ಬೆಂಗಳೂರು, ಡಿಸೆಂಬರ್ 22: ಆಸ್ತಿ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿರುವವರಿಗೆ ಎಚ್ಚರಿಕೆ ನೀಡುತ್ತಾ ಬಂದಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇದೀಗ ಕಾರ್ಯಾಚರಣೆ ಆರಂಭಿಸಿದೆ. ಆಸ್ತಿ ತೆರಿಗೆ ಕಟ್ಟದಿರುವ ಕಟ್ಟಡಗಳನ್ನು ಸೀಜ್ ಮಾಡುವ ಕಾರ್ಯವನ್ನು ಅಧಿಕಾರಿಗಳು ಶುರುಮಾಡಿದ್ದಾರೆ. ಬಿಬಿಎಂಪಿ ಆಸ್ತಿ ತೆರಿಗೆ (Property Tax) ವಸೂಲಿಗೆ ಕಠಿಣ ಕ್ರಮ ಕೈಗೊಳ್ಳಲು ನವೆಂಬರ್‌ನಲ್ಲೇ ಬಿಬಿಎಂಪಿ ಮುಂದಾಗಿತ್ತು. ಕೆಲವು ದಿನಗಳ ಹಿಂದಷ್ಟೇ ಹೆಚ್ಚು ಪ್ರಮಾಣದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರ ಕಾರು, ಬೈಕ್ ಜಪ್ತಿ ಮಾಡಲು ಆರಂಭಿಸಿತ್ತು.
ಆಸ್ತಿ ತೆರಿಗೆ ಕಟ್ಟದವರಿಗೆ ಮೊದಲು ನೋಟಿಸ್ ನೀಡಲಾಗುತ್ತದೆ. ನಂತರ ಕಟ್ಟಡ ಮಾಲೀಕರ ಕಾರ್, ಬೈಕ್ಗಳನ್ನು ಸೀಜ್ ಮಾಡಿ ಹರಾಜು ಹಾಕಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಕೆಲ ದಿನಗಳ ಹಿಂದೆ ತಿಳಿಸಿದ್ದರು. ಅದರಂತೆ ಕಾರ್ಯಪ್ರವೃತ್ತರಾಗಿದ್ದರು. ತೆರಿಗೆ ಬಾಕಿ ಉಳಿಸಿಕೊಂಡವರ ಕಾರ್ ಮತ್ತು ಬೈಕ್ ಸೀಜ್ ಮಾಡುವುದಕ್ಕೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದರು.
ತೆರಿಗೆ ವಂಚಿಸುವ ದೊಡ್ಡ ಕುಳಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಈ ಹಿಂದೆಯೂ ಹಲವು ಬಾರಿ ಬಿಬಿಎಂಪಿ ಹೇಳಿತ್ತು. ಆದರೆ, ಬಳಿಕ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ, ಈ ಬಾರಿ ಬಿಸಿಮುಟ್ಟಿಸುತ್ತಿದೆ.
ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಸೇರಿದಂತೆ 6 ಮಂದಿ ಐಎಎಸ್ ಅಧಿಕಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೆಚ್ಚುವರಿ ಜವಾಬ್ದಾರಿ ಘೋಷಿಸಿ ರಾಜ್ಯ ಸರ್ಕಾರ ಅಕ್ಟೋಬರ್ನಲ್ಲಿ ಆದೇಶ ಹೊರಡಿಸಿತ್ತು. ಮುನೀಶ್ ಮೌದ್ಗಿಲ್ ಅವರನ್ನು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಮೌದ್ಗಿಲ್ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ತೆರಿಗೆ ವಂಚಕರಿಗೆ ಬಿಸಿ ಮುಟ್ಟಿಸಲು ಬಿಬಿಎಂಪಿ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದೆ.
ಇದನ್ನೂ ಓದಿ: ಆಸ್ತಿ ತೆರಿಗೆ ವಸೂಲಿಗೆ ಹೊಸ ಪ್ಲಾನ್: ಕಾರು, ಬೈಕ್ ಜಪ್ತಿಗೆ ಮುಂದಾದ ಬಿಬಿಎಂಪಿ
ವರ್ತೂರು, ವೈಟ್ಫೀಲ್ಡ್ ಸೇರಿದಂತೆ ನಗರದ ಹಲವೆಡೆ ಗುರುವಾರ ಸಂಜೆಯಿಂದ ಬಿಬಿಎಂಪಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಹಲವು ಕಟ್ಟಡಗಳನ್ನು ಸೀಜ್ ಮಾಡಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:28 pm, Fri, 22 December 23