ರಾತ್ರೋರಾತ್ರಿ ಕಾಲ್ ಸೆಂಟರ್ ಉದ್ಯೋಗಿಗಳ ಕಿಡ್ನ್ಯಾಪ್: 12 ಗಂಟೆಯೊಳಗೆ ಆರೋಪಿಗಳು ಅಂದರ್

ಬೆಂಗಳೂರಿನ ಕೋರಮಂಗಲದಲ್ಲಿ ಕಾಲ್ ಸೆಂಟರ್ ಉದ್ಯೋಗಿಗಳ ಕಿಡ್ನ್ಯಾಪ್ ಪ್ರಕರಣವು ನಗರದಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ತೆರಿಗೆ ಅಧಿಕಾರಿಗಳ ಸೋಗಿನಲ್ಲಿ 8 ಮಂದಿ ಉದ್ಯೋಗಿಗಳನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಘಟನೆ ನಡೆದ 12 ಗಂಟೆಯೊಳಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. 14 ಲಕ್ಷ ರೂ ಹಣವನ್ನು ವಶಕ್ಕೆ ಪಡೆದಿದ್ದಾರೆ.

ರಾತ್ರೋರಾತ್ರಿ ಕಾಲ್ ಸೆಂಟರ್ ಉದ್ಯೋಗಿಗಳ ಕಿಡ್ನ್ಯಾಪ್: 12 ಗಂಟೆಯೊಳಗೆ ಆರೋಪಿಗಳು ಅಂದರ್
ಪ್ರಾತಿನಿಧಿಕ ಚಿತ್ರ
Edited By:

Updated on: Nov 23, 2025 | 8:25 PM

ಬೆಂಗಳೂರು, ನವೆಂಬರ್​ 23: ನಗರದ ಪೊಲೀಸರಿಗೆ ಒಂದೇ ಸಮಯದಲ್ಲಿ ಡಬಲ್ ಡಬಲ್​ ಟೆನ್ಷನ್ ಶುರುವಾಗಿತ್ತು. 7.11 ಕೋಟಿ ರೂ ದರೋಡೆ ಕೇಸ್​ ಒಂದು ಕಡೆ ಆದರೆ, ಹಾಟ್ ಸ್ಪಾಟ್ ಆಗಿರುವ ಕೋರಮಂಗಲದಲ್ಲಿ (Koramangala) ನಾಲ್ವರು ಕಾಲ್ ಸೆಂಟರ್ ಉದ್ಯೋಗಿಗಳನ್ನು ಕಿಡ್ನ್ಯಾಪ್ (kidnap) ​​ ಮತ್ತಷ್ಟು ಆತಂಕಕ್ಕೆ ಕಾರಣವಾಗಿತ್ತು. ಕಿಡ್ನ್ಯಾಪ್​​ ಆದ 12 ಗಂಟೆ ಒಳಗೆ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಈ ಕೇಸ್​ನಲ್ಲೂ ಪೊಲೀಸನೇ ಕಿಡ್ನ್ಯಾಪರ್​ ಆಗಿದ್ದ ಎನ್ನುವುದು ಮತ್ತೊಂದು ಅಚ್ಚರಿಯ ಸಂಗತಿ.

