ಬೆಂಗಳೂರು: ಕಳೆದ 17 ವರ್ಷಗಳ ಹಿಂದೆ ಮಂಜೂರಾದ ನಿವೇಶನಗಳನ್ನು ವಿವಿಧ ಕಾರಣಗಳನ್ನು ನೀಡಿ ಬಿಡಿಎ (BDA) ಹಿಂಪಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಸ್ಪಷ್ಟಪಡಿಸಿದ್ದಾರೆ. ಮಂಜೂರಾತಿ ಪಡೆದ ನಿವೇಶನಕ್ಕಾಗಿ ಕಳೆದ ಹದಿನೇಳು ವರ್ಷಗಳಲ್ಲಿ ಮೂರು ಬಾರಿ ನೋಂದಣಿ ಸಂಬಂಧ ಶುಲ್ಕ ಪಾವತಿ ಮಾಡಿದ್ದರೂ ಬಿಡಿಎ ನಿವೇಶನ ಪಡೆದು ಮನೆ ಕಟ್ಟಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಈ ಹಿಂದೆ ಶಾಸಕರೂ ಹಾಗೂ ಸಚಿವರುಗಳಿಗೆ ಬಿಡಿಎ ನಿವೇಶನಗಳನ್ನು ಹಂಚಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈ ಕೋರ್ಟ್ನಲ್ಲಿ ಸಲ್ಲಿಸಲಾಗಿತ್ತು. ಅರ್ಜಿಯ ಸಂಬಂಧ ಮಂಜೂರಾತಿ ಪಡೆದ ನಿವೇಶನದ ಕುರಿತು, ಪರಿಶೀಲಿಸಲು ಹೈ ಕೋರ್ಟ್ ನೇಮಿಸಿದ್ದ ನ್ಯಾಯಾಧೀಶ ಫಾರೂಖ್ ಸಮಿತಿ ಸಹ ಸ್ವಿಕರಿಸಿದೆ ಎಂದರು.
ಬಿಡಿಎ ನಿಯಮಾವಳಿಗಳ ಅನುಸಾರವಾಗಿಯೇ ನನಗೆ ನಿವೇಶನ ಮಂಜೂರಾತಿಯಾಗಿದೆ. ಬಿಡಿಎ ನಿಂದ ನಿವೇಶನ ಮಂಜೂರಾತಿಗಾಗಿ ಯಾವುದೇ ಪ್ರಭಾವ ಅಥವಾ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಜಿ ಕೆಟಗರಿ ಅಡಿಯಲ್ಲಿ ಈ ಹಿಂದೆ ಇತರ ಶಾಸಕರೂ ಹಾಗೂ ಸಚಿವರು ಮಂಜೂರಾತಿ ಪಡೆದ ರೀತಿಯಲ್ಲಿಯೇ ನನಗೂ ಬಿಡಿಎ ನಿವೇಶನ ಮಂಜೂರಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಬದಲಿ ನಿವೇಶನ ಮಂಜೂರು ಮಾಡಲು ಬಿಡಿಎ ನಿಗದಿ ಪಡಿಸಿದ ಅಧಿಕ ಶುಲ್ಕವನ್ನೂ ಸಹ ಪಾವತಿಸಿದ್ದೇನೆ. ಈ ಹಿಂದೆ ನೂರಾರು ಮಂದಿ, ಬಿಡಿಎ ನಿಂದ ನಿವೇಶನ ಮಂಜೂರಾತಿ ಪಡೆದು ನೋಂದಣಿ ಶುಲ್ಕ ಕಟ್ಟಿದ್ದರೂ ನಿವೇಶನವನ್ನು ಪಡೆಯುವುದರಿಂದ ವಂಚಿತರಾಗಿದ್ದರು. ನಂತರ ನ್ಯಾಯಾಲಯದ ಆದೇಶದ ಮೇರೆಗೆ ಅವರಿಗೆ ಬಿಡಿಎ ಪರ್ಯಾಯ ನಿವೇಶನ ನೀಡಿ ಪರಿಹಾರ ಒದಗಿಸಿದೆ ಎಂದು ಮಾಹಿತಿ ನೀಡಿದರು.
ನಾನು ಮೂರು ಬಾರಿ ಮಂಜೂರಾದ ನಿವೇಶನಕ್ಕೆ ನೋಂದಣಿ ಮಾಡಿದ್ದರೂ ನಿವೇಶನದ ಹಕ್ಕು ಪಡೆಯಲು ಇದುವರೆಗೂ ಸಾಧ್ಯವಾಗಿಲ್ಲ. ಬಿಡಿಎನಿಂದ ನ್ಯಾಯ ಪಡೆಯಲು ನ್ಯಾಯಾಲಯದ ಮೊರೆ ಹೋಗಲು ಸಹ ನಿರ್ಧರಿಸಿದ್ದೇನೆ ಎಂದು ಹೇಳಿದರು.
