ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟ ಘಟನೆ ಬೆಂಗಳೂರಿನ ಯಶವಂತಪುರದ ಸತ್ವ ಅಪಾರ್ಟ್ಮೆಂಟ್ ಬಳಿ ನಡೆದಿದೆ. ಅಪಘಾತವಾಗಿ ಮಹಿಳೆ ಕೆಳಗೆ ಬಿದ್ದಿದ್ದು ಖಾಸಗಿ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಯಶವಂತರಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಫೋನ್ ಬಂತು ಎಂದು ಗಾಡಿ ಸೈಡಿಗೆ ಹಾಕಿ ಮಹಿಳೆ ವಿನುತಾ ಮಾತನಾಡುತ್ತಿದ್ದರು. ಈ ವೇಳೆ ಹಿಂದೆಯೇ ಬಸ್ ನಿಲ್ದಾಣದಲ್ಲಿ ಜನರನ್ನು ಹತ್ತಿಸಿ ಕೊಳ್ಳುತ್ತಿದ್ದ ಬಸ್ ಚಾಲಕ ಏಕಾಏಕಿ ಬಸ್ ಮೂವ್ ಮಾಡಿದ್ದ. ಆಗ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಇನ್ನು ಮತ್ತೊಂದೆಡೆ ಹೊಸಕೋಟೆ ನಗರದ ಎಂವಿಜೆ ಕಾಲೇಜು ಬಳಿ ಸರಣಿ ಸಪಘಾತ ಸಂಭವಿಸಿದೆ. ಘಟನೆಯಲ್ಲಿ ಟಿಟಿ ವಾಹನ, ಬೈಕ್, ಕ್ಯಾಂಟರ್ ನಡುವೆ ಡಿಕ್ಕಿಯಾಗಿದ್ದು ಮೂವರಿಗೆ ಗಾಯಗಳಾಗಿವೆ.
ಬೆಳ್ಳಂ ಬೆಳಗ್ಗೆ ಹೊಸಕೋಟೆ ಕೋಲಾರ ರಾಷ್ಟ್ರೀಯ ಹೆದ್ದಾರಿ ಎಂವಿಜೆ ಕಾಲೇಜು ಬಳಿ ಸರಣಿ ಅಪಘಾತವಾಗಿದೆ. ಕ್ಯಾಂಟರ್ ಚಾಲಕ ದಿಡೀರ್ ಬ್ರೇಕ್ ಹಾಕಿದ್ದು, ಬ್ರೇಕ್ ಹಾಕುತ್ತಿದ್ದಂತೆ ಹಿಂದೆ ಬರುತ್ತಿದ್ದ ಟಿಟಿ ವಾಹನ ಹಾಗೂ ಪಲ್ಸರ್ ಬೈಕ್ ಕ್ಯಾಂಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಿಟಿ ಹಾಗೂ ಬೈಕ್ ನುಜುಗುಜ್ಜಾಗಿದೆ. ಬೈಕ್ ಸವಾರರಿಗೆ ಹಾಗೂ ಕ್ಯಾಂಟರ್ ಚಾಲಕನಿಗೆ ಗಾಯಗಳಾಗಿದ್ದು ಹೊಸಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಹೊಸಕೋಟೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾದ ಘಟನೆ ಹುಣಸೂರು ತಾಲೂಕು ಬನ್ನಿಕುಪ್ಪೆ ಗ್ರಾಮದಲ್ಲಿ ನಡೆದಿದೆ. ಶಿವಣ್ಣ ನಾಯಕ (56) ಆತ್ಮಹತ್ಯೆ ಮಾಡಿಕೊಂಡ ರೈತ. 2.2 ಎಕರೆ ಜಮೀನು ಹೊಂದಿದ್ದ ಶಿವಣ್ಣ ನಾಯಕ, ಬನ್ನಿಕುಪ್ಪೆ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ 7.5 ಲಕ್ಷ ಸಾಲ ಮಾಡಿದ್ದರು. ಜಮೀನಿನಲ್ಲಿ ಹೊಗೆ ಸೊಪ್ಪು ಬೆಳೆ ಬೆಳೆದಿದ್ದು ಕಳೆದ ಆರು ತಿಂಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದ ಬೆಳೆ ನಷ್ಟವಾಗಿದೆ. ಸಾಲದ ಬಡ್ಡಿ ಜಾಸ್ತಿಯಾಗಿ ಮನನೊಂದು ಜಮೀನಿನ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:29 am, Tue, 24 January 23