ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬಿಬಿಎಂಪಿ 2021-22 ರ ಆಯವ್ಯಯ ಮಂಡನೆ ಆಗಿದೆ. ಬಿಬಿಎಂಪಿ ಆರ್ಥಿಕ ಇಲಾಖೆಯ ಹಣಕಾಸು ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಅವರು ಒಟ್ಟು 9,291 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಆಡಳಿತಗಾರರ ಅಧ್ಯಕ್ಷತೆಯಲ್ಲಿ ಬಿಬಿಎಂಪಿ ಬಜೆಟ್ ಮಂಡನೆಯಾಗಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಇ-ಆಸ್ತಿ ತಂತ್ರಾಂಶಕ್ಕೆ ಹೆಚ್ಚಿನ ಒತ್ತು
2021-2022ನೇ ಸಾಲಿನ ಬಿಬಿಎಂಪಿ ಬಜೆಟ್ ಯಾರಿಗೂ ಹೊರಯಾಗದ ರೀತಿಯಲ್ಲಿ ಜನಸ್ನೇಹಿಯಾಗಿದೆ. ತೆರಿಗೆ ಹೆಚ್ಚಳವೂ ಇಲ್ಲ, ಹೊಸ ತೆರಿಗೆ ಹೆಚ್ಚಳ ಪ್ರಸ್ತಾಪ ಇಲ್ಲ. ವಲಯವಾರು ಮಟ್ಟದಲ್ಲಿ ವಾರ್ಡ್ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಆಡಳಿತಾತ್ಮಕ ಅಧಿಕಾರ ವಿಕೇಂದ್ರೀಕರಣಕ್ಕೆ ₹2,000 ಕೋಟಿ ತೆಗೆದಿರಿಸಲಾಗಿದೆ. ಆಸ್ತಿ ತೆರಿಗೆಯ ಶೇ.1ರಷ್ಟು ವಾರ್ಡ್ ಅಭಿವೃದ್ಧಿಗೆ ಮೀಸಲು ಇಡಲಾಗಿದೆ. ಇ-ಆಸ್ತಿ ತಂತ್ರಾಂಶಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಪಾಲಿಕೆ ಆಸ್ತಿಗಳ ಬಾಡಿಗೆ ಹೆಚ್ಚಳ ಇಲ್ಲ
ಬಿ ಖಾತೆಗಳನ್ನ ಎ ಖಾತೆಯಾಗಿ ಬದಲಾವಣೆಗೆ ಅಸ್ತು. ಪಾಲಿಕೆ ಆಸ್ತಿಗಳ ಬಾಡಿಗೆ ಹೆಚ್ಚಳ ಇಲ್ಲ. ಒಸಿ, ಸಿಸಿ ಪಡೆಯಲು ಹೊಸ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳಲಾಗುವುದು. ಘನತ್ಯಾಜ್ಯ, ಕಸ ವಿಲೇವಾರಿಗೆ ₹1,622 ಕೋಟಿ ಮೀಸಲು ಇಡಲಾಗಿದೆ. 67 ಹೊಸ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಲಿದೆ.
2021-2022ನೇ ಸಾಲಿನ ಬಿಬಿಎಂಪಿ ಬಜೆಟ್‌ನಲ್ಲಿ ಸಿಬ್ಬಂದಿ ವೆಚ್ಚಗಳು 1,267.75 ಕೋಟಿ ರೂಪಾಯಿ. ಆಡಳಿತ ವೆಚ್ಚ 250.37 ಕೋಟಿ ರೂಪಾಯಿ. ಬ್ಯಾಂಕ್ ಸಾಲ ಮತ್ತು ಬಡ್ಡಿ ಪಾವತಿ ₹296.87 ಕೋಟಿ. ಕಾರ್ಯಕ್ರಮಗಳ ವೆಚ್ಚ 424.25 ಕೋಟಿ ರೂಪಾಯಿ. ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ 2115.63 ಕೋಟಿ ರೂ. ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗೆ ₹4,587.68 ಕೋಟಿ. ಠೇವಣಿ ಮತ್ತು ಕರಗಳ ಮರುಪಾವತಿ ₹344.25 ಕೋಟಿ. ಒಟ್ಟು 9,291 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆಯಾಗಿದೆ.
