
ಬೆಂಗಳೂರು/ ಕೊಪ್ಪಳ, ನವೆಂಬರ್ 20: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಬಸ್ಗಳ ಅಪಘಾತ ಮೇಲಿಂದ ಮೇಲೆ ವರದಿಯಾಗುತ್ತಿದ್ದು, ಚಾಲಕರ ಅಜಾಗರೂಕತೆಗೆ ಅಮಾಯರು ಬಲಿಯಾಗುತ್ತಿದ್ದಾರೆ. ಈ ನಡುವೆ ಇಂತಹುದ್ದೇ ಮತ್ತೊಂದು ಘಟನೆ ಮಡಿವಾಳದ ಬಸ್ ನಿಲ್ದಾಣದ ಬಳಿ ನಡೆದಿದೆ. ಬಿಎಂಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಮಡಿವಾಳ ನಿವಾಸಿ 65 ವರ್ಷದ ವೆಂಕಟರಾಮಪ್ಪ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಚಾಲಕ ಮತ್ತು ನಿರ್ವಾಹಕನನ್ನು ವಶಕ್ಕೆ ಪಡೆಯಲಾಗಿದೆ.
ತರಕಾರಿ ವ್ಯಾಪಾರಿಯಾಗಿದ್ದ ವೆಂಕಟರಾಮಪ್ಪ ಮಡಿವಾಳ ಮಾರ್ಕೆಟ್ಗೆ ತರಕಾರಿ ತರಲು ಹೋಗಿದ್ದಾಗ ದುರಂತ ಸಂಭವಿಸಿದೆ. ಸೇಂಟ್ಜಾನ್ಸ್ ಆಸ್ಪತ್ರೆ ಶವಾಗಾರದಲ್ಲಿರುವ ಮೃತದೇಹ ಇರಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಪಘಾತಕ್ಕೆ ಬಿಎಂಟಿಸಿ ಬಸ್ ಚಾಲಕನ ನಿರ್ಲಕ್ಷ್ಯ ಕಾರಣ ಎನ್ನಲಾಗಿದ್ದು,ವೆಂಕಟರಾಮಪ್ಪ ಅವರಿಗೆ ಬಸ್ ಡಿಕ್ಕಿಯಾಗುವ ಮುನ್ನ ಎರಡು ವಾಹಗಳಿಗೂ ಗುದ್ದಿದೆ ಎಂದು ದಕ್ಷಿಣ ವಿಭಾಗದ ಟ್ರಾಫಿಕ್ ಡಿಸಿಪಿ ಗೋಪಾಲ್ ಬ್ಯಾಕೋಡ್ ಹೇಳಿದ್ದಾರೆ. ಘಟನೆ ಬಗ್ಗೆ ತನಿಖೆ ಮುಂದುವರಿದಿರೋದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕುಡಿದು ಬರ್ತಿದ್ದ ಡ್ರೈವರ್ಗಳಿಗೆ ಲಂಚ ಪಡೆದು ಡ್ಯೂಟಿ, ಅಧಿಕಾರಿಗಳಿಗೆ ಶಾಕ್ಕೊಟ್ಟ BMTC
ಸಿಗ್ನಲ್ ದಾಟುತ್ತಿದ್ದ 9 ವರ್ಷದ ಬಾಲಕಿಯ ಮೇಲೆ ಬಿಎಂಟಿಸಿ ಬಸ್ ಚಕ್ರ ಹರಿದ ಪರಿಣಾಮ ಆಕೆ ಮೃತಪಟ್ಟಿದ್ದ ಘಟನೆ ಇತ್ತೀಚೆಗಷ್ಟೇ ರಾಜಾಜಿನಗರದಲ್ಲಿ ನಡೆದಿತ್ತು. ಪಾಂಚ ಜನ್ಯ ವಿದ್ಯಾಪೀಠ ಶಾಲೆಯಲ್ಲಿ ಐದನೇ ತರಗತಿ ವ್ಯಾಸಂಗ ಮಾಡುತ್ತಿದ್ದ 9 ವರ್ಷದ ಭುವನ ಘಟನೆಯಲ್ಲಿ ಮೃತಪಟ್ಟಿದ್ದರು. ಆ ಘಟನೆ ಮಾಸುವ ಮುನ್ನವೇ ಈಗ ಮತ್ತೊಂದು ಅವಘಡ ನಡೆದಿದೆ.
ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ
2 ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದ ಜೂರಟಗಿ ಬಳಿ ನಡೆದಿದೆ. ನಾಗರಾಜ್ ಜಾಲಿಹಾಳ(30), ಬಸವರಾಜ(35) ಮೃತ ದುರ್ದೈವಿಗಳಾಗಿದ್ದಾರೆ. ನಾಗರಾಜ್ ರಾಯಚೂರು ಜಿಲ್ಲೆಯ ಸಿಂಧನೂರು ಮೂಲದವಾರಿದ್ದರೆ, ಬಸವರಾಜ ಕಲಬುರಗಿ ಜಿಲ್ಲೆಯ ಜೇವರ್ಗಿಯವರು ಎಂಬುದು ಗೊತ್ತಾಗಿದೆ. ಘಟನಾ ಸ್ಥಳಕ್ಕೆ ಕಾರಟಗಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.