತ ಅನುಮತಿ ಇಲ್ಲದಿದ್ದರೂ SDMC ಹಾಗೂ ಶಿಕ್ಷಕರೇ ಸ್ವಂತ ವೆಚ್ಚದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನ ಆರಂಭಿಸಿದ್ದಾರೆ. ಹೀಗಾಗಿ ಮಕ್ಕಳ ದಾಖಲಾತಿ ಹೆಚ್ಚಳ ಹಾಗೂ SDMCಗಳ ಬೇಡಿಕೆಯನ್ನ ಆಧರಿಸಿ ಈ ವ್ಯವಸ್ಥೆಯನ್ನ ವಿಸ್ತರಿಸಲು ಇಲಾಖೆ ಮುಂದಾಗಿದೆ.
ಇದನ್ನೂ ಓದಿ: ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ: ಪಿಐಎಲ್ ಇತ್ಯರ್ಥಗೊಳಿಸಿದ ಹೈಕೋರ್ಟ್
ಇನ್ನು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸುವ ಮೂಲಕ ಅಂಗನವಾಡಿ ಮತ್ತು ಶಾಲೆಗಳ ನಡುವೆ ಸಮನ್ವಯ ಸಾಧಿಸಲೂ ಸರ್ಕಾರ ಯೋಜನೆ ರೂಪಿಸಿದೆ. ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಧಿ ಬಳಸಿ ಆರಂಭಿಸಿರುವ ಪೂರ್ವ ಪ್ರಾಥಮಿಕ ತರಗತಿಗಳಿಗೆ ಕೇವಲ 42 ದಿನಗಳಲ್ಲೇ ಬರೋಬ್ಬರಿ 48 ಸಾವಿರ ಮಕ್ಕಳ ದಾಖಲಾತಿಯಾಗಿದೆ. ಈ ದಾಖಲಾತಿ ಹೆಚ್ಚಳವೇ ಸರ್ಕಾರಕ್ಕೆ ಹೊಸ ಭರವಸೆ ಮೂಡಿಸಿದೆ. ಇದೇ ಮಾದರಿಯನ್ನ ರಾಜ್ಯದ ಉಳಿದ ಭಾಗಗಳಿಗೂ ವಿಸ್ತರಿಸುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಸರ್ಕಾರದ ಈ ಯೋಜನೆ ಜಾರಿಯಾದರೆ ಮಕ್ಕಳ ಶಿಕ್ಷಣದ ವಿಚಾರದಲ್ಲಿ ಬಡ ಮತ್ತು ಮಧ್ಯಮ ವರ್ಗದ ಪೋಷಕರಿಗೆ ದೊಡ್ಡ ಮಟ್ಟದ ಆರ್ಥಿಕ ಹೊರೆ ಕಡಿಮೆಯಾಗುವ ನಿರೀಕ್ಷೆ ಇದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.