
ಬೆಂಗಳೂರು, ಡಿಸೆಂಬರ್ 08: ಅಪರಿಚಿತ ವ್ಯಕ್ತಿಗಳಿಬ್ಬರು ರಾಂಪುರ ಗ್ರಾಮದ ಪೆಟ್ರೋಲ್ ಬಂಕ್‌ನಲ್ಲಿ ನಿಂತಿದ್ದ ಬೆಂಗಳೂರು ಮಹಾನಗರ ಸಾರಿಗೆ ನಿಗಮ (BMTC) ಬಸ್‌ನಿಂದ 15 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ 120 ಲೀಟರ್‌ಗೂ ಹೆಚ್ಚು ಡೀಸೆಲ್ ಕದ್ದು ಪರಾರಿಯಾದ ಘಟನೆ ಕಳೆದ ವಾರ ನಡೆದಿದೆ. ಈ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಎಂಟಿಸಿಯ ಮಂಡೂರು 47ನೇ ಡಿಪೋದ ಈ ಬಸ್ ಅನ್ನು ಡಿಸೆಂಬರ್ 1 ರಂದು ರಾಂಪುರ-ಕೆಆರ್ ಮಾರುಕಟ್ಟೆ ಮಾರ್ಗದಿಂದ ಬಂದ ನಂತರ ರಾತ್ರಿ 11 ಗಂಟೆಗೆ ಪೆಟ್ರೋಲ್ ಬಂಕ್ ಆವರಣದಲ್ಲಿ ನಿಲ್ಲಿಸಲಾಗಿತ್ತು. ದಿನದ ಕೊನೆಯ ಟ್ರಿಪ್ ಪೂರೈಸಿದ್ದ ಚಾಲಕ ಶಿವಪ್ಪ ಎಂಎಸ್ (36) ಮತ್ತು ಕಂಡಕ್ಟರ್ ಮಂಜುನಾಥ್ ಬಿಸಿ ಬಸ್ ಒಳಗೇ ನಿದ್ರಿಸುತ್ತಿದ್ದರು. ಡಿಸೆಂಬರ್ 2 ರ ಬೆಳಗಿನ ಜಾವ 2:30 ರ ಸುಮಾರಿಗೆ ಟಾಟಾ ಇಂಡಿಕಾ ಕಾರು ಪೆಟ್ರೋಲ್ ಬಂಕ್ ಆವರಣಕ್ಕೆ ಬಂದಿದ್ದು, ಅಲ್ಲಿನ ಸಿಬ್ಬಂದಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಇಬ್ಬರಲ್ಲಿ ಒಬ್ಬರು ಬಸ್ನ ಬಳಿ ಬಂದು ಇಣುಕಿ ನೋಡಿದಾಗ ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರೂ ನಿದ್ರೆಗೆ ಜಾರಿರುವುದನ್ನು ಕಂಡಿದ್ದ. ಇದನ್ನರಿತ ಇಬ್ಬರೂ ಖದೀಮರು ಕೇವಲ 13 ನಿಮಿಷಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ.
ಬಿಎಂಟಿಸಿ ಬಸ್ ಬಳಿ ಬಂದ ಖದೀಮರಿಬ್ಬರೂ ಡೀಸೆಲ್ ಟ್ಯಾಂಕ್‌ನ ಬೀಗವನ್ನು ಕ್ಷಣಾರ್ಧದಲ್ಲಿ ಒಡೆದು , ಪೈಪ್ ಬಳಸಿ ಇಂಧನವನ್ನು ಹೊರತೆಗೆಯಲು ಆರಂಭಿಸಿದ್ದಾರೆ. ತಮ್ಮ ಕಾರಿನಲ್ಲಿ ಇರಿಸಲಾಗಿದ್ದ ಹಲವಾರು ಪ್ಲಾಸ್ಟಿಕ್ ಕ್ಯಾನ್‌ಗಳನ್ನು ಡೀಸೆಲ್ನಿಂದ ತುಂಬಿಸಿದ್ದಾರೆ. ಬೆಳಗಿನ ಜಾವ 2:43 ರ ಹೊತ್ತಿಗೆ ಸುಮಾರು 124 ಲೀ. ಡೀಸೆಲ್ ಕದ್ದ ಕಳ್ಳರಿಬ್ಬರೂ ಪರಾರಿಯಾಗಿದ್ದಾರೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೆಟ್ರೋಲ್ ಬಂಕ್ಗಳು ರಾತ್ರಿ 11 ಗಂಟೆಗೆ ಮುಚ್ಚಿದರೆ ಮರುದಿನ ಬೆಳಗ್ಗೆ 6 ಗಂಟೆಗೆ ಕೆಲಸ ಆರಂಭಿಸಯುತ್ತವೆ. ಈ ಸಮಯದಲ್ಲಿಯೇ ಹೊಂಚು ಹಾಕಿ ಕಳ್ಳತನ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಕಳ್ಳತನದ ಅರಿವಿಲ್ಲದ ಶಿವಪ್ಪ ಮತ್ತು ಮಂಜುನಾಥ್ ಬೆಳಗ್ಗೆ 4:30 ರ ಸುಮಾರಿಗೆ ಎಚ್ಚರಗೊಂಡು ತಮ್ಮ ಕೆಲಸ ಪುನರಾರಂಭಿಸಿದ್ದಾರೆ. ಆದರೆ ಬಸ್ ಹಲಸೂರು ಸಮೀಪಿಸುತ್ತಿದ್ದಂತೆ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದೆ. ಈ ವೇಳೆ ಡ್ರೂವರ್ ಡಿಪೋವನ್ನು ಸಂಪರ್ಕಿಸಿದಾಗ, ಹಿಂದಿನ ದಿನ ವಾಹನದಲ್ಲಿ 124 ಲೀಟರ್‌ಗಿಂತಲೂ ಹೆಚ್ಚು ಡೀಸೆಲ್ ತುಂಬಿರುವುದಾಗಿ ಹೇಳಿದ್ದಾರೆ. ಅನುಮಾನ ಬಂದ ಚಾಲಕ ಮತ್ತು ನಿರ್ವಾಹಕರಿಬ್ಬರೂ ರಾಂಪುರ ನಿಲ್ದಾಣಕ್ಕೆ ಹಿಂತಿರುಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಡಿಸೆಂಬರ್ 3 ರಂದು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಕದ್ದ ಇಂಧನದ ಮೌಲ್ಯ ಸುಮಾರು 11,000 ರೂ. ಎಂದು ಅಂದಾಜಿಸಲಾಗಿದ್ದು, ಆವಲಹಳ್ಳಿ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 303 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:30 pm, Mon, 8 December 25