ಬೆಂಗಳೂರು, ಅ.03: ದಿನ ನಿತ್ಯ ಬಳಕೆಗೆ ಅತ್ಯಂತ ಅಗತ್ಯವಾದ ಕೊತ್ತಂಬರಿ (Coriander), ಕರಿಬೇವಿನ ಸೊಪ್ಪು (Curry Leaves) ತಿನ್ನುವ ಮುನ್ನ ಈ ಸುದ್ದಿಯನೊಮ್ಮೆ ಓದಿ. ಏಕೆಂದರೆ ಟಿವಿ9 ಕನ್ನಡ ನಿಮ್ಮ ಮುಂದೆ ಕರಾಳ ಸತ್ಯವನ್ನ ಬಿಚ್ಚಿಡುತ್ತಿದೆ. ನಾವು ಪ್ರತಿದಿನ ಅಡುಗೆಗೆ ಕೊತ್ತಂಬರಿ, ಕರಿಬೇವಿನ ಸೊಪ್ಪು ಬೆಳಸುತ್ತೇವೆ. ಆದರೆ ಈ ಸೊಪ್ಪನ್ನು ಮಾರ್ಕೆಟ್ಗೆ ತಂದು ಹಾಕುವುದನ್ನು ನೋಡಿದರೆ ತಿನ್ನಲು ಮನಸೇ ಬರೋದಿಲ್ಲ. ಈ ಹಿಂದೆ ಕೊಳಚೆ ನೀರು ಬಳಸಿ ತರಕಾರಿಗಳನ್ನು ಬೆಳೆಸಲಾಗುತ್ತಿರುವ ಬಗ್ಗೆ ಟಿವಿ9 ವರದಿ ಮಾಡಿತ್ತು. ಇದೀಗ ಲೋಡ್ ಗಟ್ಟಲೆ ತರುವ ತರಕಾರಿಯನ್ನು ಯಾವ ರೀತಿ ಬಿಸಾಕಿರುತ್ತಾರೆ, ಅದನ್ನು ಹೇಗೆ ಸೇಲ್ ಮಾಡ್ತಾರೆ ಎಂಬುವುದು ನಿಮಗೆ ತಿಳಿದರೆ ನಿಜಕ್ಕೂ ಆಘಾತವಾಗುತ್ತೆ.
ರಾಜಧಾನಿಯ ಮನೆ, ಹೋಟೆಲ್ ಸೇರುತ್ತಿದೆ ಗಲೀಜು ಕೊತ್ತಂಬರಿ, ಕರಿಬೇವಿನ ಸೊಪ್ಪು. ಮನುಷ್ಯರ ಮೂತ್ರ, ಕಸ, ಕೊಳಚೆ ನೀರು ಹರಿಯುವ ಕೆ.ಆರ್ ಮಾರ್ಕೆಟ್ನ ಚರಂಡಿ, ರೋಡ್, ಫುಟ್ ಪಾತ್ ಮೇಲೆಯೇ ಕೊತ್ತಂಬರಿ, ಕರಿಬೇವಿನ ಸೊಪ್ಪು ಸುರಿದು ಅಲ್ಲಿಂದಲೇ ವ್ಯಾಪಾರ ಮಾಡುವ ವಿಡಿಯೋವೊಂದು ಪತ್ತೆಯಾಗಿದೆ. ಇದನ್ನು ಕಂಡ ಎಂತಹವರಿಗೂ ಒಂದು ಕ್ಷಣ ಅಸಹ್ಯ ಎನಿಸದೇ ಇರದು. ಇಂತಹ ಜಾಗದಲ್ಲಿ ಹಾಕುವ ಸೊಪ್ಪನ್ನು ನಾವು ಫ್ರೆಶ್ ಎಂದು ಮನೆಗೆ ತೆಗೆದುಕೊಂಡು ಹೋಗಿ ಬಳಸುತ್ತಿದ್ದೇವೆ.
ಇದನ್ನೂ ಓದಿ: ನಿಮ್ಮ ಮೆದುಳು ಆರೋಗ್ಯವಾಗಿರಲು ಈ ತರಕಾರಿ ಸೇವನೆ ಮಾಡಿ
ಪ್ರತಿದಿನ ರಾತ್ರಿ ವೇಳೆಯಲ್ಲಿ ನೂರಾರು ವಾಹನಗಳಲ್ಲಿ ಸೊಪ್ಪಿನ ಲೋಡ್ ಬರುತ್ತದೆ. ಲೋಡ್ ಗಟ್ಟಲೇ ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪನ್ನು ಅನ್ ಲೋಡ್ ಮಾಡುವ ಜನ ಚಪ್ಪಲಿ ಕಾಲಿನಲ್ಲೇ ಸೊಪ್ಪನ್ನು ತುಳಿಯುತ್ತ ಕೆಲಸ ಮಾಡ್ತಾರೆ. ಇವರು ಸೊಪ್ಪು ಸುರಿಯುವ ಜಾಗ ಸ್ವಲ್ಪವೂ ಸ್ವಚ್ಛವಾಗಿರುವುದಿಲ್ಲ. ಸೊಪ್ಪು ಹಾಕಲು ಕೆಳಗೆ ಪ್ಲಾಸ್ಟಿಕ್ ಶೀಟ್ ಕೂಡ ಹಾಕಲ್ಲ, ನಡು ರೋಡಲ್ಲಿ ಸುರಿಯುತ್ತಾರೆ. ಮೂತ್ರ ವಿಸರ್ಜನೆ ಮಾಡುವ ಜಾಗದಲ್ಲೇ ಬಾಕ್ಸ್ ಬಾಕ್ಸ್ ಗಟ್ಟಲೇ ಕೊತ್ತಂಬರಿ, ಕರಿಬೇವಿನ ಸೊಪ್ಪಿನ ವ್ಯಾಪಾರ ಮಾಡಲಾಗುತ್ತೆ. ಕಸದ ಲಾರಿಯಿಂದ ಕಸದ ಕೊಳಚೆ ನೀರು ಸೊರುತ್ತಿರುತ್ತದೆ. ಅಲ್ಲೇ ಕೊತ್ತಂಬರಿ, ಕರಿಬೇವು ಸೊಪ್ಪುಗಳ ಹೋಲ್ ಸೇಲ್ ವ್ಯಾಪಾರ ನಡೆಯುತ್ತೆ.
ಸಾಮಾನ್ಯವಾಗಿ ಕೆಲ ಹೋಟೆಲ್ಗಳಲ್ಲಿ ಕೊತ್ತಂಬರಿ, ಕರಿಬೇವು ಸೊಪ್ಪನ್ನು ತೊಳೆಯದೆ ಅಡುಗೆಗೆ ಬಳಸುತ್ತಾರೆ. ಆದರೆ ಈ ವಿಡಿಯೋ ನೋಡಿದ್ರೆ ಕೆ.ಆರ್. ಮಾರುಕಟ್ಟೆಯಿಂದ ಸೊಪ್ಪು ಖರೀದಿಸಲು ಚಿಂತೆ ಮಾಡುವಂತಾಗುತ್ತೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:19 am, Thu, 3 October 24