ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೋರಿ ರಾಜ್ಯಪಾಲರಿಗೆ ಕಡತ ರವಾನಿಸಿದ ಸರ್ಕಾರ
ಭ್ರಷ್ಟಾಚಾರ ದೂರಿನ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕೆಂದು ರಾಜ್ಯ ಸರ್ಕಾರ, ರಾಜ್ಯಪಾಲರಿಗೆ ಮನವಿ ಮಾಡಿದೆ. ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಬಿಎಸ್ವೈ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಆದ್ರೆ, ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ತಿರಸ್ಕರಿಸಿದ್ದರು. ಇದೀಗ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದೆ.
ಬೆಂಗಳೂರು, (ಡಿಸೆಂಬರ್ 03): ಭ್ರಷ್ಟಾಚಾರ ದೂರಿನ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕೆಂದು ರಾಜ್ಯ ಸರ್ಕಾರ, ರಾಜ್ಯಪಾಲರಿಗೆ ಮನವಿ ಮಾಡಿದೆ. ಈ ಹಿಂದೆ ಸಚಿವ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನದಂತೆ ಬಿಡಿಎ ಹೌಸಿಂಗ್ ನಿರ್ಮಾಣ ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಇಂದು(ಡಿಸೆಂಬರ್ 03) ಸರ್ಕಾರ, ರಾಜ್ಯಪಾಲರಿಗೆ ಕಡತ ರವಾನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಏನಾಗುತ್ತೋ ಏನೋ ಎಂದು ಬಿಎಸ್ವೈಗೆ ಢವಢವ ಶುರುವಾಗಿದೆ.
ಬಿಡಿಎ ಹೌಸಿಂಗ್ ನಿರ್ಮಾಣ ಪ್ರಕರಣ ಸಂಬಂಧ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿಗೆ ಅನುಮತಿ ಕೋರಿ ಮತ್ತೊಮ್ಮೆ ರಾಜ್ಯಪಾಲರಿಗೆ ಮನವಿ ಮಾಡಲು ಕಳೆದ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಇಂದು ರಾಜ್ಯಪಲಾರಿಗೆ ಬಿಎಸ್ವೈ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿ ಕಡತ ರವಾನಿಸಿದೆ. ಆದ್ರೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದರ ಮೇಲೆ ಬಿಎಸ್ವೈ ಭವಿಷ್ಯ ನಿರ್ಧಾರವಾಗಲಿದೆ.
ಇದನ್ನೂ ಓದಿ: ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಮತ್ತೆ ಮನವಿ ಮಾಡಿದ ಸರ್ಕಾರ: ಏನಿದು ಕೇಸ್?
ಬಿಡಿಎ ಹೌಸಿಂಗ್ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಜೆ ಅಬ್ರಾಹಂ ದೂರಿನ ಮೇರೆಗೆ 2020ರಲ್ಲೂ ರಾಜ್ಯಪಾಲರಿಗೆ ಅನುಮತಿ ಕೋರಿ ಕಡತ ಮಂಡಿಸಲಾಗಿತ್ತು. ಆದರೆ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ರಾಜ್ಯಪಾಲರು ತಿರಸ್ಕರಿಸಿದ್ದರು. ಈಗ ಮತ್ತೊಮ್ಮೆ ಸಿದ್ದರಾಮಯ್ಯ ಸರ್ಕಾರ, ಅನುಮತಿ ಮರುಪರಿಶೀಲಿಸುವಂತೆ ಕೋರಿ ಕಡತ ಕಳುಹಿಸಿದೆ.
