ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಜನವರಿಯಲ್ಲಿ ನಮ್ಮ ಮೆಟ್ರೋಗೆ ಬರಲಿವೆ ಎರಡು ಹೊಸ ರೈಲು
ನಮ್ಮ ಮೆಟ್ರೋದಲ್ಲಿ ದಿನದಿಂದ ದಿನಕ್ಕೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿದಿನ 9 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಿದ್ದಾರೆ. ಕಾಲಿಡಲು ಜಾಗವಿಲ್ಲದಷ್ಟು ರಷ್ ಆಗುತ್ತಿದೆ. ಹಾಗಾಗಿ ಬಿಎಂಆರ್ಸಿಎಲ್ 21 ರೈಲು ಆರ್ಡರ್ ಮಾಡಿದ್ದು, ಮೊದಲ ಹಂತದಲ್ಲಿ ಜನವರಿಯಲ್ಲಿ ಒಂದು ರೈಲು ಬರಲಿದೆ. ಇತ್ತ ಬಹುನಿರೀಕ್ಷಿತ ಹಳದಿ ಮಾರ್ಗಕ್ಕೆ ಮತ್ತೊಂದು ಡ್ರೈವರ್ಲೆಸ್ ರೈಲು ಜನವರಿಯಲ್ಲಿ ಬರಲಿದೆ.
ಬೆಂಗಳೂರು, ಡಿಸೆಂಬರ್ 25: ನಮ್ಮ ಮೆಟ್ರೋ ಹಸಿರು ಮತ್ತು ನೇರಳೆ ಎರಡು ಮಾರ್ಗದಲ್ಲಿ ಪ್ರತಿದಿನ 9 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಸದ್ಯ ಹಸಿರು ಮಾರ್ಗದಲ್ಲಿ 22 ರೈಲುಗಳು, ನೇರಳೆ ಮಾರ್ಗದಲ್ಲಿ 32 ರೈಲುಗಳು ಕಾರ್ಯಾಚರಣೆ ಮಾಡುತ್ತಿದ್ದರೆ, ಸ್ಪೇರ್ ಆಗಿ 3 ರೈಲುಗಳಿವೆ. ಒಟ್ಟು ಎರಡು ಮಾರ್ಗದಲ್ಲಿ 57 ರೈಲುಗಳಿವೆ. ಆದರೆ ರೈಲಿನಲ್ಲಿ ಪ್ರಯಾಣಿಕರಿಗೆ ಜಾಗ ಸಾಲುತ್ತಿಲ್ಲ. ಕಾಲಿಡಲು ಜಾಗವಿಲ್ಲದಷ್ಟು ರಷ್ ಆಗುತ್ತಿವೆ. ಇದರಿಂದ ಮೆಟ್ರೋ 21 ಹೊಸ ರೈಲುಗಳ ಖರೀದಿಗೆ ಆರ್ಡರ್ ಮಾಡಿದ್ದು, ಮೊದಲ ಹಂತದಲ್ಲಿ ಜನವರಿ 10 ರಂದು ಮೊದಲ ರೈಲು ಪೀಣ್ಯ ಡಿಪೋ ತಲುಪಲಿದೆ. ನಂತರ ಪ್ರತಿ ಒಂದು, ಎರಡು ತಿಂಗಳಿಗೆ ಒಂದೊಂದು ರೈಲುಗಳು ಸೇರ್ಪಡೆ ಆಗಲಿದೆ ಎಂದು ಬಿಎಂಆರ್ಸಿಎಲ್ ಸಾರ್ವಜನಿಕ ಮುಖ್ಯ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ತಿಳಿಸಿದ್ದಾರೆ.
ಬಿಎಂಆರ್ಸಿಎಲ್ ಈ ಕ್ರಮದಿಂದ ಹಸಿರು ಮತ್ತು ನೇರಳೆ ಮಾರ್ಗದ ಪ್ರಯಾಣಿಕರಿಗೆ ತುಂಬಾ ಸಹಾಯ ಆಗಲಿದೆ.
