ಬಿಎಸ್ಸಿ ಓದಿ ಶೋಕಿಗಾಗಿ ಕಳವು: ಸಿನಿಮಾ ಸ್ಟೈಲ್ನಲ್ಲಿ ಖಾಕಿ ಬಲೆಗೆ ಬಿದ್ದ ಅಂತಾರಾಜ್ಯ ಕಳ್ಳ
ಮೈಸೂರಿನಲ್ಲಿ ಸರಣಿ ಮನೆಗಳ್ಳತನ ಎಸಗಿದ್ದ ಬಿಎಸ್‌ಸಿ ಕಂಪ್ಯೂಟರ್ ಸೈನ್ಸ್ ಪದವೀಧರ, ಅಂತಾರಾಜ್ಯ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಶೋಕಿಗಾಗಿ ಕಳ್ಳತನ ಮಾಡುತ್ತಿದ್ದ ಈತ, ಕೃತ್ಯಕ್ಕೂ ಮೊದಲು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ವಿಶೇಷ ತಂಡ ರಚಿಸಿದ್ದ ಮೈಸೂರು ಪೊಲೀಸರು ಆರೋಪಿಯನ್ನು ಹಾಸನದಲ್ಲಿ ಸಿನಿಮೀಯವಾಗಿ ಬಲೆಗೆ ಬೀಳಿಸಿದ್ದಾರೆ.

ಮೈಸೂರು, ಜನವರಿ 18: ಬಿಎಸ್ಸಿ ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ ಪಡೆದಿದ್ದರೂ ಶೋಕಿಗಾಗಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ದ್ವಾರಕಪುರಿ ವೆಂಕಟೇಶ್ವರ ರೆಡ್ಡಿ (34) ಬಂಧಿತ ಆರೋಪಿಯಾಗಿದ್ದು, ಸರಣಿ ಕಳ್ಳತನ ಮಾಡಿ ಜನರ ನೆಮ್ಮದಿ ಹಾಳು ಮಾಡಿದ್ದ ಐನಾತಿ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ. ಈತ ಆಂಧ್ರ ಪ್ರದೇಶದ ಡಾ. ಬಿ. ಆರ್. ಅಂಬೇಡ್ಕರ್ ಕೋಣಸೀಮದ ನಿವಾಸಿ. ವಿದ್ಯಾವಂತನಾಗಿದ್ದ ರೆಡ್ಡಿ ಯಾವುದಾದರೂ ಕಂಪನಿಗೆ ಸೇರಿ ಕೆಲಸ ಮಾಡುವ ಬದಲು, ಸುಲಭವಾಗಿ ಹಣ ಮಾಡುವದರ ಹಿಂದೆ ಬಿದ್ದಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಇತ್ತೀಚೆಗೆ ಮೈಸೂರಿನಲ್ಲಿ ಸರಣಿ ಮನೆಗಳ್ಳತನವಾಗಿತ್ತು. 2025ರ ಡಿಸೆಂಬರ್ 31ರಂದು ರಾಮಕೃಷ್ಣನಗರದ ವಾಸು ಬಡಾವಣೆಯ ಪ್ರೊ. ನಾಗಭೂಷಣ್ ಎಂಬುವರ ಮನೆ ಬೀಗ ಮುರಿದು 150 ಗ್ರಾಂ ಬೆಳ್ಳಿ ವಸ್ತುಗಳು, ಮನೆಗೆ ಅಳವಡಿಸಿದ್ದ 3 ಸಿಸಿ ಟಿವಿ ಕ್ಯಾಮರಗಳ ಕಳುವು ಮಾಡಲಾಗಿತ್ತು. ಅದೇ ದಿನ ರಾತ್ರಿ ಕುವೆಂಪುನಗರ ಹೆಚ್ ಬ್ಲಾಕ್ 5ನೇ ಮೇನ್, 1ನೇ ಕ್ರಾಸ್ ನಲ್ಲಿರುವ ಬ್ಯಾಂಕ್ ನಿವೃತ್ತ ನೌಕರ ಅನಂತ ಪದ್ಮನಾಭ ಅವರ ಮನೆಯ ಕಿಟಕಿ ಸರಳು ಮುರಿದು ಒಳನುಗ್ಗಿ 40 ಗ್ರಾಂ ತೂಕದ ಬೆಳ್ಳಿ ನಾಣ್ಯಗಳು ಹಾಗೂ 60,000 ರೂಪಾಯಿ ನಗದು ಕದಿಯಲಾಗಿತ್ತು.
