
ಬೆಂಗಳೂರು, ಜನವರಿ 19: ಬೆಂಗಳೂರಿನ ಗಾಳಿಯ ಗುಣಮಟ್ಟದಲ್ಲಿ (Bengaluru Air Quality) ಹಲವು ದಿನಗಳಿಂದ ಏರು ಪೇರಾಗುತ್ತಲೇ ಇದೆ. ಒಮ್ಮೊಮ್ಮೆ 200ರ ಗಡಿ ದಾಟುವ AQI, ನಗರವಾಸಿಗಳಲ್ಲಿ ಆತಂಕ ಸೃಷ್ಟಿಸುತ್ತಿದೆ. ಇದರ ಜೊತೆಗೆ ಮಂಗಳೂರಿನಲ್ಲೂ ಇಂದು ವಾಯು ಗುಣಮಟ್ಟ ಕಳಪೆಯಾಗಿದ್ದು, ಇದರಿಂದ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಉಸಿರಾಟ ಸಮಸ್ಯೆ ಇರುವವರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಬೆಂಗಳೂರಿನ ಗಾಳಿಯ ಗುಣಮಟ್ಟ 169 ಇದ್ದು, ಏರ್ ಕ್ವಾಲಿಟಿ ಅನಾರೋಗ್ಯಕಾರಿ ಹಂತದಲ್ಲೇ ಇದೆ. ಅದರೊಂದಿಗೆ ಮಂಗಳೂರಿನ ಗಾಳಿಯಗುಣಮಟ್ಟ 185ಕ್ಕೆ ತಲುಪಿದ್ದು, ತೀರಾ ಕಳಪೆ ಮಟ್ಟಕ್ಕೆ ಕುಸಿದಿದೆ. ನಗರದಲ್ಲಿ PM2.5 ಮಟ್ಟ 84 ಹಾಗೂ PM10 ಮಟ್ಟ 116ಕ್ಕೆ ಏರಿಕೆಯಾಗಿದೆ. ಈ ಎರಡೂ ಪ್ರಮಾಣಗಳು ಸುರಕ್ಷಿತ ಮಿತಿಯನ್ನು ಮೀರಿದ್ದು, ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮಟ್ಟದಲ್ಲಿವೆ.
ವಿಶೇಷವಾಗಿ PM2.5 ಸೂಕ್ಷ್ಮ ಕಣಗಳು ಶ್ವಾಸಕೋಶದ ಆಳಕ್ಕೆ ಪ್ರವೇಶಿಸಿ ಉಸಿರಾಟದ ತೊಂದರೆ, ಆಸ್ತಮಾ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ವಾಹನಗಳ ಅತಿಯಾದ ಬಳಕೆ, ನಿರ್ಮಾಣ ಕಾರ್ಯಗಳಿಂದ ಉಂಟಾಗುವ ಧೂಳು, ಕೈಗಾರಿಕಾ ಉತ್ಸರ್ಜನೆ ಮತ್ತು ಹವಾಮಾನದಲ್ಲಿ ಗಾಳಿಯ ಚಲನೆಯ ಕೊರತೆ ಈ ಪರಿಸ್ಥಿತಿಗೆ ಪ್ರಮುಖ ಕಾರಣಗಳಾಗಿವೆ. ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಮಾಲಿನ್ಯ ಪ್ರಮಾಣ ಇನ್ನಷ್ಟು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.