ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಸದ ಲಾರಿ ಡಿಕ್ಕಿಯಾಗಿ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಾಲಕನನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿದ್ದಾರೆ. ಚಾಲಕನನ್ನ ಮಂಜುನಾಥ್ ಎಂದು ಗುರುತಿಸಲಾಗಿದೆ ನಿನ್ನೆ (ಮಾರ್ಚ್ 21) ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಹೆಬ್ಬಾಳ ಪೊಲೀಸ್ ಠಾಣೆ ಎದುರು ಅಪಘಾತ ಸಂಭವಿಸಿತ್ತು. 13 ವರ್ಷದ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಮೃತ ಬಾಲಕಿಯನ್ನು ಅಕ್ಷಯಾ ಎಂದು ಗುರುತಿಸಲಾಗಿದೆ.
ಓರ್ವ ಮಹಿಳೆ ಮತ್ತು ಬಾಲಕಿ ಸೇರಿ ಮೂವರು ರಸ್ತೆ ದಾಟುತ್ತಿದ್ದರು. ಈ ವೇಳೆ ರಸ್ತೆಯ ಮೇಲೆ ಬಂದ ಬೈಕ್ ಮತ್ತು ಕಾರ್ ನಿಂತಿತ್ತು. ಹಿಂಬದಿಯಿಂದ ವೇಗವಾಗಿ ಬಂದ ಬಿಬಿಎಂಪಿ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಬೈಕ್ ಮುಂದೆ ರಸ್ತೆ ದಾಟುತ್ತಿದ್ದ ಪಾದಚಾರಿಗಳಿಗೆ ಡಿಕ್ಕಿಯಾಯಿತು. ರಸ್ತೆ ದಾಟುತ್ತಿದ್ದ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟರೆ, ಉಳಿದವರನ್ನು ಪೊಲೀಸರು ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಘಟನೆಯಲ್ಲಿ ಬೈಕ್ ಸವಾರನಿಗೂ ಗಂಭೀರ ಗಾಯವಾಗಿತ್ತು. ಈ ಸಂಬಂಧ ಆರ್.ಟಿ.ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ಸಂಬಂಧ ಕಸದ ಲಾರಿ ಚಾಲಕ ಮಂಜುನಾಥನನ್ನು ಆರ್.ಟಿ.ನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಬಾಲಕಿ ಅಕ್ಷಯಾಳ ಅಂತ್ಯಕ್ರಿಯೆಯು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಚಿಕ್ಕದಾಳವಾಟ ಗ್ರಾಮದಲ್ಲಿ ಮಂಗಳವಾರ (ಮಾರ್ಚ್ 22) ನಡೆಯಲಿದೆ.
ಅಕ್ಷಯಾಳ ತಂದೆ ನರಸಿಂಹಮೂರ್ತಿ ಬಿಎಂಟಿಸಿಯಲ್ಲಿ ಡ್ರೈವರ್ ಕಂ ಕಂಡಕ್ಟರ್ ಆಗಿದ್ದಾರೆ. ಅವರಿಗೆ ಮೂವರು ಮಕ್ಕಳು, ಇಬ್ಬರು ಹೆಣ್ಣು ಮತ್ತು ಒಂದು ಗಂಡು ಮಗು ಇದೆ. ಮೃತ ಅಕ್ಷಯಾ ದೊಡ್ಡ ಮಗಳು, ನರಸಿಂಹಮೂರ್ತಿ ಅವರ ಪತ್ನಿ ಗೃಹಿಣಿ. ಅಂಡರ್‌ಪಾಸ್‌ನಲ್ಲಿ ನೀರು ನಿಂತಿದ್ದರಿಂದಲೇ ಪುತ್ರಿ ಅಸುನೀಗಿದ್ದಾಳೆ ಎಂದು ಟಿವಿ9 ಜೊತೆ ಮಾತನಾಡುತ್ತಾ ಕಣ್ಣಿರು ಹಾಕಿದರು ಮೃತ ಅಕ್ಷಯಾ ತಂದೆ ನರಸಿಂಹಮೂರ್ತಿ. ಅಕ್ಷಯಾಗೆ ಪೈಲಟ್ ಆಗಬೇಕೆಂಬ ಕನಸು ಇತ್ತು. ತುಂಬಾ ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಿದ್ದೆ ಎಂದು ದುಃಖಿತರಾಗಿದ್ದಾರೆ.
ಅಂಡರ್ ಪಾಸ್ ಇದ್ದರೂ ಬಳಸದೇ ರಸ್ತೆ ದಾಟಲು ಓರ್ವ ಮಹಿಳೆ ಮತ್ತು ಬಾಲಕಿ ಸೇರಿ ಮೂವರು ಮುಂದಾಗಿದ್ದರು. ಈ ವೇಳೆ ಮುಂದೆ ಬಂದ ಬೈಕ್ ಮತ್ತು ಕಾರ್ ಗಳನ್ನು ನಿಲ್ಲಿಸಿದ್ದರು. ಆದರೆ ಅದರ ಹಿಂಬದಿಯಲ್ಲಿ ವೇಗವಾಗಿ ಬರುತಿದ್ದ ಬಿಬಿಎಂಪಿ ಲಾರಿ ಡಿಕ್ಕಿ ಹೊಡೆದು ಅನಾಹುತ ಸಂಭವಿಸಿದೆ. ಮತ್ತೋರ್ವ ಪಾದಚಾರಿ ಸೌಮ್ಯಾ (28) ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಬೈಕ್ ಸವಾರ ವಿಕಾಸ್ (40) ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಕಸದ ಲಾರಿಗೆ ಸಿಕ್ಕಿ ಬಾಲಕಿ ಸಾವು; ಪೊಲೀಸರೇ ದೂರು ನೀಡಿದ್ದರೂ ಬಿಬಿಎಂಪಿ ಕಂಟ್ರೋಲ್ ರೂಂ ಡೋಂಟ್ ಕೇರ್!
ಇದನ್ನೂ ಓದಿ: ಬೆಂಗಳೂರಿನ ಗೌರವ, ಪ್ರತಿಷ್ಠೆ ಹಾಳುಮಾಡುತ್ತಿರುವ ಭ್ರಷ್ಟರು, ಮೊದಲು ಬಿಬಿಎಂಪಿಯನ್ನ ಸ್ವಚ್ಛಗೊಳಿಸಬೇಕಿದೆ -ಕುಮಾರಸ್ವಾಮಿ