Bangalore Rains: ಭಾರಿ ಮಳೆ ಕಾರಣ ಬೆಂಗಳೂರು ನಗರದ ಅಂಗನವಾಡಿ, ಶಾಲೆಗಳಿಗೆ ಇಂದು ರಜೆ

| Updated By: Ganapathi Sharma

Updated on: Oct 21, 2024 | 7:51 AM

Bangalore School Holiday: ಮೆಜೆಸ್ಟಿಕ್, ಕಾರ್ಪೊರೇಷನ್ ವೃತ್ತ, ಟೌನ್​ಹಾಲ್​, ಬನ್ನೇರುಘಟ್ಟ ರಸ್ತೆ, ಬನಶಂಕರಿ, ಕೆಂಗೇರಿ ಸೇರಿದಂತೆ ಬೆಂಗಳೂರು ನಗರದಾದ್ಯಂತ ಭಾರಿ ಮಳೆಯಾಗುತ್ತಿದೆ. ಹಿಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಇಂದು (ಅಕ್ಟೋಬರ್ 21, ಸೋಮವಾರ) ನಗರದಾದ್ಯಂತ ಎಲ್ಲ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ. ವಿವರ ಇಲ್ಲಿದೆ.

Bangalore Rains: ಭಾರಿ ಮಳೆ ಕಾರಣ ಬೆಂಗಳೂರು ನಗರದ ಅಂಗನವಾಡಿ, ಶಾಲೆಗಳಿಗೆ ಇಂದು ರಜೆ
ಭಾರಿ ಮಳೆ ಕಾರಣ ಬೆಂಗಳೂರು ನಗರದ ಅಂಗನವಾಡಿ, ಶಾಲೆಗಳಿಗೆ ಇಂದು ರಜೆ
Follow us on

ಬೆಂಗಳೂರು, ಅಕ್ಟೋಬರ್ 21: ಬೆಂಗಳೂರು ನಗರದಾದ್ಯಂತ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳ್ಳಂಬೆಳಗ್ಗೆಯೇ ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಹೀಗಾಗಿ ನಗರದ ಅಂಗನವಾಡಿ ಹಾಗೂ ಶಾಲೆಗಳಿಗೆ ಇಂದು (ಅ. 21, ಸೋಮವಾರ) ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಯಾರಿಗೆಲ್ಲ ರಜೆ?

ಅಂಗನವಾಡಿ, ಎಲ್​​​​ಕೆಜಿ, ಯುಕೆಜಿ, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸರ್ಕಾರಿ, ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಅನುದಾನಿತ ಶಾಲೆ, ಅನುದಾನ ರಹಿತ ಶಾಲೆ ಸೇರಿ ನಗರದ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್​ ಆದೇಶ ಹೊರಡಿಸಿದ್ದಾರೆ. ಇಂದು ಒಂದು ದಿನದ ಮಟ್ಟಿಗೆ ಈ ಆದೇಶ ಅನ್ವಯವಾಗಲಿದೆ. ಭಾರಿ ಮಳೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಪ್ರಕಟಿಸಲಾಗಿದೆ.

