‘ಬಸವ ಮಂಟಪ’ ಕೃತಿ ವಿವಾದ: ಪುಸ್ತಕದಲ್ಲಿ ಏನಿದೆ? ಲೇಖಕ ರವಿ ಹಂಜ್‌ಗೆ ಸಂಕಷ್ಟ ತಂದ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ!

ಬಸವಣ್ಣನವರ ಕುರಿತು ಆಕ್ಷೇಪಾರ್ಹ ಬರಹಗಳಿವೆ ಎಂಬ ಆರೋಪದಿಂದ ‘ಬಸವ ಮಂಟಪ’ ಕೃತಿ ವಿವಾದ ಭುಗಿಲೆದ್ದಿದೆ. ಲೇಖಕ ರವಿ ಹಂಜ್ ಮತ್ತು ಪತ್ರಕರ್ತ ವಿಶ್ವೇಶ್ವರ್ ಭಟ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೃತಿ ಮುಟ್ಟುಗೋಲಿಗೆ ರಾಜ್ಯ ಸಚಿವ ಸಂಪುಟ ಸಮ್ಮತಿ ಸೂಚಿಸಿದ್ದು, ಬಸವಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ವಿವಾದದ ಬೆನ್ನಲ್ಲೇ ರವಿ ಹಂಜ್ ಕ್ಷಮೆಯಾಚಿಸಿ ಕೃತಿ ಮರುಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಬಸವ ಮಂಟಪ ಕೃತಿ ವಿವಾದ: ಪುಸ್ತಕದಲ್ಲಿ ಏನಿದೆ? ಲೇಖಕ ರವಿ ಹಂಜ್‌ಗೆ ಸಂಕಷ್ಟ ತಂದ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ!
ಬಸವ ಮಂಟಪ ಕೃತಿ ವಿವಾದ

Updated on: Nov 20, 2026 | 10:12 AM

ಮುಖ್ಯಾಂಶಗಳು

  • ಬಸವಣ್ಣನವರ ಕುರಿತು ಆಕ್ಷೇಪಾರ್ಹ ಬರಹ ಆರೋಪದಿಂದ ‘ಬಸವ ಮಂಟಪ’ ಕೃತಿ ವಿವಾದಕ್ಕೆ ಕಾರಣವಾಗಿದೆ.
  • ಲೇಖಕ ರವಿ ಹಂಜ್, ಪತ್ರಕರ್ತ ವಿಶ್ವೇಶ್ವರ್ ಭಟ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
  • ವಿವಾದ ತೀವ್ರಗೊಳ್ಳುತ್ತಿದ್ದಂತೆ ರವಿ ಹಂಜ್ ಕ್ಷಮೆಯಾಚಿಸಿ, ಕೃತಿ ಮರುಬಿಡುಗಡೆ ಘೋಷಿಸಿದ್ದಾರೆ.

ಬೆಂಗಳೂರು, ನವೆಂಬರ್ 20: 12ನೇ ಶತಮಾನದಲ್ಲೇ ಜಾತಿ ವ್ಯವಸ್ಥೆ, ಅಸಮಾನತೆ ಹಾಗೂ ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿ, ಕಾಯಕ ಮತ್ತು ದಾಸೋಹದ ತತ್ವಗಳನ್ನು ಜಗತ್ತಿಗೆ ಸಾರಿದ ಮಹಾನ್ ಸಮಾಜ ಸುಧಾರಕ ಬಸವಣ್ಣನವರ ಕುರಿತು ರಚನೆಯಾಗಿರುವ ‘ಬಸವ ಮಂಟಪ’ ಕೃತಿ ಇದೀಗ ಕರ್ನಾಟಕದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅಮೆರಿಕದ ಶಿಕಾಗೋ ಮೂಲದ ಲೇಖಕ ರವಿ ಹಂಜ್ ಬರೆದಿರುವ ಈ ಪುಸ್ತಕದಲ್ಲಿನ ಕೆಲವು ಬರಹಗಳು ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಿವೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪುಸ್ತಕದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿದ್ದು, ಇದೀಗ ಲೇಖಕ ರವಿ ಹಂಜ್ ಹಾಗೂ ಪತ್ರಕರ್ತ ವಿಶ್ವೇಶ್ವರ್ ಭಟ್ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ. ಮತ್ತೊಂದೆಡೆ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಲೇಖಕ ರವಿ ಹಂಜ್ ಕ್ಷಮೆಯಾಚಿಸಿದ್ದಾರೆ. ಹಾಗಾದರೆ ಅಸಲಿಗೆ ಈ ವಿವಾದ ಶುರುವಾಗಿದ್ದು ಹೇಗೆ? ಪುಸ್ತಕದಲ್ಲಿನ ವಿಚಾರಗಳೇನು? ಸರ್ಕಾರ ಕೈಗೊಂಡ ಕ್ರಮಗಳೇನು? ಇಡೀ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.

