Azaan Controversy: ಮೈಕ್ ತೆರವಿಗೆ ಹಿಂದುತ್ವವಾದಿ ಸಂಘಟನೆಗಳ ಒತ್ತಾಯ, ಆದೇಶ ಹೊರಡಿಸುವ ಭರವಸೆ ಕೊಟ್ಟ ಸಿಎಂ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 10, 2022 | 7:32 AM

ಧಾರ್ಮಿಕ ಸ್ಥಳಗಳ ಮೈಕ್​ಗಳಿಂದ ಹೊಮ್ಮುವ ಧ್ವನಿಯು ಎಷ್ಟು ಡೆಸಿಬಲ್ ಇರಬೇಕು ಎನ್ನುವ ಬಗ್ಗೆ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ

Azaan Controversy: ಮೈಕ್ ತೆರವಿಗೆ ಹಿಂದುತ್ವವಾದಿ ಸಂಘಟನೆಗಳ ಒತ್ತಾಯ, ಆದೇಶ ಹೊರಡಿಸುವ ಭರವಸೆ ಕೊಟ್ಟ ಸಿಎಂ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಮಸೀದಿಗಳಲ್ಲಿ ಮೈಕ್ ಮೂಲಕ ಆಜಾನ್ ಕೂಗುವ ಪದ್ಧತಿಗೆ ಅಂತ್ಯ ಹಾಡಬೇಕು ಎಂದು ಆಗ್ರಹಿಸಿ ಹಿಂದುತ್ವವಾದಿ ಸಂಘಟನೆಗಳು ನಡೆಸುತ್ತಿರುವ ಅಭಿಯಾನ ಮಂಗಳವಾರ 2ನೇ ದಿನಕ್ಕೆ ಕಾಲಿಟ್ಟಿದೆ. ಬೆಂಗಳೂರು, ಮೈಸೂರು, ಗದಗ ಸೇರಿದಂತೆ ಹಲವು ನಗರಗಳ ದೇಗುಲಗಳಲ್ಲಿ ಮೈಕ್ ಮೂಲಕ ಸುಪ್ರಭಾತ ಹಾಕಲಾಯಿತು. ಕೆಲವೆಡೆ ಭಕ್ತರು ಭಜನೆ ಮಾಡಿದರು. ಆದರೆ ಚಿತ್ರದುರ್ಗ, ಬಾಗಲಕೋಟೆ, ಕಲಬುರ್ಗಿ, ಕೋಲಾರ ವಿಜಯಪುರ ಸೇರಿದಂತೆ ಹಲವು ನಗರಗಳಲ್ಲಿ ದೇಗುಲಗಳ ಕಡೆಗೆ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಬರಲಿಲ್ಲ. ಹೀಗಾಗಿ ಅಭಿಯಾನವೂ ಸದ್ದು ಮಾಡಲಿಲ್ಲ. ವಿವಾದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಧಾರ್ಮಿಕ ಸ್ಥಳಗಳ ಮೈಕ್​ಗಳಿಂದ ಹೊಮ್ಮುವ ಧ್ವನಿಯು ಎಷ್ಟು ಡೆಸಿಬಲ್ ಇರಬೇಕು ಎನ್ನುವ ಬಗ್ಗೆ ಆದೇಶ ಹೊರಡಿಸುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್, ರಾಜ್ಯದ ಶಾಂತಿ ಕದಡುವ ಸಂಘಟನೆಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿ ಓದಲು ಲಿಂಕ್ ಕ್ಲಿಕ್ ಮಾಡಿ

