ಕೆಎಸ್​ಆರ್​ಟಿಸಿ ಬಸ್​ನಲ್ಲಿನ್ನು ಚಿಲ್ಲರೆ ಚಿಂತೆ ಬೇಡ: ಎಲ್ಲ ಬಸ್​ಗಳಿಗೂ ವಿಸ್ತರಣೆಯಾಯ್ತು ಕ್ಯುಆರ್ ಕೋಡ್ ಟಿಕೆಟ್

ಕೆಎಸ್‌ಆರ್‌ಟಿಸಿ ಬಹುತೇಕ ಎಲ್ಲಾ ಬಸ್‌ಗಳಲ್ಲಿ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಯುಪಿಐ ಆ್ಯಪ್ ಮೂಲಕ ಟಿಕೆಟ್‌ಗೆ ದುಡ್ಡು ಪಾವತಿಸಲು ಇದರಿಂದ ಸುಲಭವಾಗಲಿದೆ. ಕಂಡಕ್ಟರ್‌ಗಳಿಗೆ ಇಟಿಎಂ ಯಂತ್ರಗಳನ್ನು ನೀಡಲಾಗಿದೆ. ಡಿಜಿಟಲ್ ಪಾವತಿಗಳನ್ನು ಹೆಚ್ಚಿಸುವ ಗುರಿ ಹೊಂದಿರುವುದಾಗಿ ಕೆಎಸ್‌ಆರ್‌ಟಿಸಿ ತಿಳಿಸಿದೆ.

ಕೆಎಸ್​ಆರ್​ಟಿಸಿ ಬಸ್​ನಲ್ಲಿನ್ನು ಚಿಲ್ಲರೆ ಚಿಂತೆ ಬೇಡ: ಎಲ್ಲ ಬಸ್​ಗಳಿಗೂ ವಿಸ್ತರಣೆಯಾಯ್ತು ಕ್ಯುಆರ್ ಕೋಡ್ ಟಿಕೆಟ್
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Dec 04, 2024 | 7:58 AM

ಬೆಂಗಳೂರು, ಡಿಸೆಂಬರ್ 4: ಇನ್ನು ಮುಂದೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸುವಾಗ ಕಂಡಕ್ಟರ್ ಜತೆ ಚಿಲ್ಲರೆಗಾಗಿ ಜಗಳ ಮಾಡಬೇಕಿಲ್ಲ! ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಬಹುತೇಕ ಎಲ್ಲ ಕೆಎಸ್​ಆರ್​​ಟಿಸಿ ಬಸ್​ಗಳಿಗೂ ಇದೀಗ ವಿಸ್ತರಣೆಯಾಗಿದ್ದು, ಯುಪಿಐ ಆ್ಯಪ್ ಮೂಲಕವೇ ಟಿಕೆಟ್ ಹಣ ಪಾವತಿ ಮಾಡಬಹುದಾಗಿದೆ. ಸುಮಾರು 9,000 ಬಸ್‌ಗಳಲ್ಲಿ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಕೆಎಸ್​ಆರ್​​ಟಿಸಿ ಮೂಲಗಳು ತಿಳಿಸಿವೆ.

ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆಯನ್ನು ನವೆಂಬರ್ 6 ರಂದು ಕೆಎಸ್​ಆರ್​​ಟಿಸಿ ಬಸ್​​ಗಳಲ್ಲಿ ಆರಂಭಿಸಲಾಗಿತ್ತು. ಸದ್ಯ ನಿಗಮದ ಎಲ್ಲಾ 8,941 ಬಸ್‌ಗಳಿಗೆ ವಿಸ್ತರಿಸಲಾಗಿದೆ.

ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಆರಂಭದಲ್ಲೇ ಗಣನೀಯ ಯಶಸ್ಸನ್ನು ಸಾಧಿಸಿದೆ. ಸಂಸ್ಥೆಯ ದೈನಂದಿನ ಆದಾಯದ 7 ಕೋಟಿ ರೂ. (ಶಕ್ತಿ ಯೋಜನೆ ಮತ್ತು ವಿದ್ಯಾರ್ಥಿ ಪಾಸ್ ಫಲಾನುಭವಿಗಳನ್ನು ಹೊರತುಪಡಿಸಿ) ಪೈಕಿ 30-40 ಲಕ್ಷ ರೂಪಾಯಿ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಮೂಲಕವೇ ಪಾವತಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ಎನಿವೇರ್ ಎನಿಟೈಮ್ ಅಡ್ವಾನ್ಸ್ಡ್ ರಿಸರ್ವೇಶನ್ ಸಿಸ್ಟಮ್ (ಅವತಾರ್) ಮೂಲಕ 28,000 ಬುಕಿಂಗ್‌ಗಳಿಂದ ಕೆಎಸ್‌ಆರ್‌ಟಿಸಿ ಇನ್ನೂ 1.5 ಕೋಟಿ ರೂಪಾಯಿ ಆದಾಯ ಸಂಗ್ರಹಿಸಿದೆ.

