ಆನೇಕಲ್: ಆರ್​​​ಟಿಓ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ; ತೆರಿಗೆ ಕಟ್ಟದ 25 ಬಸ್​​​ಗಳು ಜಪ್ತಿ

ಆನೇಕಲ್‌ನ ಅತ್ತಿಬೆಲೆ ಚೆಕ್‌ಪೋಸ್ಟ್‌ನಲ್ಲಿ ಆರ್​ಟಿಓ ಅಧಿಕಾರಿಗಳು ಅಕ್ರಮವಾಗಿ ಸಂಚರಿಸುತ್ತಿದ್ದ ಹೊರ ರಾಜ್ಯದ 25 ಟೂರಿಸ್ಟ್ ಬಸ್‌ಗಳನ್ನು ಸೀಜ್ ಮಾಡಿದ್ದಾರೆ. ಕರ್ನಾಟಕ ರಾಜ್ಯಕ್ಕೆ ನಿಗದಿತ ತೆರಿಗೆ ಕಟ್ಟದೆ ಕಾರ್ಯಾಚರಣೆ ನಡೆಸುತ್ತಿದ್ದ ಈ ಬಸ್‌ಗಳಿಂದ 44 ಲಕ್ಷ ರೂ.ಗೂ ಹೆಚ್ಚು ತೆರಿಗೆ ಬಾಕಿ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ.

ಆನೇಕಲ್: ಆರ್​​​ಟಿಓ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ; ತೆರಿಗೆ ಕಟ್ಟದ 25 ಬಸ್​​​ಗಳು ಜಪ್ತಿ
ಜಪ್ತಿ ಮಾಡಿರುವ ಬಸ್​ಗಳು
Edited By:

Updated on: Oct 24, 2025 | 9:38 PM

ಆನೇಕಲ್, ಅಕ್ಟೋಬರ್​ 24: ರಾಜ್ಯದ ಸಾರಿಗೆ ಇಲಾಖೆಗೆ ನಿಗದಿತ ತೆರಿಗೆ (Tax) ಕಟ್ಟದೆ ಪ್ರಯಾಣಿಕರನ್ನ ಹೊತ್ತು ಅಕ್ರಮವಾಗಿ ಸಂಚರಿಸುತ್ತಿದ್ದ ಅನ್ಯ ರಾಜ್ಯಗಳ ಟೂರಿಸ್ಟ್ ಬಸ್​​ಗಳಿಗೆ (Tourist Buses) ಆರ್​ಟಿಓ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಬಿಸಿ ಮುಟ್ಟಿಸಿದ್ದಾರೆ. ಅತ್ತಿಬೆಲೆ ಚೆಕ್ ಪೋಸ್ಟ್​​ನಲ್ಲಿ ಬರೋಬ್ಬರಿ ಇಪ್ಪತ್ತೈದು ಬಸ್​ಗಳನ್ನ ವಶಕ್ಕೆ ಪಡೆದು ಸೀಜ್ ಮಾಡಿದ್ದು, ಟ್ಯಾಕ್ಸ್ ಕ್ಲಿಯರ್ ಮಾಡಲು ಬಸ್ ಮಾಲೀಕರಿಗೆ ನೋಟೀಸ್ ನೀಡಲಾಗಿದೆ.

ತೆರಿಗೆ ಕಟ್ಟದೇ ಸಂಚಾರ: ರಾಜ್ಯ ಸಾರಿಗೆ ಇಲಾಖೆಗೆ ನಷ್ಟ

ಹೌದು. ಬೆಳ್ಳಂಬೆಳಗ್ಗೆ ಅತ್ತಿಬೆಲೆ ಟೋಲ್ ಬಳಿ ಫಿಲ್ಡಿಗಿಳಿದ ಆರ್​​ಟಿಓ ಅಧಿಕಾರಿಗಳು ಕರ್ನಾಟಕ ರಾಜ್ಯಕ್ಕೆ ತೆರಿಗೆ ಕಟ್ಟದ ಬಸ್​​ಗಳ ಓಡಾಟಕ್ಕೆ ಬ್ರೇಕ್ ಹಾಕಿದ್ದಾರೆ. ಅಪರ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ನೇತೃತ್ವದಲ್ಲಿ ಜಂಟಿ ಸಾರಿಗೆ ಆಯುಕ್ತೆ ಶೋಭಾ ಹಾಗೂ ಗಾಯತ್ರಿ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ತಮಿಳುನಾಡು, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಬಸ್​​ಗಳನ್ನು ತಡೆದು ಪರಿಶೀಲನೆ ಮಾಡಿದಾಗ ತೆರಿಗೆ ಕಟ್ಟದೇ ಸಂಚಾರ ನಡೆಸುತ್ತಿದ್ದು, ರಾಜ್ಯ ಸಾರಿಗೆ ಇಲಾಖೆಗೆ ನಷ್ಟ ಉಂಟು ಮಾಡಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಮದ್ಯಪಾನ ಮಾಡಿ ಶಾಲಾ ಬಸ್​ ಚಾಲನೆ: 36 ಮಂದಿ ಚಾಲಕರ ವಿರುದ್ಧ ಕೇಸ್​; ಡಿಎಲ್ ರದ್ದಿಗೂ ಶಿಫಾರಸು

ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ಆನೇಕಲ್​​ನ ಅತ್ತಿಬೆಲೆಯ ಚೆಕ್​​ಪೋಸ್ಟ್​​ನಲ್ಲಿ ತಪಾಸಣೆ ನಡೆಸಿ 25 ಖಾಸಗಿ ಟೂರಿಸ್ಟ್ ಬಸ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ಹಾಗೂ ಬಸ್​​ಗಳ ಮಾಲೀಕರ ಮಾಹಿತಿ ಕಲೆ ಹಾಕಲಾಗುತ್ತಿದೆ. 25 ಬಸ್​ಗಳಿಂದ ಒಟ್ಟಾರೆ 44 ಲಕ್ಷಕ್ಕೂ ಅಧಿಕ ಟ್ಯಾಕ್ಸ್ ಬಾಕಿ ಇದೆ. ಅದಲ್ಲದೆ ಪರವಾನಗಿ ನಿಯಮಗಳ ಉಲ್ಲಂಘನೆ, ಕರ್ನಾಟಕ ಸ್ಟೇಟ್​ ಟ್ಯಾಕ್ಸ್​ ಕಟ್ಟಿಲ್ಲ ಹೀಗಾಗಿ ನಮ್ಮ ರಾಜ್ಯದ ತೆರಿಗೆ ಕಟ್ಟಿಸಿಕೊಳ್ಳುವುದಕ್ಕಾಗಿ ಈ ವಾಹನಗಳನ್ನು ಸೀಜ್ ಮಾಡಿದ್ದೇವೆ ಎಂದು ಅತ್ತಿಬೆಲೆ ಚೆಕ್ ಪೋಸ್ಟ್ನ ಹಿರಿಯ ಮೋಟಾರ್‌ ವಾಹನ ನಿರೀಕ್ಷಕ ರಂಜಿತ್ ತಿಳಿಸಿದ್ದಾರೆ.

ಬಸ್ ಮಾಲೀಕ ಮಹದೇವ್ ಹೇಳಿದ್ದಿಷ್ಟು 

ಇನ್ನೂ ಆಲ್ ಇಂಡಿಯಾ ಪರ್ಮಿಟ್ ತೆಗೆದುಕೊಂಡು ತಮಿಳುನಾಡಿನಿಂದ ಕರ್ನಾಟಕಕ್ಕೆ ಟೂರಿಸ್ಟ್ ಪ್ರಯಾಣಿಕರನ್ನ ಕರೆದುಕೊಂಡು ಬರುತ್ತಿದ್ದೇವು. ನಮಗೆ ಟ್ಯಾಕ್ಸ್ ಕಟ್ಟಬೇಕಿರುವ ಬಗ್ಗೆ ತಿಳಿದಿರಲಿಲ್ಲ ಬೆಳಿಗ್ಗೆ ಪ್ರಯಾಣಿಕರನ್ನ ಕರೆತರುವಾಗ ಅತ್ತಿಬೆಲೆ ಚೆಕ್ ಪೋಸ್ಟ್​ನಲ್ಲಿ ಆರ್​ಟಿಓ ಅಧಿಕಾರಿಗಳು ವಾಹನವನ್ನ ವಶಕ್ಕೆ ಪಡೆದಿದ್ದಾರೆ. ಈಗ 1 ಲಕ್ಷ 80 ಸಾವಿರ ರೂ ಟ್ಯಾಕ್ಸಿ ಹಣವನ್ನ ಕಟ್ಟಿ ಬಸ್ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಬಸ್ ಮಾಲೀಕ ಮಹದೇವ್ ತಿಳಿಸಿದ್ದಾರೆ.

ಇದನ್ನೂ ಓದಿ: Bangalore Traffic Advisory: 21 ದಿನಗಳ ಕಾಲ ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ; ಪರ್ಯಾಯ ಮಾರ್ಗ ವಿವರ ಇಲ್ಲಿದೆ

ಒಟ್ಟಿನಲ್ಲಿ ರಾಜ್ಯಕ್ಕೆ ಟ್ಯಾಕ್ಸ್ ಕಟ್ಟದೆ ಓಡಾಟ ಮಾಡುತ್ತಿದ್ದ ಹೊರರಾಜ್ಯದ ಬಸ್​ಗಳಿಗೆ ಆರ್​​ಟಿಓ ಅಧಿಕಾರಿಗಳು ಕಡಿವಾಣ ಹಾಕಿದ್ದು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.