
ಬೆಂಗಳೂರು, ಅಕ್ಟೋಬರ್ 31: ಬೆಂಗಳೂರಿನ (Bengaluru) ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉತ್ತರಹಳ್ಳಿಯಲ್ಲಿ ಕಳೆದ ಶನಿವಾರ ವರದಿಯಾಗಿದ್ದ ಮಹಿಳೆಯ ಅಸಹಜ ಸಾವು ಪ್ರಕರಣಕ್ಕೀಗ ಸ್ಫೋಟಕ ತಿರುವು ದೊರೆತಿದೆ. ಮೃತ ಮಹಿಳೆ ನೇತ್ರಾವತಿಯ (34) ಅಪ್ರಾಪ್ತ ಮಗಳು, ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತರೇ ಕೊಲೆ ಮಾಡಿರುವುದು ಬಹಿರಂಗವಾಗಿದೆ. ನೇತ್ರಾವತಿಯ ಮಗಳು, ಆಕೆಯ ಪ್ರಿಯಕರ ಮತ್ತು ಆತನ ಮೂವರು ಸ್ನೇಹಿತರು ಸೇರಿ ಒಟ್ಟು ಐವರು ಅಪ್ರಾಪ್ತರು ಕೊಲೆಯಲ್ಲಿ ಶಾಮೀಲಾಗಿರವುದನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಯಲಿಗೆಳೆದಿದ್ದಾರೆ.
ನೇತ್ರಾವತಿಯ ಮಗಳು ಕೆಲ ಕಾಲದಿಂದ ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಕಳೆದ ಶನಿವಾರ ರಾತ್ರಿ ಪ್ರಿಯಕರ ಹಾಗೂ ಅವನ ಮೂವರು ಸ್ನೇಹಿತರೊಂದಿಗೆ ಮನೆಗೆ ಬಂದಿದ್ದಳು. ರಾತ್ರಿ ವೇಳೆ ನೇತ್ರಾವತಿ ಮಲಗಿದ್ದಾಗ ಅವರಿಗೆ ತಿಳಿಯದಂತೆ ಮನೆಗೆ ಬಂದಿದ್ದರು. ಇದರಿಂದ ಅವರ ವರ್ತನೆ ನೋಡಿ ಆಕ್ರೋಶಗೊಂಡು ನೇತ್ರಾವತಿ ಬೈದಿದ್ದಾರೆ. ಈ ವೇಳೆ ಜಗಳ ತೀವ್ರಗೊಂಡಿದ್ದು, ಕೋಪಗೊಂಡ ಮಗಳು ಹಾಗೂ ಆಕೆಯ ಸ್ನೇಹಿತರು ನೇತ್ರಾವತಿಯ ಬಾಯಿ ಮುಚ್ಚಿ ಟವಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ.
ಮರುದಿನ ನೇತ್ರಾವತಿ ಅಕ್ಕ ತನ್ನ ತಂಗಿ ಮತ್ತು ಮಗಳಿಗೆ ಕರೆ ಮಾಡಿರುತ್ತಾರೆ, ಆದರೆ ಸ್ವೀಕರಿಸಿರಲಿಲ್ಲ. ಅನುಮಾನ ಬಂದು ಸೋಮವಾರ ಮನೆ ಬಳಿ ಹೋಗಿರುತ್ತಾರೆ. ಮನೆಯ ಕಿಟಿಕಿ ಮೂಲಕ ನೋಡಿದಾಗ ನೇತ್ರಾವತಿ ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿದ್ದಾರೆ. ಬಳಿಕ ಸುಬ್ರಮಣ್ಯ ಪುರ ಪೊಲೀಸರು ಸ್ಥಳಕ್ಕೆ ಬಂದು ಅಸಹಜ ಸಾವು ಪ್ರಕರಣ (UDR) ದಾಖಲು ಮಾಡಿಕೊಂಡಿದ್ದಾರೆ. ಅದಾದ ನಂತರ ಶವ ಸಂಸ್ಕಾರಕ್ಕೂ ನೇತ್ರಾವತಿ ಮಗಳು ಬಂದಿರುವುದಿಲ್ಲ. ಇದರಿಂದ ಬುಧವಾರ ನೇತ್ರಾವತಿ ಮಗಳು ಮಿಸ್ಸಿಂಗ್ ಅಂತ ದೊಡ್ಡಮ್ಮ ದೂರು ನೀಡಿದ್ದಾರೆ. ಅನುಮಾನಗೊಂಡ ಪೊಲೀಸರು ನೇತ್ರಾವತಿ ಮಗಳ ವಿವರ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಆಕೆಯ ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ಅಪ್ರಾಪ್ತರ ಗ್ಯಾಂಗ್ನ ಕೊಲೆ ರಹಸ್ಯ ಬಟಾಬಯಲಾಗಿದೆ.