ಶಿಥಿಲ ಕಟ್ಟಡಗಳನ್ನು ಪಾಠ, ಪ್ರವಚನಕ್ಕೆ ಬಳಸುವಂತಿಲ್ಲ: ಆದೇಶ

ಕಾಲೇಜುಗಳ ಕಟ್ಟಡಗಳು ದುರ್ಬಲವಾಗಿದ್ದಲ್ಲಿ, ಶಿಥಿಲ ಕಟ್ಟಡಗಳು ಇದ್ದಲ್ಲಿ ಅಂತಹ ಕಟ್ಟಡಗಳನ್ನು ಪಾಠ ಪ್ರವಚನಗಳಿಗೆ ಬಳಸುವಂತಿಲ್ಲ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ರಜೆಯನ್ನು ನೀಡಿದ್ದರಿಂದ ಕಲಿಕಾ ಸಮಯ ಕೊರತೆಯನ್ನು ಶನಿವಾರ ಮಧ್ಯಾಹ್ನ ಅಥವಾ ಭಾನುವಾರ ಹೆಚ್ಚುವರಿ ತರಗತಿ ನಡೆಸಲು ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳ ಪೋಷಕರು, ಕಾಲೇಜು ಮುಖ್ಯಸ್ಥರು, ವಿದ್ಯಾರ್ಥಿಗಳು ನೀರು ಇರುವ ತಗ್ಗು ಪ್ರದೇಶಗಳಿಗೆ ಹೋಗದಂತೆ ಜಾಗ್ರತೆ ವಹಿಸಬೇಕು. ವಿದ್ಯಾರ್ಥಿಗಳು ಕಾಲೇಜುಗಳಿಗೆ ಹೋಗುವ ವಾಹನಗಳ ಸುರಕ್ಷತೆಯನ್ನು ನೋಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬಿಬಿಎಂಪಿ ಮುನ್ನೆಚ್ಚರಿಕೆ ಸಂದೇಶ

ಭಾರಿ ಮಳೆಯಾಗುತ್ತಿರುವ ಮತ್ತು ಮಳೆಯ ಮುನ್ಸೂಚನೆ ಇರುವುದರಿಂದ ಬೆಂಗಳೂರು ಜನತೆಗೆ ಬಿಬಿಎಂಪಿ ಹಲವು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸಲಹೆ ನೀಡಿದೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿ ಮಾಹಿತಿ ನೀಡಿದೆ.

ಬಿಬಿಎಂಪಿ ಎಕ್ಸ್​ ಸಂದೇಶ


‘‘ನಾಗರಿಕರೇ, ಇದು 21.10.2024 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಈ ಕೆಳಗಿನ ಪ್ರದೇಶಗಳಲ್ಲಿ ದಯವಿಟ್ಟು ಮುನ್ನೆಚ್ಚರಿಕೆಗಳನ್ನು ಅನುಸರಿಸಿ. ಮನೆಯೊಳಗೆಯೇ ಇರಿ, ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿ ಮತ್ತು ಸಾಧ್ಯವಾದರೆ ಪ್ರಯಾಣವನ್ನು ತಪ್ಪಿಸಿ. ಸುರಕ್ಷಿತ ಸ್ಥಳಗಳಲ್ಲಿ ಆಶ್ರಯವನ್ನು ಪಡೆದುಕೊಳ್ಳಿ, ಮರಗಳ ಕೆಳಗೆ ಆಶ್ರಯ ಪಡೆಯಬೇಡಿ. ಕಾಂಕ್ರೀಟ್ ಗೋಡೆಗಳಿಗೆ ಒರಗಬೇಡಿ. ವಿದ್ಯುತ್/ಎಲೆಕ್ಟ್ರಾನಿಕ್ ಉಪಕರಣಗಳನ್ನು ಅನ್​ಪ್ಲಗ್ ಮಾಡಿ ಇಡಿ. ತಕ್ಷಣವೇ ಜಲಮೂಲಗಳಿಂದ ಹೊರಬನ್ನಿ ಎಂದು ಬಿಬಿಎಂಪಿ ಸಲಹೆ ನೀಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ರಾತ್ರಿ, ಮುಂಜಾನೆ ಅಬ್ಬರದ ಮಳೆ: ಟ್ರಾಫಿಕ್ ಜಾಮ್, ಜನಜೀವನ ಅಸ್ತವ್ಯಸ್ತ

ವಿದ್ಯುಚ್ಛಕ್ತಿಗೆ ಸಂಬಂಧಿತ ಎಲ್ಲ ಸಾಧನಗಳಿಂದ ದೂರವಿರಿ. ನೀವು ಪ್ರಯಾಣಿಸುತ್ತಿದ್ದರೆ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ. ಯಾವುದೇ ಸಹಾಯ ಬೇಕಿದ್ದಲ್ಲಿ ದಯವಿಟ್ಟು 1533 ಗೆ ಕರೆ ಮಾಡಿ ಎಂದು ಬಿಬಿಎಂಪಿ ಸೂಚನೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:27 am, Mon, 21 October 24