ಶೀಘ್ರ ಪ್ರತ್ಯೇಕ ಸರ್ಕಾರಿ ಆದೇಶ: ಸಿಎಂ

ಕರ್ನಾಟಕದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ದೃಷ್ಟಿಯಿಂದ ಶೀಘ್ರ ಪ್ರತ್ಯೇಕ ಸರ್ಕಾರಿ ಆದೇಶ ಹೊರಡಿಸಲಾಗುವುದು. ಈ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸಾರ್ವಜನಿಕ ಧ್ವನಿವರ್ಧಕ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಸ್ಪಷ್ಟವಾಗಿ ಇದೆ. ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶದಂತೆ ಧ್ವನಿವರ್ಧಕ ಬಳಕೆ ಬಗ್ಗೆ ಆಜ್ಞೆ ಮಾಡಿದೆ. ಕರ್ನಾಟಕ ಸರ್ಕಾರವೂ 2002ರಲ್ಲಿ ವಿಶೇಷ ಆದೇಶ ಮಾಡಿದೆ. ಇದರಲ್ಲಿ ಬಹಳ ಸ್ಪಷ್ಟವಾಗಿ ವಿವರ ಇದೆ. ಈ ಆದೇಶಗಳನ್ನು ಪಾಲಿಸಬೇಕೆಂದು ಸರ್ಕಾರ ನಿರ್ಧರಿಸಿದೆ. ಸರ್ಕಾರದ ಸೂಚನೆಗಳನ್ನು ಪ್ರತ್ಯೇಕ ಆದೇಶದ ಮೂಲಕ ತಿಳಿಸಲಾಗುವುದು ಎಂದು ಅವರು ತಿಳಿಸಿದರು.

ಮೈಕ್​ನಿಂದ ಹೊರಹೊಮ್ಮುವ ಧ್ವನಿಯ ಪ್ರಮಾಣ ಎಷ್ಟಿರಬೇಕು? ಅನುಷ್ಠಾನದ ಹೊಣೆಯು ಯಾವ ಸಂಸ್ಥೆ ಅಥವಾ ವ್ಯಕ್ತಿಗೆ ಇದೆ? ಪರವಾನಗಿ ಎಲ್ಲಿಂದ ಪಡೆದುಕೊಳ್ಳಬೇಕು ಎಂಬ ಬಗ್ಗೆಯೂ ಮಾಹಿತಿ ಇರುತ್ತದೆ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಮೈಕ್ ಬಳಕೆ ನಿಯಮಗಳನ್ನು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಅನುಸರಿಸುತ್ತಿವೆ ಎಂದು ಅವರು ಮಾಹಿತಿ ನೀಡಿದರು.

ಶಾಂತಿ ಕದಡುವ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸಿ: ಡಿ.ಕೆ.ಸುರೇಶ್

ರಾಮನಗರ: ರಾಜ್ಯದಲ್ಲಿ ಅಶಾಂತಿ ಉಂಟುಮಾಡಲು ಹೊರಟಿರುವ ಸಂಘಟನೆ ಮತ್ತು ವ್ಯಕ್ತಿಗಳ ವಿರುದ್ಧ ಸರ್ಕಾರ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದರು. ಚನ್ನಪಟ್ಟಣ ತಾಲ್ಲೂಕು ಕೂಡ್ಲಲೂರು ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಾಂತಿ ಬೇಡ, ಅಶಾಂತಿ ಬೇಕು ಎನ್ನುವುದಾದರೇ ಅವರು ಹೇಳುವುದು ಸರಿ. ಆದರೆ ಇದು ಶಾಂತಿ ಬಯುಸುವ ನಾಡು. ರಾಜ್ಯವನ್ನು ಯಾವುದೋ ಒಬ್ಬ ವ್ಯಕ್ತಿ ಅಥವಾ ಸಂಘಟನೆಯ ಕೈಗೆ ಕೊಟ್ಟಿಲ್ಲ. ರಾಜ್ಯದಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡುವ ಪಿತೂರಿ ನಡೆಯುತ್ತಿದೆ. ಈ ಬಗ್ಗೆ ಕೂಡಲೇ ಸೂಕ್ತ ಕ್ರಮತೆಗೆದುಕೊಳ್ಳಬೇಕು. ಶ್ರೀರಾಮಸೇನೆ, ಸರ್ಕಾರ ಅಣ್ಣತಮ್ಮಂದಿರಿದ್ದಂತೆ ಎಂದು ದೂರಿದರು.

