ಮುಷ್ಕರದಲ್ಲಿ ಭಾಗಿಯಾಗಿದ್ದಕ್ಕೆ ಇನ್ಶೂರೆನ್ಸ್, ರಜೆ, ಗ್ಯಾಚ್ಯುಯಿಟಿ ಕಟ್: ಬಿಎಂಟಿಸಿ ವಿರುದ್ಧ ನೌಕರರ ಆಕ್ರೋಶ

ಬಿಎಂಟಿಸಿಯಲ್ಲಿ ಮುಷ್ಕರ ಮಾಡಿದರು ಎಂಬ ಒಂದೇ ಕಾರಣಕ್ಕೆ ನೌಕರರ ಸೌಲಭ್ಯಗಳ ಕಡಿತ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ನೌಕರರು ಕಾರ್ಮಿಕ ಇಲಾಖೆಗೆ ದೂರು ನೀಡಿದ್ದರು. ಅದರಂತೆ ಇಲಾಖೆಯು ಬಿಎಂಟಿಸಿಗೆ ನೋಟಿಸ್ ನೀಡಿ ಸಭೆಗೆ ಹಾಜರಾಗಲು ಸೂಚಿಸಿತ್ತು. ಆದರೆ ಈ ನೋಟಿಸ್​ಗೂ ಬಿಎಂಟಿಸಿ ಕ್ಯಾರೆ ಅಂದಿಲ್ಲ.

ಮುಷ್ಕರದಲ್ಲಿ ಭಾಗಿಯಾಗಿದ್ದಕ್ಕೆ ಇನ್ಶೂರೆನ್ಸ್, ರಜೆ, ಗ್ಯಾಚ್ಯುಯಿಟಿ ಕಟ್: ಬಿಎಂಟಿಸಿ ವಿರುದ್ಧ ನೌಕರರ ಆಕ್ರೋಶ
ಸಾಂದರ್ಭಿಕ ಚಿತ್ರ
Follow us
Kiran Surya
| Updated By: Ganapathi Sharma

Updated on: Dec 04, 2024 | 7:25 AM

ಬೆಂಗಳೂರು, ಡಿಸೆಂಬರ್ 4: ಕರ್ನಾಟಕ ಸಾರಿಗೆಯ ನಾಲ್ಕು ನಿಗಮಗಳ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನೌಕರರು 2021 ರ ಏಪ್ರಿಲ್- 7 ರಿಂದ 23 ರವರೆಗೆ 17 ದಿನಗಳ ಕಾಲ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಮುಷ್ಕರ ಹೂಡಿದ್ದರು. ನಾಲ್ಕು ನಿಗಮಗಳಿಂದ ಸುಮಾರು 8 ಸಾವಿರ ಚಾಲಕರನ್ನು ಬಿಎಂಟಿಸಿ ಒಂದರಲ್ಲೇ ವಜಾ ಮಾಡಲಾಗಿತ್ತು. ವಜಾಗೊಂಡ ನೌಕರರು ಕೋರ್ಟ್ ಮೆಟ್ಟಿಲೇರಿದ್ದರು. ನೌಕರರಿಗೆ ಕೆಲಸ ನೀಡಬೇಕು ಅಥವಾ ಸಂಬಳ ನೀಡಬೇಕೆಂದು ಕೋರ್ಟ್​ಆದೇಶ ಹೊರಡಿಸಿತ್ತು. ಇದರಿಂದ ಕೆರಳಿ ಕೆಂಡವಾಗಿರುವ ಬಿಎಂಟಿಸಿಯ ಅಧಿಕಾರಿಗಳು, ನಮ್ಮನ್ನು ಧಿಕ್ಕರಿಸಿ ಕೋರ್ಟ್ ಆದೇಶದ ಮೂಲಕ ಕರ್ತವ್ಯಕ್ಕೆ ಬಂದಿದ್ದಾರೆ ಎಂಬ ಒಂದೇ ಕಾರಣಕ್ಕಾಗಿ 480 ಕ್ಕೂ ಹೆಚ್ಚಿನ ಚಾಲಕ, ನಿರ್ವಾಹಕರಿಗೆ ಪ್ರತಿದಿನ ನರಕ ತೋರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕಾರ್ಮಿಕ ಇಲಾಖೆ ನೋಟಿಸ್​ಗಿಲ್ಲ ಕಿಮ್ಮತ್ತು

