ಬೆಂಗಳೂರು, ಡಿಸೆಂಬರ್ 25: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಜನರನ್ನೂ ಬಿಟ್ಟೂಬಿಡದೆ ಕಾಡುತ್ತಿದೆ. ಬೆಂಗಳೂರಿಗರ ಅರ್ಧಜೀವನ ಟ್ರಾಫಿಕ್ನಲ್ಲೇ ಕಳೆದುಹೋಗುತ್ತಿದ್ದು, ಇತ್ತ ಬ್ರ್ಯಾಂಡ್ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಹಾಕಲು ಪಾಲಿಕೆ ಹೊಸ ಯೋಜನೆ ರೂಪಿಸಲು ಸಜ್ಜಾಗಿದೆ. ಸದ್ಯ ದೆಹಲಿ ಮೂಲದ ಖಾಸಗಿ ಕಂಪನಿ ಜೊತೆ ಕೈಜೋಡಿಸಿರುವ ಪಾಲಿಕೆ ಹೊಸ ಡಿಪಿಆರ್ ಸಿದ್ಧಪಡಿಸಿದ್ದು, ಇದರಲ್ಲಿ ರಾಜಧಾನಿಯ ಸಂಚಾರ ವ್ಯವಸ್ಥೆ ಹಾಗೂ ಟ್ರಾಫಿಕ್ ಕಂಟ್ರೋಲ್ಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ವರದಿ ಸಿದ್ಧವಾಗಿದೆ. ಸದ್ಯ ಈ ವರದಿಯನ್ನು ಬಿಬಿಎಂಪಿಯ ಮುಖ್ಯ ಆಯುಕ್ತರಿಗೆ ಸಲ್ಲಿಸಲಾಗಿದೆ.
ಈ ಹೊಸ ಡಿಪಿಆರ್ನಲ್ಲಿ ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಫ್ಲೈ ಓವರ್ಗಳ ನಿರ್ಮಾಣ, ಟನಲ್ ರೋಡ್ಗಳನ್ನು ನಿರ್ಮಿಸಿದರೆ ಟ್ರಾಫಿಕ್ ಸಮಸ್ಯೆಗೆ ಸ್ವಲ್ಪ ಮಟ್ಟಿನ ಮುಕ್ತಿ ಸಿಗಬಹುದು ಎಂದು ಉಲ್ಲೇಖಿಸಲಾಗಿದೆ. ಇದಕ್ಕಾಗಿ ಬರೋಬ್ಬರಿ 54 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಸದ್ಯ ಹೊಸ ಡಿಪಿಆರ್ ಪ್ರಕಾರ ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಫ್ಲೈ ಓವರ್, ಅಂಡರ್ ಪಾಸ್ ನಿರ್ಮಾಣಕ್ಕೆ ಸೂಚಿಸಲಾಗಿದೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಜನವರಿಯಲ್ಲಿ ನಮ್ಮ ಮೆಟ್ರೋಗೆ ಬರಲಿವೆ ಎರಡು ಹೊಸ ರೈಲು
ಕಳೆದ ಬಾರಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಬಜೆಟ್ಗಳ ಪ್ರಕಾರ ಹಲವು ಯೋಜನೆಗಳಿಗೆ ಡಿಪಿಆರ್ ಸಿದ್ಧಮಾಡಲಾಗಿತ್ತು. ಇತ್ತ ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಕೂಡ ಕೆಲವು ಯೋಜನೆಗಳ ಮೂಲಕ ರಾಜಧಾನಿಯ ಟ್ರಾಫಿಕ್ ಕಂಟ್ರೋಲ್ ಭರವಸೆ ನೀಡಿದ್ದರು. ಇದೀಗ ಆ ಭರವಸೆಗಳು ಈಡೇರುವ ಮೊದಲೇ ಪಾಲಿಕೆ ಇನ್ನೊಂದು ಡಿಪಿಆರ್ ಸಿದ್ಧಪಡಿಸಿಕೊಂಡಿದೆ. ಸದ್ಯ ದೆಹಲಿ ಮೂಲದ ಕಂಪನಿ ಮೂಲಕ ರೆಡಿಯಾಗಿರೋ ಡಿಪಿಆರ್ಗೆ ಸರ್ಕಾರ ಹಸಿರು ನಿಶಾನೆ ತೋರಲಿದೆಯೇ? ಈ ಹೊಸ ಪ್ಲಾನ್ ಜಾರಿಯಾದ್ರೆ ರಾಜಧಾನಿಯ ಟ್ರಾಫಿಕ್ಗೆ ಮುಕ್ತಿ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