ಮುಂದಿನ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡೇ ಶಾಂತಿ ಕದಡುವ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ರಾಜ್ಯಪಾಲರು ಅಥವಾ ಪ್ರಧಾನಿ ಮಧ್ಯಪ್ರವೇಶ ಮಾಡಬೇಕು. ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಘಟನಾವಳಿಗಳ ಹಿಂದೆ ಸರ್ಕಾರದ ಯಂತ್ರವೇ ಇದೆ. ಇದು ಸರ್ಕಾರ ಹಾಗೂ ಸರ್ಕಾರದ ಅಂಗ ಸಂಸ್ಥೆಗಳು ನಡೆಸುತ್ತಿರುವ ಪಿತೂರಿ ಎಂದು ದೂರಿದರು.

ಬೆಂಗಳೂರು: ದೇಗುಲ ಸಮೀಪ ಭದ್ರತೆ

ರಾಜ್ಯಾದ್ಯಂತ ಸುಪ್ರಭಾತ ಅಭಿಯಾನದ ಎರಡನೇ ದಿನದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವೇಕನಗರದಲ್ಲಿ ಮಸೀದಿ ಸಮೀಪವೇ ಇರುವ ಜಯ ಆಂಜನೇಯ ದೇಗುಲ ಬಳಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ನಿನ್ನೆ ಪೊಲೀಸರು ಸುಪ್ರಭಾತಕ್ಕೆ ಅವಕಾಶ ನೀಡಿರಲಿಲ್ಲ. ಸುಪ್ರಭಾತ ಹಾಕಲು ಮುಂದಾಗಿದ್ದ ಶ್ರೀರಾಮಸೇನೆಯ ಹಲವರನ್ನು ವಶಕ್ಕೆ ಪಡೆದಿದ್ದರು.

ಚಿತ್ರದುರ್ಗ: ಮೊಳಗಲಿಲ್ಲ ಸುಪ್ರಭಾತ

ಆಜಾನ್ ವಿರುದ್ಧ ಶ್ರೀರಾಮಸೇನೆ ಕರೆ ನೀಡಿರುವ ಸುಪ್ರಭಾತ ಅಭಿಯಾನಕ್ಕೆ ಜಿಲ್ಲೆಯಲ್ಲಿ ಹೇಳಿಕೊಳ್ಳುವಂಥ ಸ್ಪಂದನೆ ವ್ಯಕ್ತವಾಗಿಲ್ಲ. ಅಭಿಯಾನದ 2ನೇ ದಿನವೂ ಸುಪ್ರಭಾತ, ಹನುಮಾನ್ ಚಾಲೀಸಾ ಮೊಳಗಲಿಲ್ಲ. ಬಹುತೇಕ ದೇಗುಲಗಳಲ್ಲಿ ಎಂದಿನಂತೆ ಪೂಜೆ, ಅರ್ಚನೆ, ಭಕ್ತಿಗೀತೆ ಹಾಕಲಾಗಿತ್ತು.

ಇದನ್ನೂ ಓದಿ: ಆಜಾನ್​ಗೆ ಪ್ರತಿಯಾಗಿ ಹನುಮಾನ್ ಚಾಲೀಸಾ ಪಠಣೆ ವಿಚಾರ: ಪೊಲೀಸ್ ಸಭೆಯಲ್ಲಿ ಅಧಿಕಾರಿಗಳಿಗೆ ಕೆಲ ನಿರ್ದಿಷ್ಟ ಸೂಚನೆ ನೀಡಿದ ಸಿಎಂ ಬೊಮ್ಮಾಯಿ

ಇದನ್ನೂ ಓದಿ: ಆಜಾನ್ ವಿರುದ್ಧ ಮಂತ್ರ ಪಠಣ: ಅವರವರ ಧರ್ಮಕ್ಕೆ ಅವರವರು ಗೌರವ ಕೊಡಬೇಕು: ಡಿ.ಕೆ.ಶಿವಕುಮಾರ್

Published On - 7:32 am, Tue, 10 May 22