ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಪಾಲಿಕೆ ಹೊಸ ಪ್ಲಾನ್: ಬರೋಬ್ಬರಿ 54 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ಸಿದ್ಧ

ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆ ಮುಗಿಯದ ಕತೆಯಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಟ್ರಾಫಿಕ್ ನಿಯಂತ್ರಣಕ್ಕೆ ಬಿಬಿಎಂಪಿ ಇದೀಗ ಹೊಸ ಯೋಜನೆ ರೂಪಿಸುತ್ತಿದೆ. ದೆಹಲಿ ಮೂಲದ ಖಾಸಗಿ ಕಂಪನಿ ಮೊರೆಹೋಗಿರುವ ಪಾಲಿಕೆ, ಸಂಸ್ಥೆ ಸಿದ್ಧಪಡಿಸಿರುವ ಡಿಪಿಆರ್ ಅನ್ನು ಆಯುಕ್ತರಿಗೆ ಸಲ್ಲಿಸಿದೆ. ಬರೋಬ್ಬರಿ 54 ಕೋಟಿ ರೂ. ವೆಚ್ಚದಲ್ಲಿ ರೂಪಿಸಲಾಗುತ್ತಿರುವ ಈ ಯೋಜನೆ ಜಾರಿಯಾದರೆ ರಾಜಧಾನಿಯ ಹಲವೆಡೆ ಹೊಸ ಸ್ಕೈ ವಾಕ್​​​ಗಳು, ಅಂಡರ್ ಪಾಸ್​ಗಳು ತಲೆ ಎತ್ತಲಿವೆ. ಎಲ್ಲೆಲ್ಲಿ ಅವುಗಳ ನಿರ್ಮಾಣವಾಗಲಿದೆ ಎಂಬ ವಿವರ ಇಲ್ಲಿದೆ.

ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಪಾಲಿಕೆ ಹೊಸ ಪ್ಲಾನ್: ಬರೋಬ್ಬರಿ 54 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ಸಿದ್ಧ
ಬೆಂಗಳೂರು ಟ್ರಾಫಿಕ್ (ಸಾಂದರ್ಭಿಕ ಚಿತ್ರ)
Follow us
ಶಾಂತಮೂರ್ತಿ
| Updated By: Ganapathi Sharma

Updated on: Dec 25, 2024 | 9:02 AM

ಬೆಂಗಳೂರು, ಡಿಸೆಂಬರ್ 25: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಜನರನ್ನೂ ಬಿಟ್ಟೂಬಿಡದೆ ಕಾಡುತ್ತಿದೆ. ಬೆಂಗಳೂರಿಗರ ಅರ್ಧಜೀವನ ಟ್ರಾಫಿಕ್​ನಲ್ಲೇ ಕಳೆದುಹೋಗುತ್ತಿದ್ದು, ಇತ್ತ ಬ್ರ್ಯಾಂಡ್ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಹಾಕಲು ಪಾಲಿಕೆ ಹೊಸ ಯೋಜನೆ ರೂಪಿಸಲು ಸಜ್ಜಾಗಿದೆ. ಸದ್ಯ ದೆಹಲಿ ಮೂಲದ ಖಾಸಗಿ ಕಂಪನಿ ಜೊತೆ ಕೈಜೋಡಿಸಿರುವ ಪಾಲಿಕೆ ಹೊಸ ಡಿಪಿಆರ್ ಸಿದ್ಧಪಡಿಸಿದ್ದು, ಇದರಲ್ಲಿ ರಾಜಧಾನಿಯ ಸಂಚಾರ ವ್ಯವಸ್ಥೆ ಹಾಗೂ ಟ್ರಾಫಿಕ್ ಕಂಟ್ರೋಲ್​ಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ವರದಿ ಸಿದ್ಧವಾಗಿದೆ. ಸದ್ಯ ಈ ವರದಿಯನ್ನು ಬಿಬಿಎಂಪಿಯ ಮುಖ್ಯ ಆಯುಕ್ತರಿಗೆ ಸಲ್ಲಿಸಲಾಗಿದೆ.

54 ಕೋಟಿ ರೂ. ವೆಚ್ಚದಲ್ಲಿ ಯೋಜನೆ

ಈ ಹೊಸ ಡಿಪಿಆರ್​ನಲ್ಲಿ ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಫ್ಲೈ ಓವರ್​ಗಳ ನಿರ್ಮಾಣ, ಟನಲ್ ರೋಡ್​​​ಗಳನ್ನು ನಿರ್ಮಿಸಿದರೆ ಟ್ರಾಫಿಕ್ ಸಮಸ್ಯೆಗೆ ಸ್ವಲ್ಪ ಮಟ್ಟಿನ ಮುಕ್ತಿ ಸಿಗಬಹುದು ಎಂದು ಉಲ್ಲೇಖಿಸಲಾಗಿದೆ. ಇದಕ್ಕಾಗಿ ಬರೋಬ್ಬರಿ 54 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಸದ್ಯ ಹೊಸ ಡಿಪಿಆರ್ ಪ್ರಕಾರ ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಫ್ಲೈ ಓವರ್, ಅಂಡರ್ ಪಾಸ್ ನಿರ್ಮಾಣಕ್ಕೆ ಸೂಚಿಸಲಾಗಿದೆ.

ಎಲ್ಲೆಲ್ಲಿ ಫ್ಲೈ ಓವರ್, ಅಂಡರ್ ಪಾಸ್, ಟನಲ್ ನಿರ್ಮಾಣ?

