ಮಧ್ಯ ಪ್ರಾಚ್ಯದಲ್ಲಿ ಯುದ್ಧ: ಪರದೇಶದಲ್ಲಿ ಸಿಲುಕಿ ಕನ್ನಡಿಗರ ಪರದಾಟ, ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ
ಮಧ್ಯ ಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡಿದ್ದು, ದುಬೈಗೆ ಪ್ರವಾಸ ಹಾಗೂ ಉದ್ಯೋಗ ಸಂಬಂಧಿತ ಕೆಲಸಗಳಿಗೆ ತೆರಳಿದ್ದ ಅನೇಕ ಕನ್ನಡಿಗರು ಸಿಲುಕಿ ಪರದಾಡುತ್ತಿದ್ದಾರೆ. ವಿಮಾನಗಳ ಹಾರಾಟ ರದ್ದಾಗಿದ್ದು, ಕುಟುಂಬಗಳು ಜೀವಭಯದಲ್ಲಿವೆ. ಕರ್ನಾಟಕ ಸರ್ಕಾರ 080-22340676 ಸಹಾಯವಾಣಿ ಆರಂಭಿಸಿದ್ದು, ಕನ್ನಡಿಗರ ಸುರಕ್ಷಿತ ವಾಪಸಾತಿಗಾಗಿ ಕೇಂದ್ರ ಸರ್ಕಾರವೂ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಬೆಂಗಳೂರು, ಮಾರ್ಚ್ 2: ಮಧ್ಯ ಪ್ರಾಚ್ಯದಲ್ಲಿ ಯುದ್ಧ ಆರಂಭವಾಗಿರುವ ಹಿನ್ನೆಲೆ ಕುಟುಂಬ ಸಮೇತ ವಿದೇಶ ಪ್ರವಾಸಕ್ಕೆ ತೆರಳಿದವರು, ಉದ್ಯೋಗ ಸಂಬಂಧ ಕೆಲಸಗಳಿಗಾಗಿ ದುಬೈಗೆ ಹೋಗಿರುವ ಕನ್ನಡಿಗರು ಸ್ವದೇಶಕ್ಕೆ ಹಿಂತಿರುಗಲಾರದೆ ಪರದಾಟ ನಡೆಸುತ್ತಿದ್ದಾರೆ. ಏಕಾಏಕಿ ವಿಮಾನಗಳ ಹಾರಾಟ ರದ್ದುಗೊಂಡಿರುವ ಕಾರಣ ಆತಂಕಕ್ಕೆ ಒಳಗಾಗಿದ್ದಾರೆ. ಕ್ಷಣ ಕ್ಷಣಕ್ಕೂ ಯುದ್ಧದ ತೀವ್ರತೆ ಹೆಚ್ಚುತ್ತಿರುವ ಕಾರಣ ಜೀವ ಭಯ ಕಾಡತೊಡಗಿದ್ದು, ಈ ನಡುವೆ ಕನ್ನಡಿಗರು ಸೇರಿದಂತೆ ಸರ್ವ ಭಾರತೀಯರ ಸುರಕ್ಷಿತಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳೋದಾಗಿ ತಿಳಿಸಿದೆ.
ಪ್ಯಾಮಿಲಿ ಜೊತೆ ಪ್ರವಾಸಕ್ಕೆ ಹೋದವರ ಪರದಾಟ
ಫ್ಯಾಮಿಲಿ ಜೊತೆ ದುಬೈ ಪ್ರವಾಸಕ್ಕೆ ಹೋಗಿದ್ದ ಚಿಕ್ಕಮಗಳೂರಿನ ಮಯೂರ ಹೋಟೆಲ್ ಮಾಲೀಕ ಗಿರೀಶ್ ಮತ್ತು ಕುಣಿಗಲ್ನಲ್ಲಿ ವಾಸವಿರೋ ಅವರ ಸಹೋದರ ಹರೀಶ್ ಭಟ್ ಕುಟುಂಬಗಳು ದುಬೈನಲ್ಲಿ ಸಿಲುಕಿವೆ. ಅಲ್ಲಿಂದ ಭಾರತಕ್ಕೆ ಹಿಂದಿರುಗಲು ಮಾರ್ಚ್ 3ಕ್ಕೆ ಫ್ಲೈಟ್ ಬುಕ್ ಆಗಿತ್ತು. ಈ ನಡುವೆ ಯುದ್ಧ ಆರಂಭವಾಗಿರುವ ಕಾರಣ ಎರಡೂ ಕುಟುಂಬಗಳ ಒಟ್ಟು 9 ಜನ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ಫೆ. 23ರಂದು ಇವರು ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ. ಹಾಗೆಯೇ ಚಿತ್ರದುರ್ಗದ ಬಾಪೂಜಿ ವಿದ್ಯಾ ಸಂಸ್ಥೆಯ ಕೆ.ಎಂ. ವೀರೇಶ್ ಕುಟುಂಬ ಕೂಡ ದುಬೈನಲ್ಲೇ ಲಾಕ್ ಆಗಿದೆ. ಕುಟುಂಬದವರೆಲ್ಲರೂ ಸುರಕ್ಷಿತವಾಗಿದ್ದು, ಖಾಸಗಿ ಪತ್ರಿಕೆಯ ಅವಾರ್ಡ್ ಕಾರ್ಯಕ್ರಮಕ್ಕೆಂದು ಇವರು ತೆರಳಿದ್ದರು.