ಏನಿದು ಬಸವ ಮಂಟಪ ಪುಸ್ತಕ ವಿವಾದ?

‘ಬಸವ ಮಂಟಪ’ ಎಂಬ ಕೃತಿಯನ್ನು ಲೇಖಕ ರವಿ ಹಂಜ್ ರಚಿಸಿದ್ದಾರೆ. ಈ ಪುಸ್ತಕದಲ್ಲಿ ಬಸವಣ್ಣನವರ ಜನನ, ಜೀವನ, ಜಾತಿ, ವಚನಗಳು, 12ನೇ ಶತಮಾನದ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳ ಕುರಿತು ಬರೆಯಲಾಗಿದೆ. ಆದರೆ ಕೃತಿಯಲ್ಲಿನ ಕೆಲವು ಐತಿಹಾಸಿಕ ಉಲ್ಲೇಖಗಳು ಹಾಗೂ ಲೇಖಕರ ವ್ಯಾಖ್ಯಾನಗಳು ಇದೀಗ ವಿವಾದದ ಕೇಂದ್ರಬಿಂದುವಾಗಿವೆ.

Loading...

ವಿಶೇಷವಾಗಿ ಕಲ್ಯಾಣದ ಚಾಲುಕ್ಯರ ದೊರೆ ಬಿಜ್ಜಳನ ಹತ್ಯೆಯ ವಿಚಾರದಲ್ಲಿ ಬಸವಣ್ಣನವರ ಪಾತ್ರದ ಕುರಿತು ಪುಸ್ತಕದಲ್ಲಿ ಮಾಡಿರುವ ಉಲ್ಲೇಖಗಳು ತೀವ್ರ ಆಕ್ಷೇಪಕ್ಕೆ ಕಾರಣವಾಗಿವೆ. ಬಸವಣ್ಣನವರನ್ನು ಬಿಜ್ಜಳನ ಹತ್ಯೆಗೆ ಕಾರಣರಾದ ವ್ಯಕ್ತಿಯಂತೆ ಚಿತ್ರಿಸಲಾಗಿದೆ ಎಂಬುದು ಪ್ರತಿಭಟನಾಕಾರರ ಆರೋಪ. ಅಷ್ಟೇ ಅಲ್ಲದೆ, ಬಸವಣ್ಣನವರನ್ನು ಕೊಲೆಗಾರ ಮತ್ತು ಕಳ್ಳನ ರೀತಿಯಲ್ಲಿ ಬಿಂಬಿಸಲಾಗಿದೆ. ಲಿಂಗಾಯತ ಎಂಬ ಪದವನ್ನು ಲಿಂಗಾಹತ ಎಂದು ಉಲ್ಲೇಖಿಸಿರುವುದು, ಲಿಂಗಾಯತ ಸಮುದಾಯ ಹಾಗೂ ಕೆಲವು ಧಾರ್ಮಿಕ ಮುಖಂಡರ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ದಾಖಲಿಸಿರುವುದು ಕೂಡ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬಸವಣ್ಣನವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಜಾತಿ, ಧರ್ಮದ ಬೇಧವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು ಎಂದು ಸಾರಿದ ಮಹಾನ್ ಸಮಾಜ ಸುಧಾರಕ. ಅನುಭವ ಮಂಟಪದ ಮೂಲಕ ವಿವಿಧ ಸಮುದಾಯಗಳ ಶರಣರಿಗೆ ವೇದಿಕೆ ಕಲ್ಪಿಸಿದವರು. ಇಂತಹ ವ್ಯಕ್ತಿತ್ವವನ್ನು ತಪ್ಪಾಗಿ ಚಿತ್ರಿಸುವ ಪ್ರಯತ್ನ ನಡೆದಿದೆ ಎಂಬುದು ಬಸವಪರ ಸಂಘಟನೆಗಳ ವಾದವಾಗಿದೆ. ಆದರೆ ಪುಸ್ತಕದಲ್ಲಿನ ವಿಚಾರಗಳು ಐತಿಹಾಸಿಕ ಸಂಶೋಧನೆಯ ಭಾಗವೇ ಅಥವಾ ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಬರೆಯಲಾಗಿದೆಯೇ ಎಂಬ ಚರ್ಚೆಯೂ ಆರಂಭವಾಗಿದೆ.

ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ: ಬೀದಿಗಿಳಿದ ಬಸವ ಅನುಯಾಯಿಗಳು

ಪುಸ್ತಕದ ವಿಚಾರಗಳು ಸಾರ್ವಜನಿಕ ಚರ್ಚೆಗೆ ಬರುತ್ತಿದ್ದಂತೆ ವೀರಶೈವ ಲಿಂಗಾಯತ ಸಮುದಾಯ ಹಾಗೂ ಬಸವಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಬಸವಣ್ಣನವರ ವ್ಯಕ್ತಿತ್ವ, ವಚನ ಸಾಹಿತ್ಯ ಮತ್ತು ಅವರ ಸಾಮಾಜಿಕ ಕೊಡುಗೆಗಳನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆದಿವೆ.

ಬೆಂಗಳೂರಿನ ಬಸವ ಸಮಿತಿ ಆವರಣದಲ್ಲಿಯೂ ಪ್ರತಿಭಟನೆ ನಡೆದಿದ್ದು, ಆಕ್ರೋಶಿತ ಬಸವಣ್ಣನವರ ಅನುಯಾಯಿಗಳು ‘ಬಸವ ಮಂಟಪ’ ಪುಸ್ತಕವನ್ನು ಸುಟ್ಟು ಆಕ್ರೋಶ ಹೊರಹಾಕಿದ್ದಾರೆ. ಲೇಖಕ ರವಿ ಹಂಜ್ ವಿರುದ್ಧ ಧಿಕ್ಕಾರ ಕೂಗಿದ್ದು, ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಪ್ರತಿಭಟನೆ ನಡೆಸಿದ್ದಾರೆ. ಕೃತಿಯನ್ನು ತಕ್ಷಣವೇ ನಿಷೇಧಿಸಬೇಕು ಮತ್ತು ಲೇಖಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರದಿಂದ ಮಹತ್ವದ ನಿರ್ಧಾರ: ಕೃತಿ ಮುಟ್ಟುಗೋಲಿಗೆ ಸಂಪುಟ ಅಸ್ತು

ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ರಾಜ್ಯ ಸರ್ಕಾರ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ನವೆಂಬರ್ 19ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಲೇಖಕ ರವಿ ಹಂಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಬಸವಣ್ಣನವರ ವಿರುದ್ಧ ಅವಹೇಳನಕಾರಿ ಬರಹಗಳನ್ನು ಒಳಗೊಂಡಿದೆ ಎಂಬ ಆರೋಪ ಎದುರಿಸುತ್ತಿರುವ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು. ಲೇಖಕರ ವಿರುದ್ಧ ಎಫ್‌ಐಆರ್ ದಾಖಲಿಸುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು. ಇದರ ಬೆನ್ನಲ್ಲೇ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಲೇಖಕ ರವಿ ಹಂಜ್ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭವಾಯಿತು.

ರವಿ ಹಂಜ್, ವಿಶ್ವೇಶ್ವರ್ ಭಟ್ ವಿರುದ್ಧ ಎಫ್‌ಐಆರ್ ದಾಖಲು

‘ಬಸವ ಮಂಟಪ’ ಕೃತಿ ವಿವಾದಕ್ಕೆ ಸಂಬಂಧಿಸಿದಂತೆ ಲೇಖಕ ರವಿ ಹಂಜ್ ಹಾಗೂ ಪತ್ರಕರ್ತ ವಿಶ್ವೇಶ್ವರ್ ಭಟ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಸವ ಸಮಿತಿ ಅಧ್ಯಕ್ಷ ಅರವಿಂದ್ ಜತ್ತಿ ಅವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಬಸವಣ್ಣನವರನ್ನು ಕೊಲೆಗಾರ ಮತ್ತು ಕಳ್ಳನಂತೆ ಬಿಂಬಿಸಲಾಗಿದೆ. ಲಿಂಗಾಯತ ಪದವನ್ನು ತಿರುಚಿ ಬಳಸಲಾಗಿದೆ. ಲಿಂಗಾಯತ ಸಮುದಾಯ ಹಾಗೂ ಕೆಲವು ಪೂಜ್ಯರ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ, ಲೇಖಕ ರವಿ ಹಂಜ್ ತಮ್ಮ ಬರಹ ಹಾಗೂ ಹೇಳಿಕೆಗಳ ಮೂಲಕ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಪ್ರಯತ್ನ ಮಾಡಿದ್ದಾರೆ. ಪತ್ರಕರ್ತ ವಿಶ್ವೇಶ್ವರ್ ಭಟ್ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪವನ್ನೂ ದೂರಿನಲ್ಲಿ ಮಾಡಲಾಗಿದೆ.

ಇದನ್ನೂ ಓದಿ ‘ಬಸವ ಮಂಟಪ’ ಕೃತಿ ವಿವಾದ: ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಲೇಖಕ ರವಿ ಹಂಜ್ ಕ್ಷಮೆಯಾಚನೆ

ವಿವಾದದ ಬೆನ್ನಲ್ಲೇ ರವಿ ಹಂಜ್ ಕ್ಷಮೆಯಾಚನೆ

ಒಂದೆಡೆ ಪುಸ್ತಕದ ವಿರುದ್ಧ ಪ್ರತಿಭಟನೆ, ಮತ್ತೊಂದೆಡೆ ಸರ್ಕಾರದ ಕ್ರಮ ಮತ್ತು ಎಫ್‌ಐಆರ್ ದಾಖಲಾಗುತ್ತಿದ್ದಂತೆ ಲೇಖಕ ರವಿ ಹಂಜ್ ತಮ್ಮ ಹೇಳಿಕೆಗಳ ಕುರಿತು ಕ್ಷಮೆಯಾಚಿಸಿದ್ದಾರೆ. ವಿಶ್ವವಾಣಿ ಟಿವಿಗೆ ನೀಡಿದ ಸಂದರ್ಶನದಲ್ಲಿ ನಾನು ಮಾತನಾಡಿದ್ದನ್ನು ಕೆಲವರು ತಪ್ಪಾಗಿ ಗ್ರಹಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನನ್ನ ಮಾತುಗಳಿಂದ ವೀರಶೈವ ಲಿಂಗಾಯತ ಬಂಧುಗಳಿಗೆ ನೋವಾಗಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ. ಈ ಮೂಲಕ ತಮ್ಮ ಹೇಳಿಕೆಗಳಿಂದ ಉಂಟಾದ ನೋವಿಗೆ ಕ್ಷಮೆಯಾಚಿಸಿದ್ದಾರೆ.

ಅಲ್ಲದೆ, ‘ಬಸವ ಮಂಟಪ’ ಕೃತಿಯನ್ನು ಪ್ರತಿ ಜಿಲ್ಲೆಯಲ್ಲಿ ಮರುಬಿಡುಗಡೆ ಮಾಡಲು ಸಿದ್ಧವಿರುವುದಾಗಿಯೂ ಘೋಷಿಸಿದ್ದಾರೆ. ಸದ್ಯದಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮರುಬಿಡುಗಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದ್ದಾರೆ. ಸಾರ್ವಜನಿಕರ ಸಹಕಾರವನ್ನು ನಿರೀಕ್ಷಿಸುವುದಾಗಿ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us