
ಬೆಂಗಳೂರು, ಅಕ್ಟೋಬರ್ 28: ನಗರದ ಸಾರ್ವಜನಿಕ ರಸ್ತೆಗಳು ಹಾಗೂ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿಕೊಂಡಿರುವ ಅನಾಥ ವಾಹನಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವುದಾಗಿ ಘೋಷಿಸಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಆರಂಭದಲ್ಲಿ ತೋರಿಸಿದ ಉತ್ಸಾಹವನ್ನು ಈಗ ಕೈಬಿಟ್ಟಂತೆ ಕಾಣುತ್ತಿದೆ. ಕಾರ್ಯಾಚರಣೆ ತಣ್ಣಗಾಗಿರುವ ಪರಿಣಾಮ ನಗರದಲ್ಲಿ ಇಂದಿಗೂ ಸಾವಿರಾರು ಅನಾಥ ವಾಹನಗಳು ಸಂಚಾರ ದಟ್ಟಣೆ ಹಾಗೂ ಪಾದಾಚಾರಿಗಳ ಕಿರಿಕಿರಿಗೆ ಕಾರಣವಾಗಿವೆ.
ಜಿಬಿಎ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಜುಲೈ 10 ರಿಂದ ಆರಂಭವಾದ ವಿಶೇಷ ಕಾರ್ಯಾಚರಣೆಯಲ್ಲಿ ಈವರೆಗೆ 2,122 ವಾಹನಗಳಿಗೆ ನೋಟಿಸ್ ಅಂಟಿಸಲಾಗಿದ್ದು, 1,948 ವಾಹನಗಳನ್ನು ತೆರವು ಮಾಡಲಾಗಿದೆ. ಆದರೆ ನಗರದ ಮೂಲ ಮೂಲೆಗಳಲ್ಲಿ ಕಸದಂತೆ ಬಿದ್ದಿರುವ ಅನಾಥ ವಾಹನಗಳಿಗೆ ಇನ್ನೂ ನೋಟಿಸ್ ಕೂಡ ಬಿದ್ದಿಲ್ಲ ಎಂಬುದು ಸ್ಪಷ್ಟವಾಗಿದೆ.
ಟಿವಿ9 ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಚಾಮರಾಜಪೇಟೆ ಹಾಗೂ ಬಸವನಗುಡಿ ಪ್ರದೇಶಗಳಲ್ಲಿ ಅನಾಥ ವಾಹನಗಳ ಕಾಟ ಮಿತಿಮೀರಿರುವುದು ಕಂಡುಬಂದಿದೆ. ಚಾಮರಾಜಪೇಟೆಯಲ್ಲಿನ ಟ್ಯಾಂಕ್ ಮಿಲ್ ಸ್ಮಶಾನ ರಸ್ತೆಯುದ್ದಕ್ಕೂ ಅನಾಥ ಕಾರು, ಆಟೋ ಹಾಗೂ ದ್ವಿಚಕ್ರ ವಾಹನಗಳೇ ಸಾಲು ಗಟ್ಟಿ ನಿಂತಿವೆ. ರಸ್ತೆ ಮಾತ್ರವಲ್ಲದೆ ಪಾದಾಚಾರಿಗಳು ನಡೆಯುವ ಫುಟ್‌ಪಾತ್‌ಗಳನ್ನೂ ಈ ವಾಹನಗಳು ಅತಿಕ್ರಮಿಸಿವೆ. ಬಸವನಗುಡಿಯ ಈಸ್ಟ್ ಆಂಜನೇಯ ಟೆಂಪಲ್ ಸ್ಟ್ರೀಟ್‌ನಲ್ಲಿ ನಿಲ್ಲಿಸಲಾಗಿರುವ ಹಳೆಯ ವಾಹನಗಳಿಂದಾಗಿ ನಿತ್ಯವೂ ಸಂಚಾರ ದಟ್ಟಣೆ ಸೃಷ್ಟಿಯಾಗುತ್ತಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಹನ ಖರೀದಿಸುವ ಮುನ್ನ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇದೆಯೇ ಎಂಬುದನ್ನು ಮಾಲೀಕರು ಖಚಿತಪಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಸಾರ್ವಜನಿಕ ರಸ್ತೆಗಳನ್ನು ಗ್ಯಾರೇಜ್ ಅಥವಾ ಕಸದ ತೊಟ್ಟಿಯಂತೆ ಬಳಸುವುದು ಸರಿಯಲ್ಲ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಇನ್ನಾದರೂ ಜಿಬಿಎ (GBA) ಹಾಗೂ ಸಂಚಾರ ಪೊಲೀಸರು ಜಂಟಿಯಾಗಿ ಎಚ್ಚೆತ್ತುಕೊಂಡು ಅನಾಥ ವಾಹನಗಳ ತೆರವು ಕಾರ್ಯಾಚರಣೆಯನ್ನು ತೀವ್ರಗೊಳಿಸಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