ಪತ್ನಿಯನ್ನೇ ಅಕ್ಕ ಎಂದು ಪರಿಚಯಿಸಿ ಮತ್ತೊಬ್ಬಳಿಗೆ ಗಾಳ! ಬರೋಬ್ಬರಿ 1.53 ಕೋಟಿ ರೂ. ವಂಚನೆ
ಆಕೆಗೆ ಮದುವೆ ಮಾಡಬೇಕು ಎಂದು ಮ್ಯಾಟ್ರಿಮೋನಿಯಲ್ಲಿ ವರನ ಹುಡುಕಾಟ ನಡೆದಿತ್ತು. ಈ ವೇಳೆ ಪರಿಚಯವಾದ ವ್ಯಕ್ತಿಯೊಬ್ಬ ಆಕೆಯ ಪ್ರೊಫೈಲ್ ಲೈಕ್ ಮಾಡಿ ಮದುವೆ ಆಮಿಷವೊಡ್ಡಿದ್ದ. ಶ್ರೀಮಂತ ಎಂದು ಬಿಂಬಿಸಿಕೊಂಡಿದ್ದ ಆತ ಹೆಂಡತಿಯನ್ನೇ ಅಕ್ಕ ಎಂದು ಪರಿಚಿಸಿ ನಂಬಿಸಿದ್ದಲ್ಲದೆ, ಕೋರ್ಟು, ಕೇಸು ಎಂದೆಲ್ಲ ಕಥೆ ಕಟ್ಟಿ ಕೋಟ್ಯಂತರ ಹಣ ಪಡೆದು ವಂಚಿಸಿದ್ದಾನೆ.

ಬೆಂಗಳೂರು, ಜನವರಿ 19: ಆ ಯುವತಿ ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್. ಒಳ್ಳೆ ಕೆಲಸ, ಕೈ ತುಂಬ ಸಂಬಳ ಬರುತ್ತಿದ್ದು, ಮನೆಯವರು ಮದುವೆ ಮಾಡಬೇಕು ಎಂದು ತೀರ್ಮಾನಿಸಿದ್ದರು. ಅದರಂತೆ ಒಕ್ಕಲಿಗ ಮ್ಯಾಟ್ರಿಮೋನಿಯಲ್ಲಿ ವರನ ಹುಡುಕಾಟ ನಡೆಸಿದಾಗ ವ್ಯಕ್ತಿಯೊಬ್ಬ ಆಕೆಯ ಪ್ರೊಫೈಲ್ ಇಷ್ಟಪಟ್ಟು ಪರಿಚಯ ಮಾಡಿಕೊಂಡಿದ್ದ. ನಂತರ ಮನೆಯವರನ್ನು ಭೇಟಿ ಮಾಡಿಸಿ ಮದುವೆಯಾಗಲು ನಿರ್ಧರಿಸಿದ್ದ ಆತ, ಮದುವೆ ಹೆಸರಲ್ಲಿ ಯುವತಿಯಿಂದ ಕೋಟ್ಯಂತರ ರೂ. ಹಣ ಪಡೆದು ವಂಚಿಸಿದ್ದಾನೆ. ಬೆಂಗಳೂರಿನ (Bangalore) ಕೆಂಗೇರಿ ಮೂಲದ ವಿಜಯ್ ರಾಜ್ ಗೌಡ ಎಂಬಾತನೇ ವಂಚನೆ ಎಸಗಿದ ಆಸಾಮಿಯಾಗಿದ್ದಾನೆ.
ವಿಜಯ್ ರಾಜ್ ಗೌಡ ತಾನೊಬ್ಬ ಕೋಟ್ಯಾಧೀಶ, 715 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಪರಿಚಯಿಸಿಕೊಂಡಿದ್ದ. ಆಸ್ತಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಲ್ಲಿ (ಇ.ಡಿ) ಕೇಸಿದ್ದು, ಅಕೌಂಟ್ ಸಮಸ್ಯೆ ಆಗಿದೆ ಎಂದು ಹೇಳಿಕೊಂಡು ಯುವತಿ ಬಳಿ ಹಣ ಕೇಳಲು ಶುರು ಮಾಡಿದ್ದ. ಮೊದಲಿಗೆ 15 ಸಾವಿರ ರೂ. ಹಣ ಪಡೆದಿದ್ದ ವಿಜಯ್, ನಂತರ ಇಬ್ಬರು ಒಟ್ಟಿಗೆ ಬ್ಯುಸಿನೆಸ್ ಮಾಡೋಣ ಎಂದು ಯುವತಿ ಹೆಸರಲ್ಲಿ ಲೋನ್ ಮಾಡಿಸಿದ್ದ. ಜೊತೆಗೆ ಯುವತಿ ಸ್ನೇಹಿತರು, ಸಂಬಂಧಿಗಳಿಂದ ಲಕ್ಷ ಲಕ್ಷ ಹಣ ಸಾಲ ಪಡೆದಿದ್ದ.
ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿದ್ದ ಆಸಾಮಿ!
ಮದುವೆ ಮಾತುಕತೆ ಎಂದು ಸಂತ್ರಸ್ತೆ ಯುವತಿಯನ್ನು ಕೆಂಗೇರಿಗೆ ಕರೆಸಿದ್ದ ಆಸಾಮಿ ತನ್ನ ಕುಟುಂಬದವರನ್ನು ಪರಿಚಯ ಮಾಡಿಕೊಟ್ಟಿದ್ದ. ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿದ್ದು, ತಂದೆ ತಹಶೀಲ್ದಾರ್ ಎಂದಿದ್ದ. ಇಷ್ಟೆಲ್ಲಾ ಕಥೆ ಕಟ್ಟಿ ಕೋರ್ಟ್ ಕೇಸ್ ಇದೆ ಎಂದು ಮತ್ತಷ್ಟು ಹಣ ವಸೂಲಿ ಮಾಡಿದ್ದ ಎಂಬ ಆರೋಪ ಇದೆ.
1.72 ಕೋಟಿ ರೂ. ವಂಚನೆ
ಯುವತಿ ನೆಂಟರು, ಸ್ನೇಹಿತರು ಸೇರಿ ಹಲವರಿಂದ 1.72 ಕೋಟಿ ರೂ. ಹಣ ಪಡೆದಿದ್ದು, ಒಮ್ಮೆ 22 ಲಕ್ಷ ರೂ. ಹಣ ವಾಪಸ್ ಕೊಟ್ಟಿದ್ದ ಎನ್ನಲಾಗಿದೆ. ಅದರೆ ಉಳಿದ 1.53 ಕೋಟಿ ರೂ. ಹಣ ವಾಪಸ್ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದ. ವಿಜಯ್ ಕಳ್ಳಾಟದ ಬಗ್ಗೆ ಅನುಮಾನಗೊಂಡ ಯುವತಿ ಆತನ ಮನೆಗೆ ಹೋಗಿ ನೋಡಿದಾಗ ಅಸಲಿ ರಹಸ್ಯ ಬೆಳಕಿಗೆ ಬಂದಿದೆ. ವಿಜಯ್ಗೆ ಮದುವೆಯಾಗಿ ಮಗು ಇದ್ದು, ಹೆಂಡತಿಯನ್ನೇ ಅಕ್ಕ ಎಂದಿದ್ದು ಗೊತ್ತಾಗಿದೆ.
ಇದನ್ನೂ ಓದಿ: ಬಿಎಸ್ಸಿ ಓದಿ ಶೋಕಿಗಾಗಿ ಕಳವು: ಸಿನಿಮಾ ಸ್ಟೈಲ್ನಲ್ಲಿ ಖಾಕಿ ಬಲೆಗೆ ಬಿದ್ದ ಅಂತಾರಾಜ್ಯ ಕಳ್ಳ
ಸದ್ಯ ವಂಚನೆ ಬಗ್ಗೆ ಯುವತಿ ವೈಟ್ ಫೀಲ್ಡ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕೆಂಗೇರಿ ಠಾಣೆಗೆ ಪ್ರಕರಣ ವರ್ಗಾಯಿಸಿದ್ದಾರೆ. ಕೆಂಗೇರಿ ಪೊಲೀಸರು ವಿಜಯ್ ರಾಜ್, ಆತನ ತಂದೆ ಸೇರಿ ಮೂವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಆಸಾಮಿ ವಿಜಯ್ ರಾಜ್ ವಂಚನೆ ಬಗ್ಗೆ ಯುವತಿ ದಾಖಲೆಗಳನ್ನು ಸಂಗ್ರಹಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