2024-25 ಆರ್ಥಿಕ ವರ್ಷದ ಅಂತ್ಯದ ವೇಳೆಗೆ, ತನ್ನ ದೈನಂದಿನ ಆದಾಯದ ಶೇ 60-70 ರಷ್ಟನ್ನು ಡಿಜಿಟಲ್ ಮತ್ತು ಕ್ಯುಆರ್ ಪಾವತಿ ವಿಧಾನಗಳ ಮೂಲಕ ಪಡೆಯುವ ಗುರಿಯನ್ನು ಕೆಎಸ್​ಆರ್​ಟಿಸಿ ಹೊಂದಿದೆ.

ಕಂಡಕ್ಟರ್​ಗಳ ಕೈಗೆ ಬಂತು ಇಟಿಎಂ ಮಷಿನ್

ಯುಪಿಐ ಪಾವತಿ ಸುಲಭಗೊಳಿಸಲು ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳ (ಇಟಿಎಂ) ನಿಯೋಜನೆಯೊಂದಿಗೆ ಪ್ರಾಯೋಗಿಕ ಆಧಾರದ ಮೇಲೆ ಕ್ಯುಆರ್ ಪಾವತಿ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. ನವೆಂಬರ್ 11 ರ ಹೊತ್ತಿಗೆ, ಎಲ್ಲಾ 83 ಡಿಪೋಗಳು ತಲಾ ಐದು ಯಂತ್ರಗಳನ್ನು ಪಡೆದಿವೆ ಮತ್ತು ನವೆಂಬರ್ 18 ರ ಹೊತ್ತಿಗೆ, ಪ್ರತಿಯೊಂದು ಬಸ್‌ಗಳು ಅವುಗಳನ್ನು ಅಳವಡಿಸಿಕೊಂಡಿವೆ.

ಕ್ಯುಆರ್ ಕೋಡ್ ಆಧಾರಿತ ಟಿಕೆಟ್ ಪಾವತಿ ವ್ಯವಸ್ಥೆಯು ಎಲ್ಲಾ ಕೆಎಸ್ಆರ್​ಟಿಸಿ ಬಸ್​​ಗಳಲ್ಲಿ ಲಭ್ಯವಿದೆ. ಸುಮಾರು ಒಂದು ವರ್ಷದಲ್ಲಿ, ನಮ್ಮ ದೈನಂದಿನ ಆದಾಯದ ಪ್ರಮುಖ ಭಾಗವು ಡಿಜಿಟಲ್ ಮತ್ತು ಕ್ಯುಆರ್ ಪಾವತಿಗಳಿಂದ ಬರುತ್ತದೆ ಎಂಬ ಭರವಸೆ ಹೊಂದಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಇದನ್ನೂ ಓದಿ: ಮುಷ್ಕರದಲ್ಲಿ ಭಾಗಿಯಾಗಿದ್ದಕ್ಕೆ ಇನ್ಶೂರೆನ್ಸ್, ರಜೆ, ಗ್ಯಾಚ್ಯುಯಿಟಿ ಕಟ್: ಬಿಎಂಟಿಸಿ ವಿರುದ್ಧ ನೌಕರರ ಆಕ್ರೋಶ

ಕೆಎಸ್‌ಆರ್‌ಟಿಸಿ ಪ್ರಕಾರ, ಕ್ಯುಆರ್​​ ಕೋಡ್ ಪಾವತಿ ವ್ಯವಸ್ಥೆ ಅಳವಡಿಸಿದ ಕೆಲವೇ ಸಾರಿಗೆ ನಿಗಮಗಳಲ್ಲಿ ಕರ್ನಾಟಕದ್ದು ಒಂದಾಗಿದೆ. ಡೈನಾಮಿಕ್ ಕ್ಯುಆರ್​​ ಆಧಾರಿತ ಪಾವತಿ ವ್ಯವಸ್ಥೆಯನ್ನು ಜಾರಿಗೆ ತಂದಿರುವುದು ಕರ್ನಾಟಕದಲ್ಲಿಯೇ ಮೊದಲು. ಪಾವತಿಗಳಿಗಾಗಿ ಇದು ಯಾವುದೇ ಮಧ್ಯವರ್ತಿ ಶುಲ್ಕವನ್ನು ವಿಧಿಸುವುದಿಲ್ಲ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