
ಬೆಂಗಳೂರು, ಸೆಪ್ಟೆಂಬರ್ 8: ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್ ವೇಯ (Bengaluru–Chennai Expressway) ಹೊಸಕೋಟೆ ಮತ್ತು ಕೋಲಾರ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್) ನಡುವಿನ 71 ಕಿಮೀ ಮಾರ್ಗವನ್ನು ಬಳಸಲು ಈಗ ಟೋಲ್ (Toll Collection) ಪಾವತಿಸಬೇಕಿದೆ. ಈ ಹೆದ್ದಾರಿಯಲ್ಲಿ ಟೋಲ್ ಸಂಗ್ರಹವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಆರಂಭಿಸಿದೆ. ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ ಕರ್ನಾಟಕ ಭಾಗದಲ್ಲಿ ಮಾರ್ಚ್‌ನಲ್ಲಿ ಲೋಕಾರ್ಪನೆಗೊಂಡಿದೆ. ಒಟ್ಟು 15,188 ಕೋಟಿ ರೂ. ವೆಚ್ಚದ 262 ಕಿ.ಮೀ ಉದ್ದದ ಈ ಈ ಎಕ್ಸ್‌ಪ್ರೆಸ್ ವೇಯ ಕರ್ನಾಟಕ ಭಾಗದಲ್ಲಿ ವಾಹನ ಸಂಚಾರ ಮಾರ್ಚ್ನಿಂದಲೇ ಆಎಂಭವಾಗಿದೆ.
ಹೆಡಿಗೆನಬೆಲೆ (ಹೊಸಕೋಟೆ ಬಳಿ), ಸುಂದರಪಾಳ್ಯ (ಕೆಜಿಎಫ್ ಬಳಿ) ಏಕಮುಖ ಪ್ರಯಾಣಕ್ಕೆ 185 ರೂ. ಮತ್ತು ರೌಂಡ್ ಟ್ರಿಪ್‌ಗೆ 275 ರೂ. ನಿಗದಿಯಾಗಿದೆ. ಸುಂದರಪಾಳ್ಯದಿಂದ ಹೆಡಿಗೆನಬೆಲೆಗೆ ಏಕಮುಖ ಪ್ರಯಾಣಕ್ಕೆ 190 ರೂ. ಮತ್ತು ರೌಂಡ್ ಟ್ರಿಪ್‌ಗೆ 280 ರೂ. ಇದೆ.
ಲಘು ಸರಕು ವಾಹನಗಳು, ಮಿನಿ ಬಸ್‌ಗಳು, ಬಸ್‌ಗಳು ಮತ್ತು ಟ್ರಕ್‌ಗಳಂತಹ ಇತರ ವಾಹನಗಳು ಮಾರ್ಗ ಮತ್ತು ಟ್ರಿಪ್ ಸಂಖ್ಯೆಯನ್ನು ಅವಲಂಬಿಸಿ 295 ರಿಂದ 955 ರವರೆಗೆ ಹೆಚ್ಚಿನ ದರಗಳನ್ನು ಪಾವತಿಸಬೇಕಾಗುತ್ತದೆ .
ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್ ವೇಯ ಕರ್ನಾಟಕ ವಿಭಾಗದಲ್ಲಿ ನಾಲ್ಕು ಟೋಲ್ ಪ್ಲಾಜಾಗಳಿವೆ. ಹೆಡಿಗೆನಬೆಲೆ, ಅಗ್ರಹಾರ, ಕೃಷ್ಣರಾಜಪುರ, ಸುಂದರಪಾಳ್ಯಗಳಲ್ಲಿ ಟೋಲ್ ಪ್ಲಾಜಾಗಳಿವೆ.
ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್ (3,000 ರೂ.) ಖರೀದಿಸಿದವರು ಪ್ರತಿ ಟ್ರಿಪ್‌ಗೆ ಪಾವತಿ ಮಾಡದೆ ಈ ಮಾರ್ಗವನ್ನು ಬಳಸಬಹುದು ಎಂದು ಹೆದ್ದಾರಿ ಪ್ರಾಧಿಕಾರ ದೃಢಪಡಿಸಿದೆ. ಆಗಾಗ್ಗೆ ಪ್ರಯಾಣಿಸುವವರಿಗೆ, ಕಾರುಗಳಿಗೆ ಮಾಸಿಕ ಪಾಸ್‌ಗಳ ಬೆಲೆ 6,105 ರೂ. (50 ಏಕಮುಖ ಪ್ರವಾಸಗಳು) ಅಥವಾ ರೌಂಡ್ ಟ್ರಿಪ್‌ಗಳಿಗೆ 6,260 ರೂ. ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್ ವೇ ಲೋಕಾರ್ಪಣೆ ಯಾವಾಗ? ಗಡ್ಕರಿ ಕೊಟ್ಟರು ಮಹತ್ವದ ಮಾಹಿತಿ
ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ ಎರಡು ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಆರು ಗಂಟೆಗಳಿಂದ 3 ಗಂಟೆಗಳಿಗೆ ಇಳಿಕೆ ಮಾಡಲಿದೆ. ಇದರಿಂದಾಗಿ ಎನ್ಎಚ್-44 ಮತ್ತು ಎನ್ಎಚ್-48 ರ ದಟ್ಟಣೆ ಕಡಿಮೆಯಾಗಲಿದೆ. ಸರಕು ಸಾಗಣೆ ವೆಚ್ಚ ಕಡಿಮೆಯಾಗುವುದರಿಂದ ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಉತ್ತೇಜನ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಕಾಮಗಾರಿ ಮುಂದುವರೆದಿದ್ದು, ಪೂರ್ಣ ಕಾರಿಡಾರ್ 2026 ರ ಜುಲೈ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.