ಬೆಂಗಳೂರು: ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಗಳಿಸಿರುವ ಬೆಂಗಳೂರು ಮಳೆಯ (Bengaluru Rains) ಅಬ್ಬರಕ್ಕೆ ತತ್ತರಿಸಿಹೋಗಿದೆ. ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು ಮಳೆನೀರಿನೊಂದಿಗೆ ಕೊಚ್ಚಿಕೊಂಡು ಬಂದ ಗಲೀಜು, ಕೊಳಚೆ ನೀರು ತುಂಬಿ ಗಾರ್ಬೇಜ್ ಸಿಟಿಯಂತಾಗಿದೆ. ಮಳೆಯ ಅಬ್ಬರದಿಂದ ಐಟಿ ಕಂಪನಿಗಳು ಕೂಡ ಭಾರೀ ನಷ್ಟ ಅನುಭವಿಸಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಉದ್ಯಮಿ ಮೋಹನ್ ದಾಸ್ ಪೈ (Mohan Das Pai) ಬೆಂಗಳೂರನ್ನು ಉಳಿಸಿ (Save Bengaluru) ಎಂಬ ಅಭಿಯಾನ ಶುರು ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ (Narendra Modi), ಸಿಎಂ ಬಸವರಾಜ ಬೊಮ್ಮಾಯಿ, ನಿತಿನ್ ಗಡ್ಕರಿ, ಬಿಎಲ್ ಸಂತೋಷ್ ಮುಂತಾದ ನಾಯಕರಿಗೆ ಟ್ಯಾಗ್ ಮಾಡಿ ಬೆಂಗಳೂರಿನ ಅವ್ಯವಸ್ಥೆ ಮತ್ತು ಸ್ಥಳೀಯ ಆಡಳಿತದ ವೈಫಲ್ಯದ ಬಗ್ಗೆ ಟ್ವೀಟ್ ಕೂಡ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಎನ್.ಆರ್. ರಮೇಶ್ ಮೋಹನ್ ದಾಸ್ ಪೈ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
ಮೋಹನ್ ದಾಸ್ ಪೈ ಅವರೇ, ನೀವು ಕಳೆದ 10-15 ದಿನಗಳಿಂದ ಸೇವ್ ಬೆಂಗಳೂರು ಎಂಬ ಹೆಸರಿನಲ್ಲಿ ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಅನೇಕರಿಗೆ ಪತ್ರ ಬರೆದಿರುವುದಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಅಭಿಯಾನ ನಡೆಸುತ್ತಿದ್ದೀರಿ. ಪ್ರವಾಹ ಉಂಟಾಗಿರುವುದರಿಂದ ಬೆಂಗಳೂರಿನ ಐಟಿ, ಬಿಟಿ ಕಂಪನಿಗಳು ತೆಲಂಗಾಣದತ್ತ ವಲಸೆ ಹೋಗಲು ಚಿಂತಿಸುತ್ತಿವೆ ಎಂದು ನೀವು ಪತ್ರದಲ್ಲಿ ತಿಳಿಸಿದ್ದೀರಿ. ಆದರೆ, 1999ರ ಅವಧಿಯಲ್ಲಿ ಬೆಂಗಳೂರಿನಲ್ಲಿ ಅದರಲ್ಲೂ ವಿಶೇಷವಾಗಿ ಮಹದೇವಪುರ, ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಸಾವಿರಾರು ಕಾರ್ಪೋರೇಟ್ ಕಂಪನಿಗಳು ಪ್ರಾರಂಭವಾದವು. ಇದಕ್ಕೆ ಕಾರಣ ಸಮುದ್ರಮಟ್ಟದಿಂದ 3,000 ಅಡಿ ಎತ್ತರದಲ್ಲಿ ಅತ್ಯಂತ ವೈಜ್ಞಾನಿಕವಾಗಿ ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸಿದ್ದಾರೆ, ಇಲ್ಲಿನ ವಾತಾವರಣ ಚೆನ್ನಾಗಿದೆ, ಇಲ್ಲಿನ ಜನರು ಮೃದು ಸ್ವಭಾವದವರು ಎಂಬುದಾಗಿತ್ತು. ಬೆಂಗಳೂರಿನ ಐಟಿ, ಬಿಟಿ ಕಂಪನಿಗಳು, ಟೆಕ್ ಪಾರ್ಕ್, ಬ್ಯುಸಿನೆಸ್ ಪಾರ್ಕ್ಗಳ ಅನುಕೂಲಕ್ಕೆಂದು 1999ರಿಂದ 2004ರ ಅವಧಿಯಲ್ಲಿ ಬೆಂಗಳೂರಿನಲ್ಲಿ 4,500 ಕಿ.ಮೀ ಉದ್ದದ ರಸ್ತೆಗಳಲ್ಲಿ OFC Ductಗಳನ್ನು ಹಾಕಿಕೊಳ್ಳಲು ರಸ್ತೆ ಅಗೆತ ಶುಲ್ಕ ಪಡೆಯದೆ ಉಚಿತ ಅನುಮತಿ ನೀಡಲಾಗಿತ್ತು. ಇದಕ್ಕೆ ಸರ್ಕಾರ ತನ್ನ ಬೊಕ್ಕಸದಿಂದಲೇ ಸುಮಾರು 3,000 ಕೋಟಿ ರೂ. ಹಣ ಖರ್ಚು ಮಾಡಿತ್ತು ಎಂಬುದನ್ನು ನೀವು ಮರೆತಂತಿದೆ ಎಂದು ಎನ್.ಆರ್. ರಮೇಶ್ ಟೀಕಿಸಿದ್ದಾರೆ.