ಕೊಲೆಯ ನಂತರ, ಆತ್ಮಹತ್ಯೆ ಎಂದು ಬಿಂಬಿಸಲು ಆರೋಪಿಗಳು ನೇತ್ರಾವತಿಯ ಕುತ್ತಿಗೆಗೆ ಸೀರೆ ಕಟ್ಟಿ ಫ್ಯಾನಿಗೆ ನೇತುಹಾಕಿ ಮನೆ ಲಾಕ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು. ಮರುದಿನ ನೇತ್ರಾವತಿ ಶವ ಪತ್ತೆಯಾದ ನಂತರ ಪೊಲೀಸರು ಪ್ರಾಥಮಿಕವಾಗಿ ಅಸಹಜಸಾವು ಪ್ರಕರಣ ದಾಖಲಿಸಿದ್ದರು. ಶವ ಸಂಸ್ಕಾರಕ್ಕೂ ನೇತ್ರಾವತಿಯ ಮಗಳು ಹಾಜರಾಗದಿದ್ದರಿಂದ ಕುಟುಂಬದಲ್ಲಿ ಅನುಮಾನ ಹುಟ್ಟಿತು. ಬಳಿಕ ನೇತ್ರಾವತಿಯ ಅಕ್ಕ ಮಗಳ ನಾಪತ್ತೆ ಕುರಿತಂತೆ ದೂರು ನೀಡಿದ್ದರು.
ಘಟನೆಯ ನಂತರ ಅಜ್ಜಿ ಮನೆಗೆ ಬಂದಿದ್ದ ಆರೋಪಿ (ನೇತ್ರಾವತಿಯ ಮಗಳು), ‘ಅಮ್ಮ ಹಾಗೂ ನಾನು ಮನೆಯಲ್ಲಿರುವಾಗ ನನ್ನ ಸ್ನೇಹಿತರು ನಮ್ಮ ಮನೆಗೆ ಬಂದಿದ್ದರು. ಅಮ್ಮ ನನ್ನ ಸ್ನೇಹಿತರು ಮನೆಗೆ ಬಂದಿರುವ ವಿಚಾರದ ಬಗ್ಗೆ ಪೊಲೀಸರಿಗೆ ಹೇಳುತ್ತೇನೆ ಎಂದು ಹೆದರಿಸಿದ್ದರು. ಅಷ್ಟರಲ್ಲಿ ಅಮ್ಮನ ಕುತ್ತಿಗೆಗೆ ಟವಲ್‌ನಿಂದ ಬಿಗಿದು ಉಸಿರುಗಟ್ಟಿಸಿದ್ದಾರೆ. ಬಳಿಕ ಅಮ್ಮನನ್ನ ರೂಮ್ಗೆ ಎಳೆದುಕೊಂ ಹೋಗಿಡು ಸೀರೆಯಿಂದ ಫ್ಯಾನ್ಗೆ ನೇಣು ಹಾಕಿದ್ದಾರೆ. ನನಗೆ ಚಾಕು ತೋರಿಸಿ ಈ ವಿಚಾರವನ್ನು ಯಾರಿಗೂ ಹೇಳಬೇಡ ಎಂದು ಹೆದರಿಸಿ ಹೋಗಿದ್ದಾರೆ. ನಂತರ ನಾನು ನನ್ನ ಸ್ನೇಹಿತೆಯ ಮನೆಗೆ ಹೋಗಿದ್ದೆ. ಈಗ ನನ್ನ ತಾಯಿ ಸತ್ತು ಹೋಗಿರುವ ವಿಚಾರ ತಿಳಿದು ಮನೆಗೆ ಬಂದಿದ್ದೇನೆ’ ಎಂದು ಹೇಳಿದ್ದಾಳೆ.
ಇದನ್ನೂ ಓದಿ: ಮನೆಕೆಲಸದಾಕೆಗೆ ಕೋಟಿ ರೂ ಮನೆ ಕೊಟ್ಟ ಒಡತಿ: ಆದ್ರೂ ತಿಂದ ಮನೆಗೆ ದ್ರೋಹ ಬಗೆದ್ಲು
ಆದರೆ ಆಕೆ ಮೇಲೆ ದೊಡ್ಡಮ್ಮನಿಗೆ ಅನುಮಾನ ಬಂದಿತ್ತು. ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆಕೆ ಮತ್ತು ಪ್ರಿಯಕರನನ್ನು ವಿಚಾರಣೆ ಮಾಡಿದಾಗ ಕೃತ್ಯ ಬಯಲಾಗಿದೆ.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು
Published On - 10:03 am, Fri, 31 October 25