ಬೆಂಗಳೂರು: ಚಾಮರಾಜಪೇಟೆ (Chamrajpet) ಈದ್ಗಾ ಮೈದನದಲ್ಲಿ (Idgah Maidan) ಗಣೇಶೋತ್ಸವಕ್ಕೆ (Ganesh Chaturthi) ಅನುಮತಿ ನೀಡುವ ಕುರಿತು ಆಗಸ್ಟ್ 30ರಂದು ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್ ಅಶೋಕ (R Ashok) ಬೆಂಗಳೂರಿನಲ್ಲಿ ಹೇಳಿದ್ದಾರೆ. ಚಾಮರಾಜಪೇಟೆ ಈದ್ಗಾ ಮೈದನದಲ್ಲಿ ಗಣೇಶೋತ್ಸವ ವಿಚಾರವಾಗಿ ಚಾಮರಾಜಪೇಟೆ ಮೈದಾನಕ್ಕೆ ಸಚಿವ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್, ಪಶ್ಚಿಮ ವಲಯ ಡಿಸಿಪಿ ಲಕ್ಷ್ಮಣ ಭೇಟಿ ನೀಡಿದರು.
ಈ ವೇಳೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ, ಮೈದಾನದಲ್ಲಿ ಗಣೇಶ ಪ್ರತಿಷ್ಠಾಪಿಸಲು ಅನುಮತಿ ಕೋರಿ ಮನವಿ ಸಲ್ಲಿಸಿದ್ದರು. ಬಳಿಕ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಜೊತೆ ಸಭೆ ನಡೆಸಿ ಮಾತನಾಡಿದ ಅವರು ಸದ್ಯ ಕಂದಾಯ ಇಲಾಖೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯ ಮೈದಾನ ಕಂದಾಯ ಜಾಗ ಅಂತ ಇದೆ. ಈಗಾಗಲೇ ಸುಪ್ರಿಂ ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆಗೆ ಸೂಚನೆ ಕೊಟ್ಟಿದೆ. ಮೈದಾನದ ಒಳಗೆ ಶೌಚಾಲಯ, ಅಶ್ವತ್ಥಕಟ್ಟೆ ಇದೆ. ಸದ್ಯಕ್ಕೆ ಮೈದಾನದಲ್ಲಿ ಉತ್ಸವಕ್ಕೆ ಐವರು ಸಂಘಟನೆಗಳಿಂದ ಮನವಿ ಬಂದಿವೆ. ಚಾಮರಾಜಪೇಟೆ ನಾಗರಿಕರ ಒಕ್ಕೂಟ ಜೊತೆ ಸ್ಥಳೀಯ ಸಂಸ್ಥೆಗಳೂ ಮನವಿ ಕೊಟ್ಟಿವೆ ಎಂದರು.
ಈಗಾಗಲೇ ಗಣೇಶ ಉತ್ಸವಕ್ಕೆ ಅವಕಾಶ ಕೋರಿದ್ದ ಸಂಘಟನೆಗಳ ಜೊತೆ ಮಾತುಕತೆ ನಡೆಸಿದ್ದೇನೆ. ಸಾರ್ವಜನಿಕ ಜಾಗ ಆಗಿರೋದ್ರಿಂದ ಗಣೇಶ ಕೂರಿಸೋದೇ ಉದ್ದೆಶ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂದಿದೆ. ಯಾರೇ ಗಣೇಶ ಕೂರಿಸಿದರೆ ನಮ್ಮ ಒಪ್ಪಿಗೆ ಇದೆ ಎಂಬ ಮಾತೂ ಕೇಳಿ ಬಂದಿದೆ. ಸದ್ಯ ಕಂದಾಯ ಇಲಾಖೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದರು.
ಸೋಮವಾರ ವಕ್ಫ್ ಬೋರ್ಡ್ ಮೇಲ್ಮನವಿ ಸಲ್ಲಿಸೋ ಸಾಧ್ಯತೆ ಇದೆ. ಈಗಾಗಲೇ ಕಂದಾಯ ಇಲಾಖೆ ಸುಪ್ರಿಂಗೆ ಕೆವಿಟ್ ಹಾಕಿದೆ. ನ್ಯಾಯಲಯದ ಆದೇಶ ಹಾಗೂ ಒಕ್ಕೂಟದ ನಡುವೆ ನಾವು ಚಕ್ರವ್ಯೂಹದಲ್ಲಿ ನಿಂತಿದ್ದೀವಿ. ಅದರಿಂದ ಆದಷ್ಟು ಬೇಗ ಹೊರಬರ್ತೀವಿ. ವಿಘ್ನಗಳನ್ನ ನಿವಾರಣೆ ಮಾಡುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಂದು ವೇಳೆ ಗಣೇಶ ಕೂರಿಸೋದೇ ಆದರೆ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ. ಸರ್ಕಾರನೇ ಗಣೇಶೋತ್ಸವ ಮಾಡಿದರೆ ಮಾಡಲಿ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿಬಂದಿದೆ. ಇನ್ನೂ ಸಂಘ ಸಂಸ್ಥೆಗಳು ಮನವಿ ಕೊಡುತ್ತೇವೆ ಅಂತ ಹೇಳಿದ್ದಾರೆ. ಸಾವಿರ ಅರ್ಜಿಗಳು ಬರಲಿ ನಾವು ಪರಿಶೀಲನೆ ಮಾಡುತ್ತೇವೆ. ಯಾರು ಅರ್ಜಿ ಸಲ್ಲಿಸುತ್ತಾರೋ ಅವರ ಪೂರ್ವಾಪರ ಅರಿತು ಅನುಮತಿ ನೀಡುತ್ತವೆ ಎಂದು ತಿಳಿಸಿದ್ದಾರೆ.
ಅಳೆದು ತೂಗಿ ಕಂದಾಯ ಇಲಾಖೆ ಅಂತಿಮ ತೀರ್ಮಾನ ಮಾಡಲಾಗುವುದು. ಇಷ್ಟೇ ಪೆಂಡಾಲ್ ಇರಬೇಕು. ಡೆಕೋರೇಷನ್ ಹೀಗೇ ಇರಬೇಕು. ಸುಗಮ ಸಂಗೀತ, ದೇವರ ಹಾಡು ಇರಬೇಕು, ಈ ಎಲ್ಲಾ ಕಂಡೀಷನ್ ಆಧಾರದ ಮೇಲೆ ಅನುಮತಿ ನೀಡುತ್ತೇವೆ. ನಗರದಲ್ಲಿ ಗಣೇಶೋತ್ಸವದ ಭದ್ರತೆ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಭೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Sat, 27 August 22