ಮತ್ತೊಂದು ಪ್ರಕರಣದಲ್ಲಿ 2026ರ ಜನವರಿ 2ರಂದು ರಾತ್ರಿ ಶ್ರೀರಾಂಪುರ 2ನೇ ಹಂತ, 2ನೇ ಕ್ರಾಸ್‌ನಲ್ಲಿರುವ ಮೇಘನಾ ಎಂಬುವರ ಮನೆಗೆ ನುಗ್ಗಿ 120 ಗ್ರಾಂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಸ್ಥಳಕ್ಕೆ ಕುವೆಂಪು ನಗರ ಠಾಣೆ ಇನ್ಸ್‌ಪೆಕ್ಟರ್ ಯೋಗೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸುತ್ತಲಿನ ಪ್ರದೇಶದಲ್ಲಿದ್ದ ಸಿಸಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಿ ಆರೋಪಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು.
ಇದನ್ನೂ ಓದಿ: ಚೋರ್ ಮಗ ಚಂಡಾಳ್ ಅಪ್ಪ; ದೇಗುಲದಲ್ಲಿ ಕದ್ದು ಸಿಕ್ಕಿಬಿದ್ದ ಐನಾತಿಗಳು!
ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದ ಪೊಲೀಸರಿಗೆ ಈ ಎಲ್ಲ ಕಡೆ ಕಳ್ಳತನ ಮಾಡಿರುವುದು ಒಬ್ಬನೇ ಅನ್ನೋ ವಿಚಾರ ಸ್ಪಷ್ಟವಾಗಿತ್ತು. ಮತ್ತಷ್ಟು ಮಾಹಿತಿ ಸಂಗ್ರಹಿಸಿದಾಗ ಆರೋಪಿ ದ್ವಾರಕಪುರಿ ವೆಂಕಟೇಶ್ವರ ರೆಡ್ಡಿ ಅನ್ನೋ ಅಂತಾರಾಜ್ಯ ಕಳ್ಳ ಅಂತಾ ಗೊತ್ತಾಗಿದೆ. ಆತ ಅದಾಗಲೇ ಆಂಧ್ರಪ್ರದೇಶ, ಪುದುಚೇರಿ, ಕೇರಳ, ಹೈದ್ರಾಬಾದ್, ಹುಬ್ಬಳ್ಳಿ ಧಾರವಾಡಗಳಲ್ಲಿ ಕಳ್ಳತನ ಮಾಡಿದ್ದ. ಒಮ್ಮೆ ಬಂಧಿತನಾಗಿ ಪುದುಚೇರಿ ಜೈಲಿನಲ್ಲಿಯೂ ಇದ್ದ. ಜಾಮೀನಿನ ಮೇಲೆ ಹೊರಗೆ ಬಂದವನು ಮತ್ತೆ ಹಳೇ ಚಾಳಿ ಮುಂದುವರಿಸಿದ್ದ ಎಂಬ ಮಾಹಿತಿ ಸಿಕ್ಕಿದೆ.
