‘ಬಸವ ಮಂಟಪ’ ಕೃತಿ ವಿವಾದ:ಲೇಖಕ ರವಿ ಹಂಜ್, ವಿಶ್ವೇಶ್ವರ್ ಭಟ್ ವಿರುದ್ಧ ಎಫ್ಐಆರ್
ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ವಿಶ್ವಗುರು ಬಸವಣ್ಣನವರಿಗೆ ಅಪಮಾನ ಮಾಡಲಾಗಿದೆಯಾ? ‘ಕಲಬೇಡ, ಕೊಲಬೇಡ' ಎಂದ ಮಹಾ ಮಾನವತಾವಾದಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹುನ್ನಾರ ನಡೆದಿದೆಯಾ? ‘ಬಸವ ಮಂಟಪ' ಎಂಬ ವಿವಾದಿತ ಕೃತಿ ಈಗ ಇಡೀ ಕರುನಾಡಿನಲ್ಲಿ ಆಕ್ರೋಶದ ಜ್ವಾಲೆ ಎಬ್ಬಿಸಿದ್ದು, ಬೀದಿಗಿಳಿದ ಬಸವ ಭಕ್ತರು ಪುಸ್ತಕ ಸುಟ್ಟು, ಲೇಖಕನ ಫೋಟೋಗೆ ಚಪ್ಪಲಿ ಏಟು ಕೊಟ್ಟು ರಣಕಹಳೆ ಮೊಳಗಿಸಿದ್ದಾರೆ. ಇನ್ನೊಂದೆಡೆ ವಿವಾದಿತ ‘ಬಸವ ಮಂಟಪ’ ಕೃತಿ ಲೇಖ ರವಿ ಹಂಜ್ ಸೇರಿದಂತೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ.

ಬೆಂಗಳೂರು, (ನವೆಂಬರ್ 19): ಬಸವಣ್ಣ ಕರುನಾಡಿನ ಸಾಂಸ್ಕೃತಿಕ ನಾಯಕ. 12 ನೇ ಶತಮಾನದಲ್ಲೇ ಜಾತಿ ವ್ಯವಸ್ಥೆ ವಿರುದ್ಧ ಕ್ರಾಂತಿಮೊಳಗಿಸಿದ್ದ ಕ್ರಾಂತಿಯೋಗಿ. ಕಾಯಕದಲ್ಲೇ ಕೈಲಾಸ ಕಂಡ ಕರ್ಮಯೋಗಿ. ಸಮಾಜ ಸುಧಾರಣೆಗೆ ಆವತ್ತೇ ನಾಂದಿ ಹಾಡಿದ್ದ ಜಗಜ್ಯೋತಿ. ಇಂಥಾ ಮಹಾ ಪುರುಷನ ಬಗ್ಗೆ ಅವಹೇಳನ ಮಾಡಿ ಪುಸ್ತಕ ಬರೆಯಲಾಗಿದ್ದು, ಇದೇ ಪುಸ್ತಕದ ವಿರುದ್ಧ ನಾಡಿನಾದ್ಯಂತ ಕಿಚ್ಚು ಹೊತ್ತಿದೆ. ಲೇಖಕ ರವಿ ಹಂಜ್ ಬರೆದ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಲು ಸಚಿವ ಸಂಪುಟ ಸಮ್ಮತಿಸಿದೆ. ಅಲ್ಲದೇ ಲೇಖಕರು ಹಾಗೂ ಇದಕ್ಕೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಿದೆ. ಇದರ ಬೆನ್ನಲ್ಲೇ ಲೇಖಕ ರವಿ ಹಂಜ್, ಪತ್ರಕರ್ತ ವಿಶ್ವೇಶ್ವರ್ ಭಟ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಸವಣ್ಣನವರನ್ನು ಕೊಲೆಗಾರ ಮತ್ತು ಕಳ್ಳ ಎಂಬಂತೆ ಬಿಂಬಿಸಿದ್ದಾರೆ. ಲಿಂಗಾಯತ ಪದ ತಿರುಚಿ ಲಿಂಗಾಹತ ಎಂದು ಹೇಳಿದ್ದಾರೆ. ಲಿಂಗಾಯತ, ಕೆಲ ಪೂಜ್ಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿದೆ. ಇದರೊಂದಿಗೆ ಶಾಂತಿ ಕದಡುವ ಕೆಲಸ ಮಾಡಿರುವ ಲೇಖಕ ರವಿ ಹಂಜ್ ಹಾಗೂ ಪ್ರಚೋದನೆ ನೀಡಿದ್ದಾರೆಂದು ವಿಶ್ವೇಶ್ವರ್ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಸವ ಸಮಿತಿ ಅಧ್ಯಕ್ಷ ಅರವಿಂದ್ ಜತ್ತಿ ಅವರು ದೂರು ನೀಡಿದ್ದಾರೆ.
