Inspiring: ರೋಲೆಕ್ಸ್ ವಾಚ್ ಗೊತ್ತೆ? ಇದನ್ನು ಸ್ಥಾಪಿಸಿದವ ಕಡುಬಡವ, ನಿರ್ಗತಿಕ; ಇದು ವ್ಯವಹಾರ ಜಗತ್ತಿನ ಕೌತುಕ
Interesting Story Behind Rolex Watch: ವಿಶ್ವಕ್ಕೆ ಮೊದಲ ರಿಸ್ಟ್ ವಾಚ್ ಕೊಟ್ಟ ರೋಲೆಕ್ಸ್ ಸಂಸ್ಥೆ ಆರಂಭವಾಗಿದ್ದು 1905ರಲ್ಲಿ ಲಂಡನ್ನಲ್ಲಿ. ಹಾನ್ಸ್ ವಿಲ್ಸ್ಡಾರ್ಫ್ ಮತ್ತು ಆಲ್ಫ್ರೆಡ್ ಡೇವಿಸ್ ಈ ಕಂಪನಿಯ ಸ್ಥಾಪಕರು. ಮೊದಲ ವಿಶ್ವಮಹಾಯುದ್ಧದ ಬಳಿಕ ಕಂಪನಿ ಸ್ವಿಸ್ ದೇಶಕ್ಕೆ ಶಿಫ್ಟ್ ಆಗುತ್ತದೆ. ಹಾನ್ಸ್ ವಿಲ್ಸ್ಡಾರ್ಫ್ ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಅನಾಥರಾಗಿದ್ದಲ್ಲೆ ಬಡತನಕ್ಕೆ ಸಿಕ್ಕುಹೋಗಿದ್ದರು.
ಅತ್ಯಂತ ಜನಪ್ರಿಯ ಐಷಾರಾಮಿ ಬ್ರ್ಯಾಂಡ್ಸ್ ಎಂದರೆ ನಿಮಗೆ ಲೂಯಿಸ್ ವ್ಯೂಟನ್ (Louis Vuitton), ಡಿಯೋರ್, ಗುಚ್ಚಿ (Gucci), ರೋಲೆಕ್ಸ್, ವೆರ್ಸಾಸೆ (Versace) ಇತ್ಯಾದಿ ನೆನಪಿಗೆ ಬರಬಹುದು. ಲಕ್ಷುರಿ ವಸ್ತುಗಳು ಶ್ರೀಮಂತರಿಂದ ಶ್ರೀಮಂತರಿಗಾಗಿ ಎಂದು ಹೇಳಿ ಸುಮ್ಮನಾಗಬಹುದು. ಆದರೆ, ಕೆಲವೊಂದು ಲಕ್ಷುರಿ ವಸ್ತುಗಳ ಹಿಂದೆ ಸಾಮಾನ್ಯ ವ್ಯಕ್ತಿಗಳು ಇದ್ದಿರಬಹುದು. ಅಂಥ ಒಂದು ಬ್ರ್ಯಾಂಡ್ ರೋಲೆಕ್ಸ್ (Rolex) ಆಗಿದೆ. ವಾಚ್ ಅಥವಾ ಕೈಗಡಿಯಾರ ಉದ್ಯಮದಲ್ಲಿ ಅತ್ಯಂತ ಪ್ರತಿಷ್ಠಿತ ಹೆಸರು ರೋಲೆಕ್ಸ್. ಈ ಬ್ರ್ಯಾಂಡ್ ಹಿಂದೆ ಬಹಳ ಕುತೂಹಲಕಾರಿ ವಿಚಾರಗಳಿವೆ. ಇದನ್ನು ಸ್ಥಾಪಿಸಿದ ವ್ಯಕ್ತಿ ಅನಾಥ ಮತ್ತು ಕಡುಬಡವನಾಗಿದ್ದವ. ನಿಜಕ್ಕೂ ಇವರ ಕಥೆ ಎಲ್ಲರಿಗೂ ಜೀವನೋತ್ಸಾಹ ತುಂಬಬಹುದು.