ಈ ಬಗ್ಗೆ ಸಾರಿಗೆ ನೌಕರರ ಮುಖಂಡರು ಕಾರ್ಮಿಕ ಇಲಾಖೆಗೆ ದೂರು ನೀಡಿದ್ದರು. ಕಾರ್ಮಿಕ ಇಲಾಖೆಯ ಉಪಕಾರ್ಮಿಕ ಆಯುಕ್ತ ಸೋಮಣ್ಣ ಬಿಎಂಟಿಸಿಯ ಡಿವಿಜನಲ್ ಕಂಟ್ರೋಲರ್ (ಡಿಸಿ) ನಾರ್ಥ್ ಜೋನ್ ಅವರಿಗೆ ನೋಟಿಸ್ ನೀಡಿ, ಮಂಗಳವಾರ ಮಧ್ಯಾಹ್ನ – 3 ಗಂಟೆಗೆ ಸಭೆಗೆ ಹಾಜರಾಗಲು ಸೂಚನೆ ನೀಡಿದ್ದರು. ಆದರೆ ಕಾರ್ಮಿಕ ಇಲಾಖೆಯಲ್ಲಿ ನಡೆದ ಸಭೆಗೆ ಬಿಎಂಟಿಸಿಯ ಡಿಸಿ ಬರಲೇ ಇಲ್ಲ. ಕಾರ್ಮಿಕ ಇಲಾಖೆಯ ಉಪ ಆಯುಕ್ತ ಸೋಮಣ್ಣ ಅವರ ನೇತೃತ್ವದಲ್ಲಿಯೇ ನೌಕರರ ಸಭೆ ನಡೆಯಿತು. ಈ ಬಗ್ಗೆ ಸಾರಿಗೆ ನೌಕರರ ಮುಖಂಡ ಜಗದೀಶ್ ಬಿಎಂಟಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋರ್ಟ್ ಆದೇಶದ ಮೂಲಕ ಕರ್ತವ್ಯಕ್ಕೆ ಬಂದಿರುವ ಚಾಲಕ, ನಿರ್ವಾಹಕರಿಗೆ ಬಿಎಂಟಿಸಿಯಿಂದ ಸಿಗಬೇಕಾದ ಯಾವುದೇ ಸೌಲಭ್ಯಗಳನ್ನು ಕೊಡುತ್ತಿಲ್ಲ ಎಂಬ ಆರೋಪವೂ ಇದೆ.

ಇನ್ಶೂರೆನ್ಸ್, ಗ್ಯಾಚ್ಯುಯಿಟಿ ಕಡಿತದ ಆರೋಪ

ಮೊದಲನೆಯದಾಗಿ ಬಿಎಂಟಿಸಿ ಚಾಲಕ, ನಿರ್ವಾಹಕ ಮೃತಪಟ್ಟರೆ ಇನ್ಶೂರೆನ್ಸ್ ಹಣ ನಿಗಮದಿಂದ 10 ಲಕ್ಷ ರುಪಾಯಿ ಸೇರಿ ಒಟ್ಟು 60 ಲಕ್ಷ ರುಪಾಯಿ ನೀಡಲಾಗುತ್ತದೆ. ಅದನ್ನು ಕೋರ್ಟ್ ಆದೇಶದ ಮೂಲಕ ಕರ್ತವ್ಯಕ್ಕೆ ಬಂದಿರುವ ನೌಕರರಿಗೆ ನೀಡುವುದಿಲ್ಲ ಎಂದು ಬಿಎಂಟಿಸಿ ಹೇಳಿದೆ ಎನ್ನಲಾಗಿದೆ. ಗ್ರಾಚ್ಯುಯಿಟಿ ಅಂತ 20 ರಿಂದ 25 ಲಕ್ಷ ರುಪಾಯಿ ಹಣ ನೀಡಲಾಗುತ್ತಿದ್ದು, ಅದನ್ನೂ ಸಹ ಈ ನೌಕರರಿಗೆ ನೀಡುವುದಿಲ್ಲ ಎಂಬ ಆರೋಪವಿದೆ.