ಘಟನೆ ಹಿನ್ನೆಲೆ
ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ತನ್ನ ಆದೇಶ ಉಲ್ಲಂಘಿಸಿ ನಿವೇಶನ ಹಂಚಿಕೆ ಮಾಡಿರುವ ಬಗ್ಗೆ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು. ಸಚಿವರೂ ಸೇರಿದಂತೆ ಹಲವು ವಿಐಪಿಗಳಿಗೆ ಪರ್ಯಾಯ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಹಲವು ವಿಐಪಿಗಳಿಗೆ ಪರ್ಯಾಯ ನಿವೇಶನ ಹಂಚಿಕೆ ಮಾಡಿರುವ ಬಗ್ಗೆ ಬಿಡಿಎ ಆಯುಕ್ತ, ಐಎಎಸ್ ಅಧಿಕಾರಿ ರಾಜೇಶ್ ಗೌಡವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ರಾಜೇಶ್ ಗೌಡ ಅವರನ್ನು ಆಯುಕ್ತರ ಹುದ್ದೆಯಿಂದ ಸ್ಥಳಾಂತರಿಸಲು ಮೌಖಿಕ ಸೂಚನೆ ನೀಡಿತ್ತು. ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ರಾಜೇಶ್ ಗೌಡ ಅವರವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ರಾಜೇಶ್ ಗೌಡ ಅವರು ಯಾವುದೇ ಪ್ರಮುಖ ಆದೇಶಗಳಿಗೆ ಸಹಿಹಾಕುವಂತಿಲ್ಲ ಎಂದು ಹೇಳಿತ್ತು.
ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆಯೂ ಸುಪ್ರೀಂಕೋರ್ಟ್ ತೀವ್ರ ವಾಗ್ದಾಳಿ ನಡೆಸಿದೆ. ಬಿಡಿಎ ಕಾರ್ಯದರ್ಶಿ, ಉಪ ಕಾರ್ಯದರ್ಶಿಯನ್ನು ಬದಲಿಸುವಂತೆ ಸೂಚನೆ ನೀಡಿದೆ. ಕಾರಂತ ಬಡಾವಣೆ ಲೋಪದೋಷಗಳ ಸಂಬಂಧ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸಮಿತಿಯ ಕಾರ್ಯಗಳ ಪ್ರಗತಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಹಾಗೂ ಸಂಚೀಜ್ ಖನ್ನಾ ಅವರಿದ್ದ ನ್ಯಾಯಪೀಠವು ಆಯುಕ್ತರ ಬದಲಾವಣೆಗೆ ಸೂಚನೆ ನೀಡಿತ್ತು.
ಬಿಡಿಎ ಆಯುಕ್ತರಿಂದ ಪ್ರಾಧಿಕಾರಕ್ಕೆ ಆರ್ಥಿಕವಾಗಿ ನಷ್ಟವಾಗಿದೆ. ಆರ್ಎಂವಿ 2ನೇ ಹಂತದಲ್ಲಿ ಇವರು ಹಂಚಿಕೆ ಮಾಡಿರುವ ನಿವೇಶನಗಳು ₹ 10 ಕೋಟಿಯವರೆಗೆ ಬೆಲೆ ಬಾಳುತ್ತವೆ. ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಸಾರ್ವಜನಿಕ ಹರಾಜಿನ ಮೂಲಕ ನಿವೇಶನಗಳ ಹಂಚಿಕೆ ಮಾಡಬೇಕಿತ್ತು’ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ಹೇಳಿದೆ. ‘ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಇಂದಿನಿಂದ ಯಾವುದೇ ಪ್ರಮುಖ ಆದೇಶಗಳಿಗೆ ಸಹಿ ಹಾಕುವುಂತಿಲ್ಲ. ಅವರನ್ನು ಆ ಸ್ಥಾನದಿಂದ ಬದಲಿಸಬೇಕು. ಅವರಿಗೆ ಸುಪ್ರೀಂಕೋರ್ಟ್ ಬಗ್ಗೆಯೂ ಗೌರವವಿಲ್ಲ’ ಎಂದು ನ್ಯಾಯಪೀಠವು ಕಠಿಣ ಪದಗಳಲ್ಲಿ ತಾಕೀತು ಮಾತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:10 pm, Sat, 27 August 22