ಹಣ ಮಾಡಲು ಹೋಗಿ ಲಾಕ್​ ಆದ ಕಿಡಿಗೇಡಿಗಳು 

ಬೆಂಗಳೂರಲ್ಲಿ ನಾಯಿ ಕೊಡೆಯಂತೆ ಕಾಲ್ ಸೆಂಟರ್​ಗಳು ತಲೆ ಎತ್ತಿವೆ. ಅದರಲ್ಲಿ ಅರ್ಧಕ್ಕರ್ಧ ನಕಲಿ ಕಾಲ್ ಸೆಂಟರ್ಗಳಿಂದಲೇ ತುಂಬಿವೆ. ಇದರಲ್ಲಿ ಹೆಚ್ಚಿನ ಪಾಲು ಅಂದರೆ ಆನ್​ಲೈನ್ ವಂಚನೆ ಹಾಗೂ ಡಿಜಿಟಲ್ ಅರೆಸ್ಟ್ ಮಾಡಿ ಹಣಕ್ಕೆ ಬೇಡಿಕೆ ಇಡಲು ಈ ಕಾಲ್ ಸೆಂಟರ್ ಮಾಡಿಕೊಂಡಿದ್ದಾರೆ. ಇದನ್ನ ಮಟ್ಟ ಹಾಕೋದಕ್ಕೆ ಅಂತಲೇ ಪೊಲೀಸರು ಆಗಾಗ ಇಂತಹ ಕಾಲ್ ಸೆಂಟರ್​ಗಳ ಮೇಲೆ ದಾಳಿ ಮಾಡುತ್ತಲೇ ಇರ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ಹಣ ಮಾಡಲು ಹೋಗಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ದರೋಡೆ: ಕಾನ್ಸ್​ಟೇಬಲ್​ ಸಸ್ಪೆಂಡ್​, ಇನ್ಮುಂದೆ ಇನ್ಸ್​ಪೆಕ್ಟರ್​ ಗಮನಕ್ಕೆ ತರದೆ ಕೇಸ್ ನಡೆಸುವಂತಿಲ್ಲ

ನವಂಬರ್ 21 ಮತ್ತು 22 ರ ಮಧ್ಯರಾತ್ರಿ 11 ರಿಂದ 1 ಗಂಟೆ ಸಮಯ. ಕೋರಮಂಗಲದಲ್ಲಿರುವ ಗ್ಲೋಬಲ್ ಕನೆಕ್ಟ್ ಟೆಲಿಕಾಂ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 8 ಜನ ಆಸಾಮಿಗಳು ಟ್ಯಾಕ್ಸ್ ಆಫೀಸರ್ ಸೋಗಿನಲ್ಲಿ ನುಗ್ಗಿದ್ದಾರೆ. ಅಕ್ರಮ‌ವಾಗಿ ಕಾಲ್ ಸೆಂಟರ್ ನಡೆಸುತ್ತಿದ್ದೀರಾ ಪೊಲೀಸ್ ಠಾಣೆಗೆ ನಡೆಯಿರಿ ಅಂತಾ
ಪವನ್, ರಾಜ್ ವೀರ್, ಆಕಾಶ್, ಅನಸ್ ಎಂಬುವವರನ್ನು ಕರೆದುಕೊಂಡು ಬಂದವರು ನೇರವಾಗಿ ಹೋಗಿದ್ದು ಕೋಲಾರ್​ ಲಾಡ್ಜ್​ಗೆ.

ಅಲ್ಲಿ ಸಿಬ್ಬಂದಿಗಳನ್ನು ಕೂಡಿಹಾಕಿದ್ದ ಆರೋಪಿಗಳು, ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಿಬ್ಬಂದಿಗಳಿಂದ ಆನ್ ಲೈನ್ ಮೂಲಕ 8 ಲಕ್ಷ ರೂ ಹಣ ವರ್ಗಾಯಿಸಿಕೊಂಡು, ಸಿಇಓ ಬಳಿಯಿಂದ 14 ಲಕ್ಷ ರೂ ಚೆಕ್ ಪಡೆದುಕೊಂಡಿದ್ದಾರೆ. ಅಲ್ಲಿಗೆ ಇದು ಪಕ್ಕಾ ಕಿಡ್ನ್ಯಾಪ್ ಗ್ಯಾಂಗ್ ಎಂದು ಅರಿವಾಗುತ್ತಿದ್ದಂತೆ ಕಂಪನಿ ಸಿಬ್ಬಂದಿ ಬೆಳಗಿನ ಜಾವ ಕೋರಮಂಗಲ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.

