ಬೆಂಗಳೂರು, ಅ.08: 17ರ ಹರೆಯದ ಯುವಕನೊಬ್ಬ ತನ್ನ ಹುಟ್ಟುಹಬ್ಬವನ್ನು ಶಾಲಾ ಶಿಕ್ಷಕಿನೊಂದಿಗೆ ಆಚರಿಸಿಕೊಂಡಿದ್ದಕ್ಕೆ ಮೂವರು ಹುಡುಗರ ಗುಂಪು ಹದಿಹರೆಯದ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ. ಮಹಾಲಕ್ಷ್ಮಿ ಲೇಔಟ್‌ನ BWSSB ಪಾರ್ಕ್ ಬಳಿ ಅಕ್ಟೋಬರ್ 1 ರಂದು ಮೂವರು ಅಪ್ರಾಪ್ತರು ಹುಟ್ಟಹಬ್ಬ ಆಚರಿಸಿಕೊಂಡ ಮತ್ತೋರ್ವ ಅಪ್ರಾಪ್ತನ ಮೇಲೆ ಹಲ್ಲೆ ನಡೆಸಿ, ಚೂಪಾದ ವಸ್ತುವಿನಿಂದ ಕೈಗೆ ಗಾಯ ಮಾಡಿ ಬಳಿಕ ಯುವಕನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ನಂತರ ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿ ಯುವಕನನ್ನು ಮನೆಗೆ ಕಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುವಕ ಕೈಗೆ ಬ್ಯಾಂಡೇಜ್ ಸುತ್ತಿಕೊಂಡಿರುವುದನ್ನು ನೋಡಿದ ಪೋಷಕರು ಈ ಬಗ್ಗೆ ಪ್ರಶ್ನಿಸಿದಾಗ, ಯುವಕ ತಾನು ಸ್ಕೂಟರ್‌ನಲ್ಲಿ ಹೋಗುವಾಗ ಡಿಕ್ಕಿ ಹೊಡೆದು ಸಣ್ಣ ಗಾಜಿನ ತುಂಡಿನಿಂದ ಗಾಯ ಆಗಿದೆ ಎಂದು ತಿಳಿಸಿದ್ದ. ಆದರೆ, ಮರುದಿನ ಬೆಳಗ್ಗೆ ಹಲ್ಲೆಗೊಳಗಾಗಿದ್ದ ಯುವಕನ ಸ್ನೇಹಿತನೊಬ್ಬ ಮನೆಗೆ ಬಂದು ಪೋಷಕರ ಬಳಿ ಹಲ್ಲೆ ನಡೆದ ಬಗ್ಗೆ ತಿಳಿಸಿದ್ದಾನೆ. ಆಗ ಪೋಷಕರಿಗೆ ಮಗನ ಮೇಲಾದ ದೌಜನ್ಯದ ಬಗ್ಗೆ ಮಾಹಿತಿ ತಿಳಿದಿದೆ.
ವಿಷಯ ತಿಳಿಯುತ್ತಿದ್ದಂತೆ ಯುವಕನ ಪೋಷಕರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪ್ರಾಪ್ತ ಯುವಕನಿಗೆ ಶಾಲಾ ಶಿಕ್ಷಕಿಯೊಂದಿಗೆ ಉತ್ತಮ ಒಡನಾಟವಿತ್ತು. ಹೀಗಾಗಿ ಅಕ್ಟೋಬರ್ 1 ರಂದು ನಡೆದ ತನ್ನ ಹುಟ್ಟುಹಬ್ಬಕ್ಕೆ ಶಿಕ್ಷಕಿಯನ್ನೂ ಯುವಕ ಕರೆದಿದ್ದ. ಆದ ಕಾರಣ ಹುಟ್ಟಹಬ್ಬದ ಸಂಭ್ರಮಾಚರಣೆಗಾಗಿ ಶಿಕ್ಷಕಿ ಕೆಫೆಯೊಂದರಲ್ಲಿ ಭೇಟಿಯಾಗಿದ್ದರು. ಕೆಫೆಯಲ್ಲಿ ಶಿಕ್ಷಕರೊಂದಿಗೆ ಯುವಕ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ. ನಂತರ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಉದ್ಯಾನವನಕ್ಕೆ ನಡೆದುಕೊಂಡು ಬರುತ್ತಿದ್ದರು. ಆಗ ಯುವಕನ ಜೊತೆ ಶಾಲಾ ಶಿಕ್ಷಕಿ ಇರುವುದನ್ನು ನೋಡಿದ ಶಿಕ್ಷಕಿಯ ಭಾವಿ ಪತಿ ವಿಚಾರವನ್ನು ತನ್ನ ಸಹೋದರನಿಗೆ ತಿಳಿಸಿದ್ದ.
ಇದನ್ನೂ ಓದಿ: ಬೆಂಗಳೂರು: ಸುರಂಗ ರಸ್ತೆ ನಿರ್ಮಾಣಕ್ಕೆ ಗ್ರೀನ್, ಹಂತ 3 ಮೆಟ್ರೋ ಮಾರ್ಗಕ್ಕೆ ಸರ್ಕಾರದಿಂದ ರೆಡ್ ಸಿಗ್ನಲ್
ಸಂಭ್ರಮಾಚರಣೆ ಮುಗಿಸಿ ಯುವಕ ಮನೆಗೆ ಹಿಂದಿರುಗುತ್ತಿದ್ದಾಗ, ಶಾಲೆಯ ಶಿಕ್ಷಕಿಯ ಸಹೋದರ ಯುವಕನನ್ನು ರಸ್ತೆಯಲ್ಲಿ ತಡೆದು ಹಲ್ಲೆ ನಡೆಸಿದ್ದಾನೆ. ಮೂವರು ಯುವಕನನ್ನು ಅಡ್ಡಗಟ್ಟಿ ಶಿಕ್ಷಕಿಯ ಜೊತೆ ನಿನಗೇನು ಕೆಲಸ, ಏಕೆ ಅವರೊಂದಿಗಿದ್ದೆ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಅವಳೊಂದಿಗೆ ಕಾಣಿಸಿಕೊಂಡರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಎಫ್ಐಆರ್ನಲ್ಲಿ ದಾಖಲಿಸಲಾಗಿದೆ.
ಸದ್ಯ ಹಲ್ಲೆ ಮಾಡಿದವರಿಗೆ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು. ಪ್ರಮುಖ ಶಂಕಿತರು ಶಿಕ್ಷಕಿಯ ಸ್ವಂತ ಸಹೋದರರು ಎಂದು ತಿಳಿದು ಬಂದಿದೆ. “ಶಂಕಿತರೆಲ್ಲರೂ ಅಪ್ರಾಪ್ತರು; ಹೀಗಾಗಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ಅಧಿಕಾರಿ ತಿಳಿಸಿದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