
ಬೆಂಗಳೂರು, ಏಪ್ರಿಲ್ 01: ಬ್ರಾಂಡೆಡ್ ವಾಚ್ (Branded Watch) ಎಂದು ಹೇಳಿಕೊಂಡು ನಕಲಿ ಗಡಿಯಾರಗಳನ್ನು ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ನಗರದ ವಿವಿಧೆಡೆ ನಕಲಿ ಕೈ ಗಡಿಯಾರದ ಅಂಗಡಿಗಳನ್ನು ನಡೆಸುತ್ತಿದ್ದು, ಪೊಲೀಸರು ಅವರಿಂದ ಸುಮಾರು 25 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಹರೀಶ್ ಕುಮಾರ್, ಸಯ್ಯದ್ ಜೈಸಾದ್ ಇಕ್ಬಾಲ್, ಮೊಹಮ್ಮದ್ ಹಬೀಬ್ ಹುಸೈನ್, ಖಲೀಮ್ ಉಲ್ಲಾ ಮತ್ತು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಇವರು ನಗರದ ಆರ್‌ಟಿ ನಗರ, ಗಂಗಾನಗರ ಮತ್ತು ಚಿಕ್ಕಪೇಟೆ ಪ್ರದೇಶಗಳಲ್ಲಿ ಅಂಗಡಿಗಳನ್ನು ನಡೆಸುತ್ತಿದ್ದು, ಪ್ರಸಿದ್ಧ ಭಾರತೀಯ ಬ್ರಾಂಡ್‌ಗಳ ಹೆಸರಿನಲ್ಲಿ ನಕಲಿ ಗಡಿಯಾರಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಐದು ಅಂಗಡಿಗಳ ಮೇಲೆ ದಾಳಿ ನಡೆಸಿದರು. ದಾಳಿಯ ವೇಳೆ 670 ನಕಲಿ ಗಡಿಯಾರಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯವನ್ನು ಸುಮಾರು 25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಗ್ರಾಹಕರನ್ನು ಯಾಮಾರಿಸಲು ಆರೋಪಿಗಳು ಕಡಿಮೆ ಬೆಲೆಯಲ್ಲಿ, “ಆಫರ್ ರೇಟ್”ನಲ್ಲಿ ಗಡಿಯಾರಗಳನ್ನು ನೀಡುತ್ತಿದ್ದರು. ಇವು ಮೂಲ ಬ್ರಾಂಡ್ ಉತ್ಪನ್ನಗಳೇ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಸ್ತುತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.