12 ಗಂಟೆ ಒಳಗೆ ಆರೋಪಿಗಳು ಅಂದರ್​ 

ತಕ್ಷಣ ಅಲರ್ಟ್ ಆದ ಪೊಲೀಸರು ಬೇಟೆಗೆ ಇಳಿದಿದ್ದಾರೆ. ಆರೋಪಿಗಳಿದ್ದ ಜಾಡು ಪತ್ತೆ ಮಾಡಿದ ಖಾಕಿ ತಂಡ, ಘಟನೆ ನಡೆದು 12 ಗಂಟೆ ಒಳಗೆ ಛಲಪತಿ, ಭರತ್, ಪವನ್, ಪ್ರಶಾಂತ್, ಅತೀಕ್, ಜಬಿವುಲ್ಲಾ ಸೇರಿದಂತೆ 8 ಜನರನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಬೆಚ್ಚಿಬೀಳುವ ಸಂಗತಿ ಹೊರಬಿದ್ದಿದೆ‌‌. ಇದೇ ಕಳ್ಳರ ಗ್ಯಾಂಗ್​​ನಲ್ಲಿ ಇದ್ದ ಛಲಪತಿ ಮಾಲೂರು ಟೌನ್ ಠಾಣೆ ಹೆಡ್ ಕಾನ್ಸ್​ಟೇಬಲ್ ಅನ್ನೋದು ಗೊತ್ತಾಗಿದೆ.

ಕಳೆದ ಬುಧವಾರ ಡೈರಿ ಸರ್ಕಲ್ ಬ್ರಿಡ್ಜ್ ಮೇಲೆ ನಡೆದ 7.11 ಕೋಟಿ ರೂ ರಾಬರಿ ಪ್ರಕರಣದಲ್ಲೂ ಪೊಲೀಸ್ ಕಾನ್ಸ್ ಟೇಬಲ್ ಅಣ್ಣಪ್ಪ ನಾಯ್ಕ ಭಾಗಿಯಾಗಿದ್ದ. ಆ ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಕೋರಮಂಗಲ ಕಿಡ್ನ್ಯಾಪ್ ಕೇಸ್​ನಲ್ಲೂ ಪೊಲೀಸ್ ಕಾನ್ಸ್ ಟೇಬಲ್ ಭಾಗಿಯಾಗಿರುವುದು ಪೊಲೀಸ್ ಇಲಾಖೆ ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ.

ಇದನ್ನೂ ಓದಿ: ಜನರ ರಕ್ಷಣೆ ಮಾಡುವ ಪೊಲೀಸರಿಗೇ ಇಲ್ಲಾ ರಕ್ಷಣೆ: ಇದೆಂಥಾ ಸ್ಟೇಷನ್‌?

ರಿಯಲ್ ಎಸ್ಟೇಟ್ ಸೇರಿದಂತೆ ಬೇರೆ ಬೇರೆ ಕೆಲಸ ಮಾಡಿಕೊಂಡಿದ್ದ ಪವನ್, ನಷ್ಟ ಅನುಭವಿಸಿದ್ದ‌. ಅಲ್ಲದೇ ಸಾಕಷ್ಟು ಸಾಲ‌ ಮಾಡಿಕೊಂಡಿದ್ದ. ಇದರಿಂದ ಹೊರಬರಲಾಗದೇ ವಿಲವಿಲ ಅಂತಾ ಒದ್ದಾಡಿದ್ದ‌. ಹಣ ಮಾಡಲು ಬೇರೆ ದಾರಿ ಕಾಣದೆ ಛಲಪತಿ ಜೊತೆ ಸೇರಿ ಕಿಡ್ನ್ಯಾಪ್​ ಮಾಡಲು ಮುಂದಾಗಿದ್ದಾನೆ. ಆದರೆ ಕೋರಮಂಗಲ ಪೊಲೀಸರ ತ್ವರಿತ ಕಾರ್ಯಾಚರಣೆಯಿಂದಾಗಿ ಆರೋಪಿಗಳು ಅರೆಸ್ಟ್ ಆಗಿದ್ದು, 14 ಲಕ್ಷ ರೂ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.