ಪ್ರಕರಣದ ಹಿನ್ನೆಲೆ:
ಟಿ.ಜೆ. ಅಬ್ರಹಾಂ 2020ರ ನ.19 ರಂದು ಎಸಿಬಿಗೆ ದೂರು ನೀಡಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆ, ಅಕ್ರಮ ಹಣ ವರ್ಗಾವಣೆ ಕಾಯಿದೆ 2002ರ ಅಡಿ ಯಡಿಯೂರಪ್ಪ ಹಾಗೂ ಕುಟುಂಬ ಸದಸ್ಯರ ವಿರುದ್ದ ಕ್ರಮಕ್ಕೆ ಮನವಿ ಮಾಡಿದ್ದರು. ಆದರೆ, ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಹಾಲಿ ಮುಖ್ಯಮಂತ್ರಿಗಳಾಗಿರುವ ಯಡಿಯೂರಪ್ಪ ವಿರುದ್ಧ ವಿಚಾರಣೆಗೆ ರಾಜ್ಯಪಾಲರ ಅನುಮತಿ ಅಗತ್ಯ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಟಿ.ಜೆ. ಅಬ್ರಹಾಂ ಅವರು ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ತಿರಸ್ಕರಿಸಿ ದ್ದರು. ಪ್ರಸ್ತುತ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದೆ. ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಗದ ಕಾರಣ ಉಳಿದ ಆರೋಪಿಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ.
ಏನಿದು ಭ್ರಷ್ಟಾಚಾರ?:
2017ರ ಬೆಂಗಳೂರಿನ ಬಿದರಹಳ್ಳಿಯ ಕೋನದಾಸಪುರದಲ್ಲಿ 1 ಮತ್ತು 3 ಬಿಎಚ್‌ಕೆ ಫ್ ಲ್ಯಾಟ್ ನಿರ್ಮಾಣಕ್ಕೆ 567 ಕೋಟಿ ರು. ಅಂದಾಜು ವೆಚ್ಚದಲ್ಲಿ ಟೆಂಡರ್ ಆಹ್ವಾನಿಸಿತ್ತು. ಈ ವೇಳೆ ರಾಮಲಿಂಗಂ ಕನ್‌ಕ್ಷನ್ ಕಂಪೆನಿ 666.22 ಕೋಟಿ ರು.ಗೆ (ಅಂದಾಜು ವೆಚ್ಚಕ್ಕಿಂತ 99.22 ಕೋಟಿ ರು. ಹೆಚ್ಚು) ಹಾಗೂ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ 691.74 ಕೋಟಿ ರು.ಗೆ (ಅಂದಾಜು ವೆಚ್ಚಕ್ಕಿಂತ 124.74 ಕೋಟಿ ರು. ಹೆಚ್ಚು) ಬಿಡ್ ಮಾಡಿದ್ದವು. ನಂತರ 2019ರ ಜು.6 ರಂದು ಬಿ.ಎಸ್. ಯಡಿಯೂರಪ ಅವರು ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು.
ಯಡಿಯೂರಪ್ಪ ಸೂಚನೆ ಮೇರೆಗೆ ಡಾ.ಜಿ.ಸಿ. ಪ್ರಕಾಶ್ ಬಿಡಿಎ ಆಯುಕ್ತರಾಗಿ ನೇಮಕಗೊಂಡರು. ‘ಈ ವೇಳೆ ಯಡಿಯೂರಪ್ಪ ಅವರ ಹೆಸರು ಹೇಳಿ ಆಯುಕ್ತರು ರಾಮಲಿಂಗಂ ಬಿಲ್ಡರ್ ಬಳಿ 12 ಕೋಟಿ ರು. ಲಂಚ ಪಡೆದಿದ್ದರು. ಕೆ. ರವಿ ಎಂಬಾತ 12 ಕೋಟಿ ರು. ಹಣವನ್ನು ಪ್ರಕಾಶ್ ಅವರಿಂದ ಪಡೆದು ಬಿ.ವೈ. ವಿಜಯೇಂದ್ರ ಅವರಿಗೆ ಮುಟ್ಟಿಸಿದ್ದ. ವಿಜಯೇಂದ್ರ ಅವರು ಲಂಚದ ಬಗ್ಗೆ ಮಾತನಾಡಿರುವ ಆಡಿಯೋ ಕೂಡ ಲಭ್ಯವಾಗಿತ್ತು’ ಎಂಬುದು ಟಿ.ಜೆ. ಅಬ್ರಹಾಂ ಆರೋಪ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:51 pm, Tue, 3 December 24