ಪ್ಲೀಸ್ ನಮ್ಮನ್ನು ವಾಪಸ್ ಕರೆಸಿಕೊಳ್ಳಿ- ಮಹಿಳೆಯ ಅಳಲು
ಬೆಂಗಳೂರಿನ ಹೊಸಕೆರೆ ನಿವಾಸಿಯಾಗಿರುವ ಸುನೀತಾ ಅವರು ತಮ್ಮ ಕುಟುಂಬದೊಂದಿಗೆ ದುಬೈ ಪ್ರವಾಸಕ್ಕೆ ತೆರಳಿದ್ದಾಗ ಅನಿರೀಕ್ಷಿತ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಫೆಬ್ರವರಿ 23ರಂದು ದುಬೈಗೆ ಪ್ರಯಾಣಿಸಿದ್ದ ಈ ಕುಟುಂಬ, ಫೆಬ್ರವರಿ 28ರಂದು ಅಬುಧಾಬಿಯಿಂದ ಬೆಂಗಳೂರಿಗೆ ಮರಳಬೇಕಿತ್ತು. ಆದರೆ, ಇಸ್ರೇಲ್-ಇರಾನ್ ಸಂಘರ್ಷದ ಕಾರಣದಿಂದಾಗಿ ಅವ ಮರಳಬೇಕಿದ್ದ ವಿಮಾನಗಳು ರದ್ದುಗೊಂಡಿವೆ.
ಇದನ್ನೂ ಓದಿ: ಕನ್ನಡಿಗರಷ್ಟೇ ಅಲ್ಲ ಯಾರೂ ಆತಂಕ ಪಡಬೇಕಿಲ್ಲ, ಎಲ್ಲರನ್ನೂ ಸುರಕ್ಷಿತವಾಗಿ ಕರೆತರುತ್ತೇವೆ; ಪ್ರಲ್ಹಾದ್ ಜೋಶಿ ಅಭಯ
ಲಂಡನ್ಗೆ ಹೊರಟಿದ್ದ ಪ್ರಯಾಣಿಕ ದುಬೈನಲ್ಲಿ ಲಾಕ್
ಕೆಲಸದ ವಿಚಾರಕ್ಕೆ ಬೆಂಗಳೂರಿನಿಂದ ಲಂಡನ್ಗೆ ಹೊರಟಿದ್ದ ಸೀನಿಯರ್ ಈಕ್ವಿಟಿ ಸಲಹಾಗಾರ ನಾಗೇಂದ್ರ ಎಂಬವರು ಕೂಡ ದುಬೈನಲ್ಲಿ ಸಿಲುಕಿಕೊಂಡು ಪರದಾಟ ನಡೆಸುತ್ತಿದ್ದಾರೆ. ಲಂಡನ್ಗೆ ಹೊರಟಿದ್ದ ಇವರು ದುಬೈನಲ್ಲಿ ವಿಮಾನ ಬದಲಾಯಿಸಬೇಕಿತ್ತು. ಕುಟುಂಬದ ಜೊತೆಗೆ ಮಾತನಾಡಿರುವ ನಾಗೇಂದ್ರ, ಸುತ್ತಮುತ್ತ ದೊಡ್ಡ ಶಬ್ದ ಕೇಳಿಬರುತ್ತಿದೆ ಎಂದು ಹೆಂಡತಿಗೆ ತಿಳಿಸಿದ್ದಾರೆ. ತಾನಿರುವ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆ ಇರೋದಾಗಿಯೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಸಹಾಯವಾಣಿ ಆರಂಭ
ಮಧ್ಯಪ್ರಾಚ್ಯ ದೇಶಗಳಲ್ಲಿ ಅನೇಕ ಕನ್ನಡಿಗರು ಸಿಲುಕಿರುವ ಹಿನ್ನೆಲೆ ರಾಜ್ಯ ಸರ್ಕಾರ ತುರ್ತು ಸಹಾಯವಾಣಿ ಆರಂಭಿಸಿದೆ. 080-22340676 ಅಥವಾ 22253707ಗೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