ಇದನ್ನೂ ಓದಿ: Mohandas Pai: ನರೇಂದ್ರ ಮೋದಿಯವರೇ ಬೆಂಗಳೂರು ಉಳಿಸಿ; ನಗರದ ಅವ್ಯವಸ್ಥೆಯ ಬಗ್ಗೆ ಗಮನ ಹರಿಸಲು ಪ್ರಧಾನಿಗೆ ಮೋಹನ್ದಾಸ್ ಪೈ ಮನವಿ
ಬೆಂಗಳೂರಿನ ಐಟಿ ಕಂಪನಿಗಳು, ಐಟಿ ಪಾರ್ಕ್ಗಳು ಜಲಾವೃತವಾಗಿರುವ ಬಗ್ಗೆ ನೀವು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೀರಿ. ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್ ಮತ್ತು ಔಟರ್ ರಿಂಗ್ ರೋಡ್ ಕಂಪನೀಸ್ ಅಸೋಸಿಯೇಷನ್ ಎಂಬ 2 ಸಂಘಟನೆಗಳನ್ನು ಮಾಡಿಕೊಂಡಿರುವ ಬೆಂಗಳೂರಿನ ಐಟಿ ಬಿಟಿ ಕಂಪನಿಗಳು ಅತ್ಯಂತ ವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ವಿಶ್ವದ ಏಕೈಕ ನಗರವೆಂಬ ಖ್ಯಾತಿ ಪಡೆದಿರುವ ಬೆಂಗಳೂರಿಗೆ ಕಪ್ಪು ಚುಕ್ಕೆ ಮೂಡುವಂತೆ ವರ್ತಿಸಿದ್ದೀರಿ. ಬೆಂಗಳೂರಿನ ಮಳೆಯ ಅವಾಂತರಕ್ಕೆ ಬೆಂಗಳೂರಿನ ಐಟಿ ಕಂಪನಿಗಳು, ಐಟಿ ಪಾರ್ಕ್ಗಳು ಸಹ ಕಾರಣ ಎಂಬ ಸತ್ಯವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದು ಎನ್ಆರ್ ರಮೇಶ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರು ಔಟರ್ ರಿಂಗ್ ರೋಡ್ ಕಂಪನೀಸ್ ಅಸೋಸಿಯೇಷನ್ ಅಡಿಯಲ್ಲಿರುವ 79 ಟೆಕ್ ಪಾರ್ಕ್ಗಳು, ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್ ಅಡಿಯಲ್ಲಿರುವ 250ಕ್ಕೂ ಹೆಚ್ಚು ಐಟಿ/ ಬಿಟಿ ಕಂಪನಿಗಳು, ಮಹದೇವಪುರದಲ್ಲಿರುವ 100ಕ್ಕೂ ಹೆಚ್ಚು ಐಟಿ ಕಂಪನಿಗಳು ತಮ್ಮ ಕಂಪನಿಗಳ ಕಟ್ಟಡದ ನಿರ್ಮಾಣದ ಹಂತದಲ್ಲಿ ಆ ಭಾಗಗಳಲ್ಲಿದ್ದ ರಾಜಕಾಲುವೆಗಳನ್ನು ಬಹುತೇಕ ಒತ್ತುವರಿ ಮಾಡಿಕೊಂಡಿವೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ವಿಪ್ರೋ, ಇನ್ಫೋಸಿಸ್, ಬಯೋಕಾನ್, ಟೆಕ್ ಮಹೀಂದ್ರಾ, ಟಾಟಾ ಪವರ್, ಬಾಷ್, ಐಬಿಎಂ, ಟಿಸಿಎಸ್, ಹೆಚ್ಪಿ ಸೇರಿದಂತೆ ಎಲ್ಲ ಕಂಪನಿಗಳು ತಮ್ಮ ಕಟ್ಟಡಗಳ ವ್ಯಾಪ್ತಿಯಲ್ಲಿದ್ದ ರಾಜಕಾಲುವೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡಿವೆ ಅಥವಾ ರಾಜಕಾಲುವೆಯ ಅಗಲವನ್ನು ಕಡಿಮೆಗೊಳಿಸಿವೆ. ಔಟ್ ರಿಂಗ್ ರೋಡ್ನಲ್ಲಿರುವ ಕಂಪನಿಗಳದ್ದೂ ಇದೇ ಕತೆ ಎಂಬುದು ನಿಮಗೂ ತಿಳಿದಿರಬಹುದು ಎಂದು ಮೋಹನ್ ದಾಸ್ ಪೈ ಅವರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ಈ ಎಲ್ಲ ವಿಷಯಗಳ ಅರಿವಿದ್ದೂ ಉದ್ದೇಶಪೂರ್ವಕವಾಗಿ ಇಂತಹ ವಿಷಯಗಳನ್ನು ಮರೆಮಾಚಿ ಬೆಂಗಳೂರಿಗೆ ಜಾಗತಿಕ ಮಟ್ಟದಲ್ಲಿ ಕಪ್ಪು ಮಸಿ ಬಳಿಯುವ ಕೆಲಸ ಮಾಡಿರುವ ತಮ್ಮ ಕ್ರಮವನ್ನು ನಾನು ವಿರೋಧಿಸುತ್ತೇನೆ. ಎಲೆಕ್ಟ್ರಾನಿಕ್ ಸಿಟಿ ಪ್ರದೇಶವೊಂದರಿಂದಲೇ ಬಿಬಿಎಂಪಿಗೆ ಹಿಂದಿನ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಅನುಸಾರವಾಗಿ 350 ಕೋಟಿಯಿಂದ 400 ಕೋಟಿ ರೂ. ಹಣವನ್ನು ಆಸ್ತಿ ತೆರಿಗೆ ರೂಪದಲ್ಲಿ ನೀಡಬೇಕಾಗಿರುವ ನೀವು ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಅನಿವಾರ್ಯತೆಯನ್ನು ತಪ್ಪಿಸಿಕೊಳ್ಳಲು ಟೌನ್ಶಿಪ್ ಎಂಬ ಹೆಸರಿನಲ್ಲಿ ಪ್ರತ್ಯೇಕ ಕೈಗಾರಿಕಾ ಪ್ರದೇಶ ಮಾಡಿಕೊಂಡಿದ್ದೀರಿ. ಬಿಬಿಎಂಪಿ, ಬೆಂಗಳೂರು ಜಲಮಂಡಳಿಯಿಂದ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಪಡೆದಿದ್ದರೂ ಕಾನೂನು ಪ್ರಕಾರವಾಗಿ ನೀಡಬೇಕಾದ 400 ಕೋಟಿ ರೂ. ಆಸ್ತಿ ತೆರಿಗೆಯನ್ನು ವಂಚಿಸಿದ್ದೀರಿ. ಬೆಂಗಳೂರಿನಲ್ಲಿ ಸದ್ಯಕ್ಕೆ 3,758 ಐಟಿ ಕಂಪನಿಗಳು, 92 ಬಿಟಿ ಕಂಪನಿಗಳು, 79 ಟೆಕ್ ಪಾರ್ಕ್ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿ ವರ್ಷ 2 ಲಕ್ಷ ಕೋಟಿ ರೂ.ಗೂ ಹೆಚ್ಚು ವಾರ್ಷಿಕ ವಹಿವಾಟು ನಡೆಸುತ್ತಿದ್ದೀರಿ. ನ್ಯಾಯಯುತವಾಗಿ ಸಿಎಸ್ಆರ್ ನಿಯಮಗಳಿಗೆ ಅನುಗುಣವಾಗಿ ವರ್ಷಕ್ಕೆ 2,500 ಕೋಟಿ ರೂ.ಗೂ ಹೆಚ್ಚು ಮೊತ್ತದ ಹಣವನ್ನು ಸಿಎಸ್ಆರ್ ನಿಧಿಯ ಮೂಲಕ ಸಾರ್ವಜನಿಕ ಉಪಯೋಗದ ಕೆಲಸಗಳಿಗೆ ವಿನಿಯೋಗಿಸಬೇಕು. ಆದರೆ, ತಾವು ಕೇವಲ ಹತ್ತಾರು ಕೋಟಿ ರೂ. ಹಣವನ್ನು ಮಾತ್ರ ವಿನಿಯೋಗಿಸಿ ಅಲ್ಲಿಯೂ ಬೆಂಗಳೂರಿಗೆ ಭಾರೀ ವಂಚನೆ ಮಾಡುತ್ತಿದ್ದೀರಿ ಎಂದು ಎನ್ಆರ್ ರಮೇಶ್ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಕಳೆದ 3 ತಿಂಗಳು ಮಾತ್ರ 899 ಮಿಮೀ ಮಳೆಯಾಗಿದೆ. ಇದು ಕಳೆದ 50 