
ಬೆಂಗಳೂರು, ಜನವರಿ 06: ಬೆಂಗಳೂರು ನಗರದ ವಾಯು ಗುಣಮಟ್ಟ ಮತ್ತೆ ಆತಂಕದ ಹಂತಕ್ಕೆ ತಲುಪುತ್ತಿದೆ. ಇಂದಿನ ವಾಯು ಗುಣಮಟ್ಟ ಸೂಚ್ಯಂಕ (Bengaluru Air Quality) 184 ದಾಖಲಾಗಿದ್ದು, WHO ಪ್ರಕಾರ ಈ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ. ನಗರದ ಹಲವು ಭಾಗಗಳಲ್ಲಿ ಇದಕ್ಕೂ ಕಳಪೆ ಏರ್ ಕ್ವಾಲಿಟಿ ಕಂಡುಬರುತ್ತಿರುವುದು ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿರುವ ಸೂಚನೆಯಾಗಿದೆ.
PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ.
ಇಂದಿನ ಅಂಕಿಅಂಶಗಳ ಪ್ರಕಾರ PM2.5 ಪ್ರಮಾಣ 103 ಆಗಿದ್ದು, PM10 144ಕ್ಕೆ ಏರಿಕೆಯಾಗಿದೆ. ಈ ಕಣಗಳು ನೇರವಾಗಿ ಉಸಿರಾಟ ವ್ಯವಸ್ಥೆಗೆ ಹೊಡೆತ ನೀಡುತ್ತವೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.
ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಳ, ನಿರಂತರ ನಿರ್ಮಾಣ ಕಾಮಗಾರಿಗಳು ಹಾಗೂ ಗಾಳಿಯ ಚಲನೆ ಕಡಿಮೆಯಾಗಿರುವುದು ಮಾಲಿನ್ಯ ಕಣಗಳು ವಾತಾವರಣದಲ್ಲೇ ಸಿಲುಕಿಕೊಳ್ಳಲು ಕಾರಣವಾಗುತ್ತಿವೆ. ಪರಿಣಾಮ, ಹೊರಗೆ ಕಾಣುವ ಸ್ವಚ್ಛ ಆಕಾಶದ ಹಿಂದೆ ಕಣ್ಣಿಗೆ ಕಾಣದ ಅಪಾಯಕರ ಗಾಳಿ ಅಡಗಿಕೊಂಡಿದೆ. ವಿಶೇಷವಾಗಿ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಗಾಳಿಯ ಗುಣಮಟ್ಟ ಇನ್ನಷ್ಟು ಕುಸಿಯುತ್ತಿದ್ದು, ಮಕ್ಕಳು, ಹಿರಿಯ ನಾಗರಿಕರು ಹಾಗೂ ಉಸಿರಾಟ ಸಮಸ್ಯೆ ಇರುವವರು ಹೆಚ್ಚಿನ ಅಪಾಯಕ್ಕೆ ಒಳಗಾಗುತ್ತಿದ್ದಾರೆ. ದೀರ್ಘಕಾಲ ಇದೇ ಸ್ಥಿತಿ ಮುಂದುವರಿದರೆ ಆರೋಗ್ಯ ಸಮಸ್ಯೆಗಳು ಹೆಚ್ಚುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.