ಸ್ವಿಟ್ಜರ್ಲ್ಯಾಂಡ್ ದೇಶದ ರೋಲೆಕ್ಸ್ ಸಂಸ್ಥೆ 20ನೇ ಶತಮಾನದ ಆರಂಭದಲ್ಲಿ (1905) ಉದಯವಾಗಿತ್ತು. ಜರ್ಮನಿಯ ಹಾನ್ಸ್ ವಿಲ್ಸ್ಡಾರ್ಫ್ (Hans Wilsdorf) ಮತ್ತು ಆಲ್ಫ್ರೆಡ್ ಡೇವಿಸ್ ಎಂಬಿಬ್ಬರು ಸೇರಿ ಲಂಡನ್ನಲ್ಲಿ ಕಟ್ಟಿದ ಸಂಸ್ಥೆ ಇದೆ. ಆರಂಭದಲ್ಲಿ ಇದರ ಹೆಸರು ವಿಲ್ಸ್ಡಾರ್ಫ್ ಅಂಡ್ ಡೇವಿಸ್ ಎಂದಿತ್ತು. 1908ರಲ್ಲಿ ರೋಲೆಕ್ಸ್ ಬ್ರ್ಯಾಂಡ್ ಹೆಸರಿಗೆ ಬದಲಾಯಿತು. ಮೊದಲ ವಿಶ್ವ ಮಹಾಯುದ್ಧದ ಬಳಿಕ ರೋಲೆಕ್ಸ್ ಕಚೇರಿ ಲಂಡ್ನಿಂದ ಸ್ವಿಟ್ಜರ್ಲ್ಯಾಂಡ್ನ ಜಿನಿವಾ ನಗರಕ್ಕೆ ವರ್ಗಾವಣೆ ಆಯಿತು.
ಇದರ ಇಬ್ಬರು ಸಂಸ್ಥಾಪಕರಲ್ಲಿ ಒಬ್ಬರಾದ ಹಾನ್ಸ್ ವಿಲ್ಸ್ಡಾರ್ಫ್ ಅವರು ಜರ್ಮನಿಯವರು. ಇವರ ತಂದೆ ಫರ್ಡಿನಾಂಡ್ ವಿಲ್ಸ್ಡಾರ್ಫ್ ಹಾರ್ಡ್ವೇರ್ ಶಾಪ್ ಇಟ್ಟುಕೊಂಡಿದ್ದರು. ಹಾನ್ಸ್ ವಯಸ್ಸು 20 ವರ್ಷ ಆಗಿದ್ದಾಗ ತಂದೆ ಅಕಾಲಿಕ ಮರಣ ಅಪ್ಪಿದರು. ಹಾನ್ಸ್ ಹಾಗೂ ಅವರ ಕುಟುಂಬ ಬಹುತೇಕ ಬೀದಿಪಾಲಾಗಿತ್ತು, ಕಡುಬಡತನಕ್ಕೆ ಸಿಲುಕಿತ್ತು.
ಆದರೆ, ಹಾನ್ಸ್ ಅದೃಷ್ಟಕ್ಕೆ ಅವರ ದುರವಸ್ಥೆ ಹೆಚ್ಚು ಅವಧಿ ಮುಂದುವರಿಯಲಿಲ್ಲ. ಅವರ ಚಿಕ್ಕಪ್ಪ, ದೊಡ್ಡಪ್ಪಂದಿರು ಸಹಾಯಕ್ಕೆ ಬಂದರು. ಹಾನ್ಸ್ ಓದು ಮುಗಿಸಿ ಸ್ವಿಟ್ಜರ್ಲ್ಯಾಂಡ್ನಲ್ಲಿ ಹರಳು ವ್ಯಾಪಾರಿಯೊಬ್ಬರ ಜೊತೆ ಕೆಲಸ ಮಾಡಿದರು. ಅಲ್ಲಿ ಅವರಿಗೆ ವಾಚ್ ತಯಾರಿಸುವ ಕಲೆ ಸಿದ್ಧಿಸಿತು.
ವಂಚನೆ, ಕಳ್ಳತನದ ಪೆಟ್ಟು
ವಾಚ್ ತಯಾರಿಸುವ ಕಲೆ ತಿಳಿದ ಬಳಿಕ ಹಾನ್ಸ್ ವಿಲ್ಸ್ಡಾರ್ಫ್ ಹೊಸ ಜೀವನ ಕಟ್ಟಲು 1903ರಲ್ಲಿ ಲಂಡನ್ಗೆ ಬರುತ್ತಾರೆ. ಬಹಳ ದುಬಾರಿ ಆಸ್ತಿಯನ್ನು ಖರೀದಿಸುತ್ತಾರೆ. ಇನ್ನೇನು ಬದುಕು ಆರಾಮ ಆಯಿತು ಎಂದುಕೊಳ್ಳುವಾಗಲೇ ಕಳ್ಳತನ, ವಂಚನೆಯಿಂದ ಇದ್ದ ಆಸ್ತಿ ಕಳೆದುಕೊಳ್ಳುತ್ತಾರೆ. ಆಗ ಜೀವನ ನಡೆಸಲು ವಾಚ್ ಕಂಪನಿಯಲ್ಲಿ ಕೆಲಸಕ್ಕೆ ಸೇರುತ್ತಾರೆ.