ಅನಾರೋಗ್ಯ ಸಮಸ್ಯೆ ಎದುರಾದರೆ 50 ಸಾವಿರದಿಂದ 1 ಲಕ್ಷ ರುಪಾಯಿ ಅಡೌನ್ಸ್ ನೀಡಲಾಗುತ್ತದೆ. ಆದರೆ ಮುಷ್ಕರ ಮಾಡಿದ್ದರು ಎಂಬ ಕಾರಣಕ್ಕೆ ಅದಕ್ಕೂ ಕತ್ತರಿ ಹಾಕಲಾಗಿದೆ ಎನ್ನಲಾಗಿದೆ. ಮುಷ್ಕರದಲ್ಲಿ ಭಾಗಿಯಾಗಿದ್ದರು ಎಂದು ರಜೆಗಳಲ್ಲಿಯೂ ಕಡಿತ ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಕೆಎಸ್ಆರ್​ಟಿಸಿಯಲ್ಲೂ ನೌಕರರನ್ನು ಡಿಸ್ಮಿಸ್ ಮಾಡಿದ್ದರು. ಆದರೆ ಇಂತಹ ಯಾವುದೇ ತೊಂದರೆ ಕೊಡುತ್ತಿಲ್ಲ. ಬಿಎಂಟಿಸಿಯಲ್ಲಿ ಮಾತ್ರ ಹೀಗ್ಯಾಕೆ ಎಂದು ನೌಕರ ಮುಖಂಡರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಎಂಟಿಸಿ ಎಂಡಿ ಹೇಳುವುದೇನು?

ಈ ಬಗ್ಗೆ ಬಿಎಂಟಿಸಿಯ ಎಂಡಿ ರಾಮಚಂದ್ರನ್ ಪ್ರತಿಕ್ರಿಯಿಸಿದ್ದು, ಡಿಸ್ಮಿಸ್ ಪ್ರಕ್ರಿಯೆ ನಡೆದಿರುವುದು ನಾನು ಬಿಎಂಟಿಸಿ ಎಂಡಿ ಆಗುವ ಮುನ್ನ. ಕೋರ್ಟ್ ಆದೇಶದ ಮೂಲಕ ಕರ್ತವ್ಯಕ್ಕೆ ಹಾಜರಾಗಿರುವ ನೌಕರರಿಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದಾರೆಯೇ ಅಥವಾ ಇಲ್ಲವೇ ಎನ್ನುವ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: Viral: ಕನ್ನಡ Vs ಹಿಂದಿ; ಬೆಂಗಳೂರಿನ ಆಟೋ ಚಾಲಕರು ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದು ಯಾರಿಗೆ ನೋಡಿ…

ಒಟ್ಟಿನಲ್ಲಿ ಡಿಸ್ಮಿಸ್ ಆಗಿರುವ ನೌಕರರ ಸಮಸ್ಯೆ ಬಗೆಹರಿಸಲು ಕಾರ್ಮಿಕ ಇಲಾಖೆ ಬಿಎಂಟಿಸಿ ಸೆಂಟ್ರಲ್ ಡಿಸಿಗೆ ನೋಟಿಸ್ ನೀಡಿ ಸಭೆಗೆ ಹಾಜರಾಗಲು ಸೂಚನೆ ನೀಡಿದ್ದರೂ ಕ್ಯಾರೇ ಅಂದಿಲ್ಲ. ಈ ಬಗ್ಗೆ ಕಾರ್ಮಿಕ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ‌.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