ಬೆಂಗಳೂರು: ರಾಜ್ಯದಲ್ಲಿ ಚುನಾವಣೆ (Karnataka Assembly Elections 2023) ಕಾವು ಜೋರಾಗುತ್ತಿದ್ದಂತೆಯೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮದ್ಯ ಪ್ರಿಯರಿಗೆ ಆಘಾತ ಎದುರಾಗಿದೆ. ಮದ್ಯಕ್ಕೆ (Liquor) ಬೇಡಿಕೆ ಹೆಚ್ಚಾಗಿದೆ. ಆದರೆ, ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ ಎನ್ನಲಾಗಿದೆ. ಕಳೆದ 15 ದಿನಗಳಿಂದ ಮದ್ಯಕ್ಕೆ ಶೇ 20 ರಷ್ಟು ಬೇಡಿಕೆ ಹೆಚ್ಚಳವಾಗಿದೆ. ಆದರೆ ಇದಕ್ಕೆ ತಕ್ಕ ಪೂರೈಕೆಯಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಚುನಾವಣಾ ಸಂಹಿತೆ ಜಾರಿ ನಂತರ ನಿಯಮಾವಳಿ ಬಿಗಿಗೊಳಿಸಿದ ಕಾರಣ ಬಾರ್ ಹಾಗೂ ರೆಸ್ಟೋರೆಂಟ್ಗಳಿಗೆ ಬೇಕಾದಷ್ಟು ಪ್ರಮಾಣದಲ್ಲಿ ಮದ್ಯ ಸಿಗುತ್ತಿಲ್ಲ ಎನ್ನಲಾಗಿದೆ.
ಪೂರೈಕೆ ಕೊರತೆಯಾಗಿರುವುದರಿಂದ ಮದ್ಯದ ಬೆಲೆಯಲ್ಲಿಯೂ ಹೆಚ್ಚಳವಾಗಿದೆ. ಬಿಯರ್ ಬೆಲೆ ಶೇ 10ರಿಂದ 15ರಷ್ಟು ಹೆಚ್ಚಳವಾಗಿದೆ. ಬಾರ್ ಹಾಗೂ ರೆಸ್ಟೋರೆಂಟ್ ಮಾಲೀಕರು ಹೊರ ರಾಜ್ಯಗಳಿಂದ ಮದ್ಯ ತರಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿರುವುದರಿಂದ ದರ ಹೆಚ್ಚಳವಾಗಿದೆ ಎನ್ನಲಾಗಿದೆ.
ಸದ್ಯ ಶೇ 80 ರಷ್ಟು ಮದ್ಯ ಸ್ಟಾಕ್ ಇದ್ದು ಶೇ 20 ರಷ್ಟು ಪೂರೈಕೆ ಕಡಿಮೆಯಾಗಿದೆ. ಈ ಹಿಂದೆ ಒಂದು ತಿಗಳಿಗೆ 6 ಸಾವಿರ ಕೋಟಿಯಷ್ಟು ವಹಿವಾಟು ನಡೆಯುತ್ತಿತ್ತು. ಇದರಲ್ಲಿ ಸರ್ಕಾರಕ್ಕೆ ಎರಡೂವರೆ ಸಾವಿರ ಕೋಟಿ ರೂ.ನಷ್ಟು ವರಮಾನವನ್ನು ಸರ್ಕಾರಕ್ಕೆ ನೀಡುತ್ತಿದ್ದೆವು. ಸದ್ಯ 5 ಸಾವಿರ ಕೋಟಿ ರೂ.ನಷ್ಟು ವಹಿವಾಟು ನಡೆಯುತ್ತಿದೆ ಎಂದು ಬಾರ್ ಮಾಲೀಕರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಯಚೂರು ಜಿಲ್ಲೆಯಲ್ಲಿ ಮಿತಿಮೀರಿದ ಸೇಂದಿ, ಮದ್ಯದ ಹಾವಳಿ: ಇದಕ್ಕೆ ಕಡಿವಾಣ ಹಾಕಿದವರಿಗಷ್ಟೇ ನಮ್ಮ ವೋಟ್ ಅಂತಿದ್ದಾರೆ ಮಹಿಳೆಯರು!
ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ವಶಪಡಿಸಿಕೊಳ್ಳುತ್ತಿರುವುದರಿಂದ ಶೇ 25ರಷ್ಟು ನಷ್ಟ ಉಂಟಾಗುತ್ತಿದೆ. ಹೀಗಾಗಿ ಗೋವಾ, ತಮಿಳುನಾಡು, ಆಂದ್ರದಿಂದ ಮದ್ಯ ತರಿಸಿಕೊಳ್ಳುತ್ತಿದ್ದು, ಇದರಿಂದ ಕರ್ನಾಟಕಕ್ಕೆ ನಷ್ಟ ಆಗುತ್ತಿದೆ. ಬೇಡಿಕೆ ಶೇ 20 ರಷ್ಟು ಜಾಸ್ತಿಯಾಗಿದೆ ಎಂದು ಬಾರ್ ಮಾಲೀಕರು ತಿಳಿಸಿದ್ದಾರೆ.
ರಾಜ್ಯದಲ್ಲಿ ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