ವರ್ಷದಲ್ಲಿಯೇ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಈ ವೇಳೆ ಪ್ರವಾಹ ಬಂದಿರುವುದಕ್ಕೆ ರಾಜಕಾಲುವೆ ಒತ್ತುವರಿಯೇ ಕಾರಣ ಎಂಬುದು ನಿಮಗೂ ತಿಳಿದಿದೆ. ಅದರಲ್ಲಿ ಐಟಿ ಕಂಪನಿಗಳ ಪಾಲೂ ಇದೆ. ಆದರೆ, ನೀವು ತೆಲಂಗಾಣಕ್ಕೆ ಐಟಿ ಕಂಪನಿಗಳು ವಲಸೆ ಹೋಗಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಬೆದರಿಕೆ ಹಾಕುತ್ತಿದ್ದೀರಿ. ನಕ್ಸಲ್ ಪೀಡಿತ ಪ್ರದೇಶವೆಂದೇ ಕುಖ್ಯಾತಿ ಗಳಿಸಿರುವ ತೆಲಂಗಾಣದಲ್ಲಿ ನಿಮ್ಮ ಸಂಸ್ಥೆಗಳು, ಉದ್ಯೋಗಿಗಳು ಒಂದು ದಿನವೂ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಇನ್ನು ಮುಂದಾದರೂ ಸರ್ಕಾರವನ್ನು ಬೆದರಿಸುವ ತಂತ್ರವನ್ನು ಮಾಡದೆ ನ್ಯಾಯಯುತವಾಗಿ ವರ್ತಿಸಿ. ನಿಮ್ಮ ಐಟಿ/ ಬಿಟಿ ಕಂಪನಿಗಳು, ಐಟಿ ಪಾರ್ಕ್ಗಳು ಒತ್ತುವರಿ ಮಾಡಿಕೊಂಡಿರುವ ರಾಜಕಾಲುವೆಯನ್ನು ತೆರವುಗೊಳಿಸಿದರೆ ಬೆಂಗಳೂರಿನ ಮಳೆಗಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಈ ಬಗ್ಗೆ ನಾನು ಬಹಿರಂಗ ಚರ್ಚೆಗೆ ಬೇಕಿದ್ದರೂ ಸಿದ್ದನಿದ್ದೇನೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ ಪತ್ರ ಬರೆದಿದ್ದಾರೆ.
ಏನಿದು ಪ್ರಕರಣ?:
ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಅಸಮರ್ಪಕ ಆಡಳಿತ ನಿರ್ವಹಣೆ ಕುರಿತು ಉದ್ಯಮಿ ಮೋಹನ್ ದಾಸ್ ಪೈ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಸೋಷಿಯಲ್ ಮೀಡಿಯಾದಲ್ಲೂ ಟ್ಯಾಗ್ ಮಾಡಿದ್ದರು. ಬೆಂಗಳೂರಿನ ರಾಜ ಕಾಲುವೆಗಳು ಹೂಳಿನಿಂದ ತುಂಬಿವೆ. ಎಲ್ಲಾ ಕಡೆ ಕಸ, ಅವಶೇಷಗಳು ಬಿದ್ದಿದೆ. ಮುಖ್ಯವಾದ ಯೋಜನೆಗಳನ್ನು ಪರಿಶೀಲಿಸಿ ಬೆಂಗಳೂರು ಉಳಿಸಿ ಎಂದು ಪ್ರಧಾನಿಗೆ ಮನವಿ ಮಾಡಿದ್ದರು. ಸ್ಥಳೀಯ ಸರ್ಕಾರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾದಾಗ ಪ್ರಧಾನಿ ನರೇಂದ್ರ ಮೋದಿ ಕೊನೆಯ ಭರವಸೆ. ಏಕೆಂದರೆ ಆಡಳಿತ ಸುಧಾರಿಸಬೇಕಾಗಿದೆ, ನಮ್ಮ ನಗರಕ್ಕೆ ಉತ್ತಮ ಕಾನೂನುಗಳು, ಉತ್ತಮ ಹೊಣೆಗಾರಿಕೆಯ ಅಗತ್ಯವಿದೆ ಎಂದು ಟ್ವೀಟ್ ಮಾಡಿದ್ದರು.