  • ಎಂಇಐ ಜಂಕ್ಷನ್ ಬಳಿ ಫ್ಲೈಓವರ್ ವಿಭಜನೆ.
  • ಕೋಣನಕುಂಟೆ ಕ್ರಾಸ್​ನಿಂದ ಬನಶಂಕರಿವರೆಗೂ ಅಂಡರ್ ಪಾಸ್ ಅಥವಾ ಫ್ಲೈಓವರ್ ನಿರ್ಮಾಣ.
  • ಅನಂದ್ ಸರ್ಕಲ್ ಬಳಿ ಇರುವ ಫ್ಲೈಓವರ್ ಕೆಆರ್ ಸರ್ಕಲ್ ವರೆಗೂ ವಿಸ್ತರಣೆ.
  • ಕನಕಪುರ ರಸ್ತೆಯ ಆನಂದ್ ಭವನ, ರಘುವನಹಳ್ಳಿವರೆಗೂ ಫ್ಲೈಓವರ್.
  • ಮಡಿವಾಳ ಅಂಡರ್ ಪಾಸ್ ಅನ್ನು ಟ್ರಾಫಿಕ್ ಪೊಲೀಸ್ ಸ್ಟೇಷನ್ ಜಂಕ್ಷನ್‌ವರೆಗೂ ಮುಂದುವರಿಸಲು ಪ್ಲಾನ್.
  • ಹೊಸೂರು ರೋಡ್​ನಿಂದ ಶೋಲೆ ಸರ್ಕಲ್ ವರೆಗೂ ಎಲಿವೆಟೆಡ್ ಕಾರಿಡಾರ್.
  • ಮೈಸೂರು ರಸ್ತೆಯ ಸಿರ್ಸಿ ಸರ್ಕಲ್​ನಿಂದ ನಾಯಂಡನಹಳ್ಳಿವರೆಗೂ ಎಲಿವೆಟೆಡ್ ಕಾರಿಡಾರ್.
  • ಹಳೇ ಮದ್ರಾಸ್ ರಸ್ತೆಯಿಂದ ವಿವೇಕಾನಂದ ಮೆಟ್ರೋ ಸ್ಟೇಷನ್‌ವರೆಗೂ ಎಲೆವೆಟೆಡ್ ಕಾರಿಡಾರ್.
  • ನಾಗವಾರ ಜಂಕ್ಷನ್​ನಿಂದ ರಾಮಕೃಷ್ಣ ಹೆಗ್ಡೆನಗರ ಜಂಕ್ಷನ್ ವರೆಗೂ ಎಲೆವೆಟೆಡ್ ಕಾರಿಡಾರ್.
  • ಔಟರ್ ರಿಂಗ್ ರೋಡ್, ಹೆಣ್ಣೂರು ಮೆನ್‌ರೋಡ್, ಬಾಗಲೂರು ಜಂಕ್ಷನ್‌ವರೆಗೂ ಲಿಂಕ್ ರಸ್ತೆಗಳ ನಿರ್ಮಾಣ.
  • ಕೆಂಪೇಗೌಡ ಏರ್‌ಪೋರ್ಡ್​ನಿಂದ ಯಲಹಂಕ ನ್ಯೂ ಟೌನ್‌ವರೆಗೂ ಎಲಿವೇಟೆಡ್ ಕಾರಿಡಾರ್.
  • ನಾಗವರ ಜಂಕ್ಷನ್ ನಿಂದ ಮೊದಲಿಯರ್ ರೋಡ್ ಮೂಲಕ ಟ್ಯಾನಿರಿ ರೋಡ್‌ವರೆಗೂ ಎಲಿವೇಟೆಡ್ ಕಾರಿಡಾರ್.
  • ವೆಸ್ಟ್‌ ಆಫ್ ಕಾರ್ಡ್ ರಸ್ತೆಯಿಂದ ರಿಂಗ್‌ರೋಡ್‌ವರೆಗೂ ಎಲಿವೆಟೆಡ್ ಕಾರಿಡಾರ್.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಜನವರಿಯಲ್ಲಿ ನಮ್ಮ ಮೆಟ್ರೋಗೆ ಬರಲಿವೆ ಎರಡು ಹೊಸ ರೈಲು

ಕಳೆದ ಬಾರಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಬಜೆಟ್​​​ಗಳ ಪ್ರಕಾರ ಹಲವು ಯೋಜನೆಗಳಿಗೆ ಡಿಪಿಆರ್ ಸಿದ್ಧಮಾಡಲಾಗಿತ್ತು. ಇತ್ತ ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಕೂಡ ಕೆಲವು ಯೋಜನೆಗಳ ಮೂಲಕ ರಾಜಧಾನಿಯ ಟ್ರಾಫಿಕ್ ಕಂಟ್ರೋಲ್ ಭರವಸೆ ನೀಡಿದ್ದರು. ಇದೀಗ ಆ ಭರವಸೆಗಳು ಈಡೇರುವ ಮೊದಲೇ ಪಾಲಿಕೆ ಇನ್ನೊಂದು ಡಿಪಿಆರ್ ಸಿದ್ಧಪಡಿಸಿಕೊಂಡಿದೆ. ಸದ್ಯ ದೆಹಲಿ ಮೂಲದ ಕಂಪನಿ ಮೂಲಕ ರೆಡಿಯಾಗಿರೋ ಡಿಪಿಆರ್​​​ಗೆ ಸರ್ಕಾರ ಹಸಿರು ನಿಶಾನೆ ತೋರಲಿದೆಯೇ? ಈ ಹೊಸ ಪ್ಲಾನ್ ಜಾರಿಯಾದ್ರೆ ರಾಜಧಾನಿಯ ಟ್ರಾಫಿಕ್​ಗೆ ಮುಕ್ತಿ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