ಕೋಮುಗಲಭೆಗೆ ಯತ್ನ ವಿಚಾರ: ಬಿಕೆ ಹರಿಪ್ರಸಾದ್‌ ವಿರುದ್ಧ ದೂರು ಸ್ವೀಕರಿಸುವಂತೆ ಪುನೀತ್ ಕೆರೆಹಳ್ಳಿ ಪಟ್ಟು

| Updated By: ಗಂಗಾಧರ​ ಬ. ಸಾಬೋಜಿ

Updated on: Jan 07, 2024 | 10:09 PM

ಕೋಮುಗಲಭೆ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂಬ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ವಿರುದ್ಧ ರಾಷ್ಟ್ರರಕ್ಷಣಾ ಪಡೆ ಮುಖಂಡ ಪುನೀತ್ ಕೆರೆಹಳ್ಳಿ ದೂರು ನೀಡಲು ಮುಂದಾಗಿದ್ದು, ಆದರೆ ಬಸವನಗುಡಿ ಠಾಣೆಯ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ಹೀಗಾಗಿ ಠಾಣೆ ಎದುರು ಧರಣಿ ನಡೆಸಿರುವ ಪುನೀತ್ ಕೆರೆಹಳ್ಳಿ ಬಸವನಗುಡಿ ಠಾಣೆಯಲ್ಲಿ ದೂರು ಸ್ವೀಕರಿಸುವಂತೆ ಪಟ್ಟು ಹಿಡಿದಿದ್ದಾರೆ.

ಬೆಂಗಳೂರು, ಜನವರಿ 07: ಬಿ.ಕೆ.ಹರಿಪ್ರಸಾದ್‌ ಪೋಸ್ಟ್‌ ವಿಚಾರವಾಗಿ ರಾಷ್ಟ್ರರಕ್ಷಣಾ ಪಡೆ ಮುಖಂಡ ಪುನೀತ್ ಕೆರೆಹಳ್ಳಿ (Puneeth Kerehalli) ನೀಡಿದ್ದ ದೂರು ಪಡೆದ ಬೆಂಗಳೂರಿನ ಬಸವನಗುಡಿ ಪೊಲೀಸರು ಎನ್‌ಸಿಆರ್ ದಾಖಲಿಸಿದ್ದಾರೆ. ಗಲಭೆ ಸೃಷ್ಟಿಸಲು ಪುನೀತ್ ಕೆರೆಹಳ್ಳಿಯನ್ನು ಬಿಜೆಪಿ ಬಳಸುತ್ತಿದೆ ಎಂದಿದ್ದರು. ಕೋಮುಗಲಭೆ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂಬ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪ ವಿರುದ್ಧ ರಾಷ್ಟ್ರರಕ್ಷಣಾ ಪಡೆ ಮುಖಂಡ ಪುನೀತ್ ಕೆರೆಹಳ್ಳಿ ದೂರು ನೀಡಲು ಮುಂದಾಗಿದ್ದರು. ಆದರೆ ಬಸವನಗುಡಿ ಠಾಣೆಯ ಪೊಲೀಸರು ಮೊದಲಿಗೆ ದೂರು ಸ್ವೀಕರಿಸಲು ನಿರಾಕರಿಸಿದ್ದರು. ಸೈಬರ್ ಠಾಣೆಗೆ ದೂರು ನೀಡುವಂತೆ ಪೊಲೀಸರು ಸೂಚಿಸಿದ್ದು, ಠಾಣೆ ಎದುರು ಧರಣಿ ನಡೆಸಿರುವ ಪುನೀತ್ ಕೆರೆಹಳ್ಳಿ ಬಸವನಗುಡಿ ಠಾಣೆಯಲ್ಲಿ ದೂರು ಸ್ವೀಕರಿಸುವಂತೆ ಪಟ್ಟು ಹಿಡಿದಿದ್ದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ನಂಬರ್​ನ ಸ್ಕ್ರೀನ್ ಶಾಟ್​ವೊಂದನ್ನ ಬಳಸಿ ಕೋಮು ಗಲಭೆ ಸೃಷ್ಟಿಸುವುದಕ್ಕೆ ಪುನೀತ್ ಕೆರೆಹಳ್ಳಿಯನ್ನ ಬಿಜೆಪಿ ಬಳಸುತ್ತಿದೆ ಎಂದು ಹಾಕಿದ್ದರು. ಆ ಸ್ಕ್ರೀನ್ ಶಾಟ್ ನಕಲಿ ಎಂದು ಹೇಳಿದ್ದಾರೆ.

ಅದು ಎಲ್ಲಿದೆ ಅದನ್ನ ತೋರಿಸಲಿ. ನನ್ನ ಮೊಬೈಲ್ ಪರಿಶೀಲನೆ ಮಾಡಿ. ಯಾರ ಮೊಬೈಲ್​ನಲ್ಲಿ ಆ ಸ್ಕ್ರೀನ್ ಶಾಟ್ ತೆಗೆದಿರಿ. ಯಾಕೆ ಸುಳ್ಳು ಸುದ್ದಿಯನ್ನ ಹಬ್ಬಿಸುತ್ತಿದ್ದಾರೆ. ಗೋಧ್ರಾ ಬಗ್ಗೆ ಹೇಳಿಕೆ ಕೊಟ್ಟ ಮೇಲೆ ಈ ರೀತಿ ಪೋಸ್ಟ್ ಮಾಡಿದ್ದಾರೆ. ರಾಮ ಮಂದಿರಕ್ಕೆ ಹೋಗುವವರು ಭಯ ಪಡಬೇಕು ಎಂದು ಈ ತರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಎಫ್ಐಆರ್ ಹಾಕುವವರೆಗೂ ನಾನು ಬಿಡಲ್ಲ

