ಸೋಂಕು ಹೆಚ್ಚುತ್ತಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ; ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಮಾರ್ಚ್ 29ರಂದು ಕರ್ನಾಟಕಕ್ಕೆ ಹನ್ನೆರಡೂವರೆ ಲಕ್ಷ ಡೋಸ್ ಕೊರೊನಾ ಲಸಿಕೆ ಬರಲಿದೆ. ಈ ಲಸಿಕೆಯನ್ನು ಸಹ ತ್ವರಿತಗತವಾಗಿ ವಿತರಣೆ ಮಾಡುತ್ತೇವೆ. ಆದರೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಸರ್ಕಾರಕ್ಕೆ ಸಹಕಾರ ನೀಡಬೇಕು

ಸೋಂಕು ಹೆಚ್ಚುತ್ತಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ; ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್​

Updated on: Mar 27, 2021 | 3:52 PM

ಬೆಂಗಳೂರು: ಸೋಂಕು ಹೆಚ್ಚುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದ್ದು, ಮಹಾರಾಷ್ಟ್ರ, ಕೇರಳ, ಪಂಜಾಬ್ ನಂತರ ಕರ್ನಾಟಕವಿದೆ. ಈಗಾಗಲೇ ಬೆಂಗಳೂರಿನಲ್ಲಿ ಶೇಕಡಾ 61ರಷ್ಟು ಲಸಿಕೆ ಹಂಚಿಕೆಯಾಗಿದೆ. ಲಸಿಕೆ ಹಂಚುವ ಪ್ರಕ್ರಿಯೆ ಜಾರಿಯಲ್ಲಿದ್ದರೂ ಸಾರ್ವಜನಿಕ ಗುಂಪು ಸೇರುವ ಚಟುವಟಿಗಳನ್ನು ಏರ್ಪಡಿಸಬಾರದು. ಗುಂಪು ಇರುವ ಸ್ಥಳದಲ್ಲಿ ಅಂತರ ಕಾಯ್ದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬೆಂಗಳೂರಿನಲ್ಲಿ ಹೇಳಿದರು.

ಈಗಾಗಲೇ 34 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಿದ್ದೇವೆ. ಕರ್ನಾಟಕದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಾಗುತ್ತಿದೆ. ಪಾಸಿಟಿವಿಟಿ ಹೆಚ್ಚಾದಂತೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಂತರ ಕಾಪಾಡಿಕೊಳ್ಳದಿದ್ದರೆ ಕೊರೊನಾ ಸೋಂಕು ನಿಯಂತ್ರಣ ಮಾಡಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರು ಗುಂಪು ಸೇರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೇ ಅಂತರ ಕಾಪಾಡಲು ಹೆಚ್ಚು ಒಲವು ತೋರಬೇಕು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಮುಂದುವರೆದು ಮಾತನಾಡಿದ ಡಾ.ಕೆ.ಸುಧಾಕರ್, ನಾಡಿದ್ದು (ಮಾರ್ಚ್ 29) ಕರ್ನಾಟಕಕ್ಕೆ ಹನ್ನೆರಡೂವರೆ ಲಕ್ಷ ಡೋಸ್ ಕೊರೊನಾ ಲಸಿಕೆ ಬರಲಿದೆ. ಈ ಲಸಿಕೆಯನ್ನು ಸಹ ತ್ವರಿತಗತವಾಗಿ ವಿತರಣೆ ಮಾಡುತ್ತೇವೆ. ಆದರೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವ, ಭೌತಿಕ ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸಬೇಕು. ಎಲ್ಲರೂ ಲಸಿಕೆಯನ್ನು ಪಡೆಯಬೇಕು. ರಾಜ್ಯದಲ್ಲೀಗ ಪಾಸಿಟಿವಿಟಿ ದರ 1.6% ಆಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈಗ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರತಿ ದಿನ ಪರೀಕ್ಷೆ ಮಾಡಲಾಗುತ್ತಿದೆ. ರಾಷ್ಟ್ರೀಯ ಸರಾಸರಿ ಪಾಸಿಟಿವಿಟಿ ದರ 1.5% ಇದ್ದು, ನಮ್ಮ ರಾಜ್ಯದ ಪಾಸಿಟಿವಿಟಿ ದರ ಹೆಚ್ಚಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಆರೋಗ್ಯ ಸಿಬ್ಬಂದಿ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಗುರಿಯಲ್ಲಿ, ಬೀದರ್ 113%, ಧಾರವಾಡ 107%, ಗದಗ 103% ಲಸಿಕೆ ಗುರಿ ಸಾಧಿಸಿದೆ. ಬೆಂಗಳೂರು ನಗರ 61%, ಬಾಗಲಕೋಟೆ 64%, ದಾವಣಗೆರೆ ಹಾಗೂ ಕೊಪ್ಪಳ 65% ಗುರಿ ಸಾಧಿಸಿದೆ. ಇಲ್ಲಿವರೆಗೆ 2,22,377 ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗಿದೆ. 3,34,110 ಆರೋಗ್ಯ ಸಿಬ್ಬಂದಿಗೆ ಎರಡನೇ ಡೋಸ್ ನೀಡಲಾಗಿದೆ ಎಂದರು.