2021-2022ನೇ ಸಾಲಿನ ಬಿಬಿಎಂಪಿ ಬಜೆಟ್‌ನಲ್ಲಿ ವಾರ್ಡ್ಗಳಲ್ಲಿ ಪಾದಚಾರಿ ಮಾರ್ಗ ಅಭಿವೃದ್ಧಿಗೆ ₹20 ಲಕ್ಷ ರೂ ಅನುದಾನ. ಬೆಂಗಳೂರಿನ ಕೆರೆಗಳ ಸಂರಕ್ಷಣೆಗೆ 10 ಕೋಟಿ ರೂಪಾಯಿ. 2007ರಲ್ಲಿ ಸೇರ್ಪಡೆಯಾದ 110 ಹಳ್ಳಿಗಳ ಅಭಿವೃದ್ಧಿ. ಹಳ್ಳಿಗಳ ಅಭಿವೃದ್ಧಿಗೆ 1,000 ಕೋಟಿ ರೂಪಾಯಿ ಮೀಸಲು. ಟ್ರಾಫಿಕ್ ಕಂಟ್ರೋಲ್‌ಗೆ 12 ಹೈಡೆನ್ಸಿಟಿ ಕಾರಿಡಾರ್ ಅಳವಡಿಕೆ. ಸಬರ್ಬನ್ ರೈಲುಗಳಿಗೆ ಮೆಟ್ರೋ, ಬಿಎಂಟಿಸಿ ಸಂಪರ್ಕ. ಸ್ಮಾರ್ಟ್ ಸಿಟಿ, ಟೆಂಡರ್ ಶ್ಯೂರ್ ಕಾಮಗಾರಿ ಮುಂದುವರಿಕೆ. ಬೆಂಗಳೂರಿನ ಸೌಂದರ್ಯಕ್ಕಾಗಿ 25 ಕೆರೆಗಳ ಪುನಶ್ಚೇತನ. ಖಾತಾ, ಆಸ್ತಿ ತೆರಿಗೆ, ಜನನ ಮರಣ, ಪ್ರಮಾಣ ಪತ್ರ, ಉದ್ಯಮ ಪರವಾನಗಿ, ಕಟ್ಟಡ ನಕ್ಷೆ ಸೇವೆಗೆ ಆನ್‌ಲೈನ್ ವ್ಯವಸ್ಥೆ ಜಾರಿ.
ಕೆ.ಆರ್.ಮಾರ್ಕೆಟ್ ಕಟ್ಟಡ ಅಡಮಾನ ಮುಕ್ತ
ವಿನಾಕಾರಣ ದುಂದುವೆಚ್ಚಕ್ಕೆ ಬಜೆಟ್‌ನಲ್ಲಿ ಕಡಿವಾಣ. ಶಿಕ್ಷಣ, ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಪಾರ್ಕ್, ಕೆರೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮಾತ್ರ ಅವಕಾಶ. ಉಳಿದ ಹೊಸ ಕಾಮಗಾರಿಗಳಿಗೆ ಅನುಮತಿ ಇಲ್ಲ. ಇನ್ನು, ಆಸ್ತಿ ತೆರಿಗೆ ಹೆಚ್ಚಳ ಇಲ್ಲ. ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು. ಕೈ ಬಿಟ್ಟುಹೋಗಿರುವ ಎಲ್ಲಾ ಆಸ್ತಿಗಳು ತೆರಿಗೆ ವ್ಯಾಪ್ತಿಗೆ. ಕೆ.ಆರ್.ಮಾರ್ಕೆಟ್ ಕಟ್ಟಡ ಅಡಮಾನ ಮುಕ್ತಗೊಂಡಿದೆ. ಕೌನ್ಸಿಲ್ ಕಟ್ಟಡ ನವೀಕರಣಕ್ಕೆ ₹10 ಕೋಟಿ ಅನುದಾನ ನಿಗದಿ. ಆಸ್ತಿ ತೆರಿಗೆಯಿಂದ 2,800 ಕೋಟಿ ರೂಪಾಯಿ. ಕರಗಳಿಂದ 3500 ಕೋಟಿ ರೂ. ಸಂಗ್ರಹದ ನಿರೀಕ್ಷೆ. ಪ್ರಸಕ್ತ ವರ್ಷ 38 ಕೋಟಿ ರೂ. ಬಾಡಿಗೆ ಸಂಗ್ರಹ ನಿರೀಕ್ಷೆ. 116 ಮಾರುಕಟ್ಟೆ ಸಂಕೀರ್ಣ, 5,918 ಅಂಗಡಿಗಳ ಬಾಡಿಗೆಯಿಂದ ವರ್ಷಕ್ಕೆ 23 ಕೋಟಿ ರೂ ಮಾತ್ರ ಬಾಡಿಗೆ ಸಂಗ್ರಹ ಆಗ್ತಿದೆ ಇದನ್ನು ಈ ವರ್ಷ 38 ಕೋಟಿ ನಿರೀಕ್ಷೆ ಮಾಡಲಾಗಿದೆ.