ಹೆಂಡತಿ ಸಿಕ್ಕ ಮೇಲೆ ಅದೃಷ್ಟ
ಲಂಡನ್ಗೆ ಬಂದ ಹೊಸದರಲ್ಲಿ ಹಾನ್ಸ್ ವಿಲ್ಸ್ಡಾರ್ಫ್ ನಾನಾ ಕಷ್ಟ, ಸವಾಲುಗಳನ್ನು ಎದುರಿಸುತ್ತಾರೆ. ಆದರೆ, ಅವರ ಭಾವೀ ಪತ್ನಿ ಲಂಡ್ನಲ್ಲಿ ಪರಿಚಯ ಆಗುತ್ತದೆ. ಆಕೆಯ ಸಹಾಯದಿಂದ ಬ್ರಿಟಿಷ್ ಪೌರತ್ವ ಸಿಕ್ಕುತ್ತದೆ. ಅದೇ ವೇಳೆ, ವಾಚ್ ತಯಾರಿಕೆಯ ವಿದ್ಯೆ ಬಲ್ಲವರಾಗಿದ್ದ ಹಾನ್ಸ್ಗೆ ವಿಶೇಷವಾದ ರಿಸ್ಟ್ ವಾಚ್ ತಯಾರಿಸಬೇಕೆನ್ನುವ ಅದಮ್ಯ ಆಸೆ ಇರುತ್ತದೆ. ಆದರೆ, ಅವಶ್ಯ ಬಂಡವಾಳ ಇರುವುದಿಲ್ಲ.
ಇದನ್ನೂ ಓದಿ: 10 Years of India: ಕಳೆದ 10 ವರ್ಷದಲ್ಲಿ ದೇಶದ ಆರ್ಥಿಕ, ಹಣಕಾಸು ವ್ಯವಸ್ಥೆಯಲ್ಲಿ ಆದ ಮಹತ್ವದ ಪರಿವರ್ತನೆಗಳಿವು…
ಆಗ ಸಹಾಯಕ್ಕೆ ಬರುವುದು ಇವರ ಹೆಂಡತಿಯ ಸಹೋದರ ಆಲ್ಫ್ರೆಡ್ ಡೇವಿಸ್. ಬ್ಯುಸಿನೆಸ್ಮ್ಯಾನ್ ಆಗಿದ್ದ ಆಲ್ಫ್ರೆಡ್ ಡೇವಿಸ್ ಜೊತೆ ಸೇರಿ ಹಾನ್ಸ್ ವಿಲ್ಸ್ಡಾರ್ಫ್ 1905ರಲ್ಲಿ ವಾಚ್ ಕಂಪನಿ ಆರಂಭಿಸುತ್ತಾರೆ.
ರೋಲೆಕ್ಸ್ ವಾಚ್ ಹೆಸರೇಕೆ?
ಹಾನ್ಸ್ ಮತ್ತು ಆಲ್ಫ್ರೆಡ್ ಸ್ಥಾಪಿಸಿದ ಕಂಪನಿಯ ಮೊದಲ ಹೆಸರು ವಿಲ್ಸ್ಡಾರ್ಫ್ ಅಂಡ್ ಡೇವಿಸ್. ಮೊದಲಿಗೆ ಪಾಕೆಟ್ ವಾಚ್ ತಯಾರಿಸಿ ಬಿಡುಗಡೆ ಮಾಡುತ್ತಾರೆ. ಅದು ಬಹಳ ಜನಪ್ರಿಯವಾಗುತ್ತದೆ. ಬಳಿಕ ರೋಲೆಕ್ಸ್ ಬ್ರ್ಯಾಂಡ್ ಆರಂಭಿಸುತ್ತಾರೆ. ರೋಲೆಕ್ಸ್ ಪದವನ್ನು ಉಚ್ಚರಿಸುವುದು ಸುಲಭ ಎನ್ನುವ ಕಾರಣಕ್ಕೆ ಆ ಹೆಸರು ಇಟ್ಟಿರುತ್ತಾರೆ.
1910ರಲ್ಲಿ ರೋಲೆಕ್ಸ್ ಬ್ರ್ಯಾಂಡ್ ಅಡಿಯಲ್ಲಿ ರಿಸ್ಟ್ ವಾಚ್ (wrist watch) ಸಿದ್ಧವಾಗುತ್ತದೆ. ಅದೂವರೆಗೂ ಯಾವ ವಾಚ್ ಕಂಪನಿಯೂ ರಿಸ್ಟ್ ವಾಚ್ ತಯಾರಿಸಿದ್ದಿಲ್ಲ. ಎಲ್ಲಾ ಪರೀಕ್ಷೆಗಳಲ್ಲೂ ರೋಲೆಕ್ಸ್ ತೇರ್ಗಡೆ ಆಗುತ್ತದೆ. ವಿಶ್ವದಲ್ಲಿ ಮೊದಲ ರಿಸ್ಟ್ ವಾಚ್ ತಯಾರಿಸಿದ ದಾಖಲೆ ರೋಲೆಕ್ಸ್ನದ್ದಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