
ಬೆಂಗಳೂರು, ಅ.22: ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದ ಮಳೆಯ ಆಗಮನ ಆಗಿದೆ. ಮೋಡಕವಿದ ವಾತಾವರಣ ಕೂಡ ಇತ್ತು, ಇದೀಗ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಇಂದು (ಅ.22) ಮಧ್ಯಾಹ್ನದಿಂದಲೇ ದಿಢೀರ್ ಮಳೆ ಆರಂಭವಾಗಿದ್ದು, ನಗರದ ಪ್ರಮುಖ ಪ್ರದೇಶಗಳಲ್ಲಿ ಧೋ ಎಂದು ಸುರಿದ ಮಳೆಯಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಪರದಾಟ ನಡೆಸಿದ್ದಾರೆ. ಸಿಟಿಯ ಹಲವೆಡೆ ಮೋಡಕವಿದ ವಾತಾವರಣ ಮುಂದುವರಿದಿದ್ದು, ಅಕ್ಟೋಬರ್ 26ರವರೆಗೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಹವಾಮಾನ ಇಲಾಖೆ (IMD) ಯೆಲ್ಲೋ ಅಲರ್ಟ್ ಘೋಷಿಸಿದೆ.
ಬೆಂಗಳೂರಿನ ಪ್ರಮುಖ ವಾಣಿಜ್ಯ ಹಾಗೂ ಸಾರ್ವಜನಿಕ ಪ್ರದೇಶಗಳಾದ ಜಯನಗರ, ಲಾಲ್‌ಬಾಗ್ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಇದರೊಂದಿಗೆ ಕಾರ್ಪೊರೇಷನ್, ಕೆ.ಆರ್. ಮಾರ್ಕೆಟ್, ಶಾಂತಿನಗರ, ವಿಧಾನಸೌಧ, ರಾಜಾಜಿನಗರ, ಮಲ್ಲೇಶ್ವರಂ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ.
ದಿಢೀರ್ ಸುರಿದ ಮಳೆಯಿಂದಾಗಿ ರಸ್ತೆ ಬದಿ ಸಂಚರಿಸುತ್ತಿದ್ದ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ರಕ್ಷಣೆಗೆ ಪರದಾಡುವಂತಾಯಿತು. ಸವಾರರು ಮಳೆಯಿಂದ ಬಚಾವಾಗಲು ರಸ್ತೆಬದಿಯ ಹೋಟೆಲ್‌ಗಳು ಹಾಗೂ ಮೇಲ್ಸೇತುವೆಗಳ ಕೆಳಗೆ ಆಶ್ರಯ ಪಡೆದರು. ರಸ್ತೆಗಳಲ್ಲಿ ಸಾರ್ವಜನಿಕರು ಛತ್ರಿಗಳನ್ನು ಹಿಡಿದು ಓಡಾಡುತ್ತಿದ್ದ ದೃಶ್ಯಗಳು ಕಂಡುಬಂದವು.
ಭಾರತೀಯ ಹವಾಮಾನ ಇಲಾಖೆ ನೀಡಿರುವ ವರದಿ ಪ್ರಕಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್ 26ರವರೆಗೆ ಕರಾವಳಿ ಹಾಗೂ ದಕ್ಷಿಣ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಅಭಾವ ಇರಲಿದ್ದು, ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ನಗರದಲ್ಲಿ ಇಂದು ಗರಿಷ್ಠ ತಾಪಮಾನ 27°C ಹಾಗೂ ಕನಿಷ್ಠ ತಾಪಮಾನ 21°C ದಾಖಲಾಗುವ ಸಾಧ್ಯತೆಯಿದೆ. ದಿನಪೂರ್ತಿ ತಂಪಾದ ಹಾಗೂ ಮೋಡಕವಿದ ವಾತಾವರಣ ಇರಲಿದೆ.
ಇದನ್ನೂ ಓದಿ: ಪ್ರಶಾಂತ-ಅಭಿಮನ್ಯು ಆನೆಗಳ ಶ್ರೇಷ್ಠ ಸೇವೆ: ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ರಾಜ್ಯದಲ್ಲಿ ಮುಂಗಾರು ಉತ್ತರ ಮಾರುತಗಳ ಆರ್ಭಟ ಹೆಚ್ಚಾಗಿದ್ದು, ಭಾರತೀಯ ಹವಾಮಾನ ಇಲಾಖೆ ಮುಂದಿನ 7 ದಿನಗಳ ಮಳೆ ಮುನ್ಸೂಚನಾ ವರದಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದಾದ್ಯಂತ ಕೆಲವೆಡೆ ಬಿಸಿಲಿನ ವಾತಾವರಣದೊಂದಿಗೆ ಮೋಡ ಕವಿದ ಹವಾಮಾನ ಇರಲಿದ್ದು, ಗುಡುಗು, ಮಿಂಚು ಹಾಗೂ ಜೋರಾದ ಗಾಳಿಯೊಂದಿಗೆ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮುಖ್ಯವಾಗಿ ದಕ್ಷಿಣ ಒಳನಾಡು ಭಾಗಗಳಿಗೆ ಅಕ್ಟೋಬರ್ 22 ರಿಂದ 26 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು ‘ಯೆಲ್ಲೋ ಅಲರ್ಟ್’ ಮಾದರಿಯ ಎಚ್ಚರಿಕೆಯನ್ನು ನೀಡಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