ಇತ್ತ ಬಹು ನಿರೀಕ್ಷಿತ ಆರ್ವಿ ರೋಡ್- ಬೊಮ್ಮಸಂದ್ರ ಹಳದಿ ಮಾರ್ಗದ ಮೆಟ್ರೋ ಮಾರ್ಗದಲ್ಲಿ ಸದ್ಯ ಒಂದು ಚಾಲಕರಹಿತ ರೈಲಿದ್ದು, ಹೊಸ ವರ್ಷಕ್ಕೆ ಅಂದರೆ ಜನವರಿ 15 ಕ್ಕೆ ಚೀನಾದಿಂದ ನಮ್ಮ ಮೆಟ್ರೋಗೆ ಎರಡನೇ ರೈಲು ಬರಲಿದೆ. ಟಿಆರ್ಎಸ್ಎಸ್ಎಲ್ ಕಂಪನಿ ಕಳಿಳುಹಿಸುತ್ತಿರುವ ರೈಲು ಜ.15 ಕ್ಕೆ ಹೆಬ್ಬಗೋಡಿ ಡಿಪೋ ತಲುಪಲಿದೆ. 2023 ಫೆಬ್ರವರಿಯಿಂದ ಚೀನಾದಿಂದ ಬಂದಿರುವ ಒಂದು ಚಾಲಕ ರಹಿತ ಪ್ರೋಟೋಟೈಪ್ ರೈಲಿನ ತಪಾಸಣೆ ಈಗಾಗಲೇ ನಡೆಯುತ್ತಿದೆ. ಸಿಬಿಟಿಸಿ (ಕಮ್ಯೂನಿಕೇಶನ್ಸ್ ಬೇಸ್ಡ್ ಟ್ರೈನ್ ಕಂಟ್ರೋಲ್) ತಂತ್ರಜ್ಞಾನದಿಂದ ರೈಲು ಸಂಚಾರ ಮಾಡುತ್ತಿದೆ. ಚೀನಾದಿಂದ 3 ನೇ ರೈಲು ಬಂದ ಬಳಿಕ ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಿಸಲು ನಮ್ಮ ಮೆಟ್ರೋ ಪ್ಲಾನ್ ಮಾಡಿಕೊಂಡಿದೆ.
ಬಿಎಂಆರ್ಸಿಎಲ್ ಹಾಗೂ ರೈಲ್ವೆ ಮಂಡಳಿಯ ಒಪ್ಪಿಗೆ ಪಡೆದು 15 ನಿಮಿಷಕ್ಕೊಂದರಂತೆ ರೈಲು ಕಾರ್ಯಚರಣೆ ಮಾಡಲಿದೆ. ಈ ಮಾರ್ಗಕ್ಕೆ ಒಟ್ಟು 13 ರೈಲುಗಳನ್ನು ಆರ್ಡರ್ ಮಾಡಲಾಗಿದ್ದು, ಸದ್ಯ ಒಂದು ರೈಲಿದ್ದು ಜನವರಿಯಲ್ಲಿ ಮತ್ತೊಂದು ರೈಲು ಬರಲಿದೆ. ಮಿಕ್ಕ 11 ರೈಲು ಪ್ರತಿ ಒಂದು ಅಥವಾ ಎರಡು ತಿಂಗಳಿಗೊಂದರಂತೆ ಬರಲಿವೆ.
ಇದನ್ನೂ ಓದಿ: ಕೆಎಸ್ಆರ್ಟಿಸಿ ಬಸ್ನಲ್ಲಿನ್ನು ಚಿಲ್ಲರೆ ಚಿಂತೆ ಬೇಡ: ಎಲ್ಲ ಬಸ್ಗಳಿಗೂ ವಿಸ್ತರಣೆಯಾಯ್ತು ಕ್ಯುಆರ್ ಕೋಡ್ ಟಿಕೆಟ್
ಒಟ್ಟಿನಲ್ಲಿ ಹಸಿರು ಮತ್ತು ನೇರಳೆ ಮಾರ್ಗದ ಪ್ರಯಾಣಿಕರ ಕಿರಿಕಿರಿಗೆ ಬ್ರೇಕ್ ಬೀಳಲಿದ್ದರೆ, ಇತ್ತ ಬೆಂಗಳೂರಿನ ಬಹುನಿರೀಕ್ಷಿತ ಹಳದಿ ಮೆಟ್ರೋಗೆ ಚಾಲಕರಹಿತ ರೈಲು ಬರುತ್ತಿರುವುದರಿಂದ ಮೆಟ್ರೋ ಪ್ರಯಾಣಿಕರಿಗೆ ಹೊಸ ವರ್ಷ ಡಬಲ್ ಡಬಲ್ ಗುಡ್ ನ್ಯೂಸ್ ಎಂದೇ ಹೇಳಬಹುದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