ಶ್ರೀಕಾಂತ್ ಪೂಜಾರಿ ಹಳೇ ಕೇಸ್ ಓಪನ್ ಆಗುತ್ತೆ. ದತ್ತಪೀಠ ಕೇಸ್​​ ರೀ ಓಪನ್ ಆಗುತ್ತೆ. ಈಗ ನನ್ನ ಮೇಲೆ ಆರೋಪ ಬರುತ್ತೆ. ಇದೆಲ್ಲವನ್ನೂ ಹಿಂದೂ ಕಾರ್ಯಕರ್ತರನ್ನ ಭಯ ಪಡಿಸುತ್ತಿದೆ. ದೂರು ಕೊಟ್ಟಿದ್ದೇವೆ. ಆದರೆ ಎಫ್ಐಆರ್ ಹಾಕುವುದಕ್ಕೆ ಮೀನಾಮೇಷವೆಣಿಸುತ್ತಿದ್ದಾರೆ. ಪ್ರತಿಯೊಂದಕ್ಕೂ ಕೋರ್ಟ್​​ಗೆ ಹೋಗುವುದಕ್ಕೆ ಆಗಲ್ಲ. ಎಫ್ಐಆರ್ ಹಾಕುವವರೆಗೂ ನಾನು ಬಿಡಲ್ಲ. ನನ್ನನ್ನ ಭಯೋತ್ಪಾದಕ ಅಂತೀರಾ ನಾಚಿಕೆ ಆಗಲ್ವಾ? ಡಿಜೆ ಹಳ್ಳಿಯಲ್ಲಿ ನಿಮ್ಮ ಅಣ್ಣ ತಮ್ಮಂದಿರು ಮಾಡಿರುವ ಕೆಲಸ. ನನ್ನನ್ನ ಯಾಕೆ ನೀವು ಮತಾಂಧ ಅಂತೀರಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕೋಮುಗಲಭೆಗೆ ಯತ್ನ; ಪುನೀತ್ ಕೆರೆಹಳ್ಳಿ ವಿರುದ್ಧ ಕಾಂಗ್ರೆಸ್​ನಿಂದ ದೂರು

ಕೋಮುಗಲಭೆ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ಕಾಂಗ್ರೆಸ್​​ ಪುನೀತ್​ ಕೆರೆಹಳ್ಳಿ ವಿರುದ್ಧ ದೂರು ದಾಖಲಿಸಿದೆ. ಈ ಕುರಿತಾಗಿ ಟ್ವೀಟ್​ ಮಾಡಿರುವ ಬಿ.ಕೆ.ಹರಿಪ್ರಸಾದ್, ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಕೋಮು ಗಲಭೆ ಸೃಷ್ಟಿಸಿ, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸಕ್ಕೆ ಬಿಜೆಪಿ ಪಕ್ಷ ತನ್ನ ಸಹೋದರ ಸಂಘಟನೆಗಳಿಗೆ ಅಣಿಗೊಳಿಸುತ್ತಿರುವುದು ಬಹಿರಂಗವಾಗುತ್ತಿದೆ.


ರೌಡಿ ಶೀಟರ್ ಆಗಿರುವ ಪುನೀತ್ ಕೆರೆಹಳ್ಳಿ ಎಂಬ ಮತಾಂಧನಿಗೆ ಬಿಜೆಪಿಯಿಂದ ಕೋಮು ಗಲಭೆ ನಡೆಸುವ ಫತ್ವಾ ಬಂದಿದೆ ಎಂದು ಸ್ವತಃ ತಾನೇ ಸೃಷ್ಟಿಸಿರುವ “ರಾಷ್ಟ್ರ ರಕ್ಷಣಾ ಪಡೆ” ಎಂಬ ವಾಟ್ಸಪ್ ಗ್ರೂಪಿನಲ್ಲಿ ಹೇಳಿಕೊಂಡಿದ್ದಾನೆ. ಕೋಮು ಗಲಭೆ ನಡೆಸಿ 2024ಕ್ಕೆ “ವಿಶ್ವಗುರುವನ್ನ” ಮತ್ತೆ ಪ್ರಧಾನಿಯಾಗಬೇಕೆಂದು ಈ ಭಯೋತ್ಪಾದಕರ ತಂಡ ಕೆಲಸ ಮಾಡಲಿದೆಯಂತೆ.

ರಾಜ್ಯದಲ್ಲಿ ಎಲ್ಲಿ? ಯಾವಾಗಾ? ಹೇಗಾದರೂ ಭಯೋತ್ಪಾದಕ ಕೃತ್ಯಗಳನ್ನ ನಡೆಸಲು ಸಂಚು ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ. ಇಂತಹ ಸಮಾಜಘಾತುಕರಿಗೆ ಇಡಿ ಬಿಜೆಪಿಯೇ ಬೆಂಬಲಕ್ಕೆ ನಿಂತಿರುವುದು ಜಗಜ್ಜಾಹೀರು. ಕೂಡಲೇ ಸರ್ಕಾರ ಇಂತಹ ಭಯೋತ್ಪಾದಕ ಶಕ್ತಿಗಳನ್ನ ಮಟ್ಟ ಹಾಕಬೇಕು. ರಾಜ್ಯದ ಆಂತರಿಕ ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿರುವವರ ಮೇಲೆ ರಾಷ್ಟ್ರದ್ರೋಹದ ಅಡಿಯಲ್ಲಿ ಕೇಸ್ ದಾಖಲಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:35 pm, Sun, 7 January 24