60 ವರ್ಷ ವಯಸ್ಸು ಮೇಲ್ಪಟ್ಟ 16,18,150 ಮಂದಿಗೆ ಲಸಿಕೆ ನೀಡಲಾಗಿದೆ. 45 ವರ್ಷದಿಂದ 60 ವರ್ಷದವರೆಗಿನ ಸಹ ಅಸ್ವಸ್ಥತೆ ಹೊಂದಿದ 4,70,602 ಮಂದಿ ಲಸಿಕೆ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವಲ್ಲಿ ಚಿತ್ರದುರ್ಗ 37%, ರಾಮನಗರ 37.8%, ಕೊಡಗು 38%, ಚಾಮರಾಜನಗರ 38%, ಕೊಪ್ಪಳ 48% ಗುರಿ ಸಾಧಿಸಿವೆ. ನಾಳೆ ನಾಡಿದ್ದರಲ್ಲಿ 12 ಲಕ್ಷ ಡೋಸ್ ಬರಲಿದೆ ಎಂದು ತಿಳಿಸಿದರು.

ಕೋವಿಡ್ ನಿಯಂತ್ರಣ ಕ್ರಮ ಈಗಾಗಲೆ ಜಾರಿಯಲ್ಲಿದೆ. ಜಾತ್ರೆ ಆಚರಣೆಗೆ ಅನುಮತಿ ನೀಡುತ್ತಿಲ್ಲ. ಕ್ರಮೇಣ ಇನ್ನೂ ಬಿಗಿಯಾದ ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಕೋರಲಾಗಿದೆ. ಮುಖ್ಯಮಂತ್ರಿಗಳೇ ಈ ವಿಚಾರದಲ್ಲಿ ನಿರ್ಣಯ ಕೈಗೊಳ್ಳುತ್ತಾರೆ ಎಂದರು.

ಪೊಲಿಯೋ ಲಸಿಕೆ ನೆನೆಸಿಕೊಂಡ ಸಚಿವ
ಕೊರೊನಾ ಸೋಂಕು ತಡೆಗಟ್ಟಲು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಇಂದು ಪೊಲಿಯೋ ಲಸಿಕೆ ಕಂಡುಹಿಡಿದ ದಿನ ಎಂದು ಸ್ಮರಿಸಿಕೊಂಡಿದ್ದಾರೆ. 1953ರ ಮಾರ್ಚ್ 27ರಂದು ಮಾನವ ಕುಲಕ್ಕೆ ಕಂಟಕವಾಗಿದ್ದ ಪೊಲಿಯೋಗೆ ಲಸಿಕೆ ಅಭಿವೃದ್ಧಿಪಡಿಸಲಾಯಿತು. ‘ಪರೋಪಕಾರಾರ್ಥಂ ಇದಂ ಶರೀರಂ’ ಎಂಬಂತೆ ಇತರರ ಸೇವೆಗಾಗಿ ಸಂಶೋಧಕರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಅವರು ಸ್ಮರಿಸಿಕೊಂಡಿದ್ದಾರೆ.

ಕೊರೊನಾ ಸೋಂಕಿಗೆ ತುತ್ತಾಗಿರುವ ಸಚಿನ್ ತೆಂಡೂಲ್ಕರ್ ಅವರಿಗೆ ಶೀಘ್ರವೇ ಗುಣವಾಗಲಿ ಎಂದು ಸಹ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹಾರೈಸಿದ್ದಾರೆ.

ಇದನ್ನೂ ಓದಿ: ಕೊರೊನಾ ಲಸಿಕೆ ವಿತರಣೆಯಲ್ಲಿ ಸ್ಲಂ ನಿವಾಸಿಗಳಿಗೆ ಆದ್ಯತೆ ಸಿಗಲಿ: ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ರಾಜ್ಯದಲ್ಲಿ ಲಾಕ್​​ಡೌನ್ ಘೋಷಿಸಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಬೇಡಿ -ಡಾ. ಕೆ.ಸುಧಾಕರ್​ ಮನವಿ

Published On - 11:53 am, Sat, 27 March 21