ಇದನ್ನೂ ನೋಡಿ: ಬಸವ ಮಂಟಪʼ ಕೃತಿ ಮುಟ್ಟುಗೋಲಿಗೆ ಸಂಪುಟ ಸಮ್ಮತಿ: ಲೇಖಕ ರವಿ ಹಂಜ್ ವಿರುದ್ಧ FIR ದಾಖಲಿಸಲು ತೀರ್ಮಾನ
ಈ ದೂರು ಆಧರಿಸಿ ಜಗಜ್ಯೋತಿ ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ಮತ್ತು ಆಕ್ಷೇಪಾರ್ಹ ಹೇಳಿಕೆಗಳ ಆರೋಪದ ಮೇಲೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. BNS ಸೆಕ್ಷನ್ 192,196(1),353(2),299ರಡಿ ಸಾರ್ವಜನಿಕ ಶಾಂತಿ ಭಂಗ, ದ್ವೇಷ ಭಾಷಣ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪಗಳ ಮೇಲೆ ಎಫ್ಐಆರ್ ದಾಖಲಾಗಿದೆ.
ಅಮೆರಿಕದ ಶಿಕ್ಯಾಗೋದಲ್ಲಿರೋ ಲೇಖಕ ರವಿಹಂಜ್ ಎನ್ನುವರು ಬಸವ ಮಂಟಪ ಅನ್ನೋ ಪುಸ್ತಕ ಬರೆದಿದ್ದು, ಅದೇ ಪುಸ್ತಕದಲ್ಲಿ ಬಸವಣ್ಣನ ಹುಟ್ಟು, ಬದುಕು, ಜಾತಿ, ವಚನಗಳ ಬಗ್ಗೆ ಬರೆದಿದ್ದಾರೆ. ಹೀಗೆ ಬರೆಯುತ್ತಾ ಅಂದಿನ ರಾಜ ಬಿಜ್ಜಳನನ್ನ ಕೊಲ್ಲಿಸಿದ್ದೇ ಬಸವಣ್ಣ ಎಂದು ಬರೆಯೋ ಮೂಲಕ ಕಿಚ್ಚು ಹೊತ್ತಿಸಿದ್ದಾರೆ. ಪುಸ್ತಕದಲ್ಲಿ ಬಸವಣ್ಣನವರಿಗೆ ಅವಮಾನ ಮಾಡಲಾಗಿದೆ. ಇದರಿಂದ ಲಿಂಗಾಯತ ಸಮುದಾಯಕ್ಕೆ ನೋವಾಗಿದೆ ಎಂದು ರಾಜಕೀಯ ನಾಯಕರು ಸೇರಿದಂತೆ ಬಸವ ಅನುಯಾಯಿಗಳು ಹಾಗು ವೀರಶೈವ ಲಿಂಗಾಯತರು ಆಕ್ರೋಶ ಹೊರಹಾಕಿದ್ದಾರೆ.