ಕಳ್ಳತನಕ್ಕೂ ವಿಶೇಷ ತಯಾರಿ
ದ್ವಾರಕಪುರಿ ವೆಂಕಟೇಶ್ವರ ರೆಡ್ಡಿ ತಾನು ಕಳ್ಳತನ ಮಾಡುವ ಮುನ್ನ ವಿಶೇಷ ತಯಾರಿ ನಡೆಸುತ್ತಿದ್ದ. ಮೈಸೂರಿಗೆ ಕಳ್ಳತನಕ್ಕೆ ಬಂದವನು ಮೊದಲು ಹೋಗಿದ್ದು ನಾಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಾನ ಚಾಮುಂಡಿ ಬೆಟ್ಟಕ್ಕೆ. ಚಾಮುಂಡೇಶ್ವರಿ ದರ್ಶನ ಪಡೆದು ಪೂಜೆ ಸಲ್ಲಿಸಿ, ಕಳ್ಳತನ ಪ್ರಯತ್ನ ಫಲಿಸಲಿ ಅಂತಾ ಪ್ರಾರ್ಥನೆ ಮಾಡಿದ್ದ. ಇದಾದ ನಂತರ ಮೈಸೂರು ಸುತ್ತ ಒಂದು ರೌಂಡ್ ಹಾಕಿದ್ದ. ತನ್ನ ಕಾರಿನಲ್ಲಿ ಸುತ್ತಾಡಿ ಯಾವ ಮನೆ ಬೀಗ ಹಾಕಿದೆ? ಎಲ್ಲಿ ಸಿಸಿ ಕ್ಯಾಮರಾಗಳಿಲ್ಲ? ತಪ್ಪಿಸಿಕೊಳ್ಳಲು ಸರಿಯಾದ ಮಾರ್ಗ ಯಾವುದು? ಎಲ್ಲವನ್ನೂ ಕೂಲಂಕುಶವಾಗಿ ಪರಿಶೀಲನೆ ನಡೆಸಿದ್ದ. ನಂತರ ಮಧ್ಯರಾತ್ರಿ 1ರಿಂದ ಮುಂಜಾನೆ 4ಗಂಟೆ ಅವಧಿಯಲ್ಲಿ ಮನೆಗಳವು ಮಾಡುವುದು ಸೂಕ್ತ ಅಂತಾ ನಿರ್ಧರಿಸಿ ಕಳ್ಳತನ ಮಾಡಿ ಯಶಸ್ವಿಯಾಗಿದ್ದ. ಇನ್ನು ಈತ ಮನೆಯಲ್ಲಿದ್ದ ನಗದು, ಚಿನ್ನ, ಬೆಳ್ಳಿ ಸೇರಿ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ. ಆದ್ರೆ ಮನೆಯ ದೇವರ ಕೋಣೆಯಲ್ಲಿದ್ದ ಯಾವುದೇ ವಸ್ತುಗಳನ್ನು ಮುಟ್ಟುತ್ತಿರಲಿಲ್ಲ.
ಯಾವಾಗ ಈತನ ಬಗ್ಗೆ ಮಾಹಿತಿ ಸಿಕ್ಕಿತೋ ಮೈಸೂರು ಪೊಲೀಸರು ಅಲರ್ಟ್ ಆಗಿ, ವಿಶೇಷ ತಂಡ ರಚಿಸಿದ್ದರು. ಖಚಿತ ಮಾಹಿತಿ ಆಧರಿಸಿ 2026ರ ಜನವರಿ 6ರಂದು ಮಧ್ಯರಾತ್ರಿ ಹಾಸನ ನಗರದಲ್ಲಿ ದೂರದಲ್ಲಿ ಕಾರು ನಿಲ್ಲಿಸಿ ಮನೆಯೊಂದರಲ್ಲಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಕುಖ್ಯಾತ ಕಳ್ಳ ವೆಂಕಟೇಶ್ವರ ರೆಡ್ಡಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 310 ಗ್ರಾಂ ಬೆಳ್ಳಿ ವಸ್ತುಗಳು ಮತ್ತು 67 ಸಾವಿರ ನಗದು ಸೇರಿ ಮೂರು ಸಿಸಿ ಕ್ಯಾಮರಾ, ಕೃತ್ಯಕ್ಕೆ ಬಳಸಿದ್ದ ಪೋರ್ಡ್ ಕಾರು ವಶಪಡಿಸಿಕೊಳ್ಳಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.