ಬೆಂಗಳೂರು: 2021ನೇ ಸಾಲಿನ ಏಕಲವ್ಯ (Eklavya Award 2021), ಜೀವಮಾನ ಸಾಧನೆ (Lifetime Achievement Award 2021), ಕ್ರೀಡಾ ರತ್ನ ಪ್ರಶಸ್ತಿ (Sports Ratna Award) ಮತ್ತು 2022ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ (Sports Supporting Award 2022)ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಪ್ರದಾನ ಮಾಡಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಕ್ರೀಡಾ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದ ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಕ್ರೀಡಾಪಟುಗಳಿಗೆ ಇನ್ನೂ ಹೆಚ್ಚಿನ ಆರ್ಥಿಕ ಉತ್ತೇಜನ ನೀಡುತ್ತೇವೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸರ್ಕಾರಿ ಹುದ್ದೆ ನೀಡಲಾಗುವುದು ಎಂದರು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಕ್ರೀಡಾ ಇಲಾಖೆ ಎಸಿಎಸ್ ನೇತೃತ್ವದಲ್ಲಿ ನೇರ ನೇಮಕಾತಿ ಮಾಡುತ್ತೇವೆ. ನೇರ ನೇಮಕಾತಿ ಮಾಡುವ ಬಗ್ಗೆ ಮುಂದಿನ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗುವುದು. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಗ್ರೂಪ್ ಎ ಹುದ್ದೆ, ಕಾಮನ್ವೆಲ್ತ್ ಪದಕ ವಿಜೇತರಿಗೆ ಗ್ರೂಪ್ ಬಿ ಹುದ್ದೆ ನೀಡಲಾಗುವುದು ಎಂದರು.
ಇದನ್ನೂ ಓದಿ: ದತ್ತ ಜಯಂತಿ ಸಂಭ್ರಮ, ಕಾಫಿನಾಡು ಕೇಸರಿಮಯ: ಮಹಿಳೆಯರಿಂದ ಬೃಹತ್ ಸಂಕೀರ್ತನಾ ಯಾತ್ರೆ ಫೋಟೋಸ್ ಇಲ್ಲಿವೆ
ನಾವು ಸ್ವಯಂ ಕ್ರೀಡಾಪಟು ಆಗಿರುವ ರಾಜ್ಯಪಾಲರನ್ನು ಹೊಂದಿದ್ದೇವೆ. ರಾಜ್ಯದ ಆಡಳಿತದಲ್ಲಿ ಕ್ರೀಡಾ ಇಲಾಖೆಯನ್ನು ಸಚಿವ ನಾರಾಯಣ ಗೌಡ ಉನ್ನತ ಸ್ಥಾನಕ್ಕೆ ಒಯ್ದಿದ್ದಾರೆ. ಸಾಧನೆಯ ಹಿಂದೆ ದೊಡ್ಡ ಪರಿಶ್ರಮ ಇರುತ್ತದೆ. ಕ್ರೀಡಾಪಟುಗಳಿಗೆ ಇನ್ನೂ ಹೆಚ್ಚಿನ ಆರ್ಥಿಕ ಉತ್ತೇಜನ ನೀಡಲಾಗುವುದು. ಸೋಲಬಾರದು ಅಂತಾ ಆಡುವುದು ಒಂದು ರೀತಿ, ಗೆಲ್ಲಬೇಕು ಅಂತಾ ಆಡುವುದು ಇನ್ನೊಂದು ರೀತಿ ಎಂದರು.
ಕೆಒಎ ಗೋವಿಂದ ರಾಜುಗೆ ಟಾಂಗ್ ಕೊಟ್ಟ ಸಿಎಂ
ತನ್ನ ಭಾಷಣದ ವೇಳೆ ರಾಜ್ಯದ ಕ್ರೀಡಾಪಟುಗಳು ವಲಸೆ ಹೋಗುವುದನ್ನು ತಪ್ಪಿಸಲು ರಾಜ್ಯದಲ್ಲೇ ಉದ್ಯೋಗ ಕೊಡುವಂತೆ ಮುಖ್ಯಮಂತ್ರಿಯವರಿಗೆ ಕೆಒಎ ಅಧ್ಯಕ್ಷ ಗೋವಿಂದ ರಾಜ್ ಅವರು ಮನವಿ ಮಾಡಿದ್ದರು. ಇದಕ್ಕೆ ಭಾಷಣದ ವೇಳೆ ಪ್ರತಿಕ್ರಿಯಿಸಿದ ಸಿಎಂ, ನೋಡಪ್ಪಾ ಗೋವಿಂದ ರಾಜ್, ಇದನ್ನು ನಿಮ್ಮ ಸರ್ಕಾರದಲ್ಲಿ ನೀನು ಮಾಡಿಸಬಹುದಾಗಿತ್ತು. ನೀನು ಮಾಡಿಸಲಿಲ್ಲ, ಮಾಡಲು ನಾನೇ ಬರಬೇಕಾಯ್ತು. ನೀನು ಹೇಳುತ್ತಾ ಹೋಗು, ನಾವು ಕೆಲಸ ಜಾರಿ ಮಾಡುತ್ತೇವೆ. ಹೇಳುವುದಷ್ಟೇ ನಿನ್ನ ಕೆಲಸ ಎಂದರು.
ಇದನ್ನೂ ಓದಿ: Raichur: ರಾಯಚೂರು ಜಿಲ್ಲೆಗೆ ಎಂಟ್ರಿಯಾಗ್ತಿದೆ ಆಂಧ್ರ-ತೆಲಂಗಾಣದ ಭತ್ತ! ಸ್ಥಳೀಯ ರೈತರು ಕಂಗಾಲು
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಪ್ಯಾರಾ ಸ್ಪೋರ್ಟ್ಸ್ ಕ್ರೀಡಾಪಟುಗಳಿಗೆ ಮಹತ್ವ ಕೊಡಬೇಕಾದ ಅವಶ್ಯಕತೆ ಇದೆ. ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಮೊದಲ ಬಾರಿಗೆ ಜಾರಿಯಾಗಿದೆ. ಖಂಡಿತವಾಗಿ ಭವಿಷ್ಯದಲ್ಲಿ ಕರ್ನಾಟಕದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರಲಿದ್ದಾರೆ. ಕರ್ನಾಟಕ ಸರ್ಕಾರ ಕ್ರೀಡೆಗೆ ಹೆಚ್ಚು ಒತ್ತನ್ನು ನೀಡುತ್ತಿದೆ ಎಂದರು.
ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ-2022
1. ಎಂ.ಎಂ.ಕವನ-ಬಾಲ್ ಬ್ಯಾಡ್ಮಿಂಟನ್, 2. ಬಿ.ಗಜೇಂದ್ರ-ಗುಂಡು ಎತ್ತುವುದು, 3. ಶ್ರೀಧರ್-ಕಂಬಳ, 4. ರಮೇಶ್ ಮಳವಾಡ-ಖೋಖೋ, 5. ಹೆಚ್.ಖುಷಿ-ಯೋಗ, 6. ವೀರಭದ್ರ ಮುಧೋಳ-ಮಲ್ಲಕಂಬ, 7. ದರ್ಶನ್-ಕಬಡ್ಡಿ, 8. ಲೀನಾ ಅಂಥೋಣಿ ಸಿದ್ದಿ-ಮಟ್ಟಿ ಕುಸ್ತಿ
2021ನೇ ಸಾಲಿನ ಏಕಲವ್ಯ ಪ್ರಶಸ್ತಿ
1. ಬಿ.ಚೇತನ್-ಅಥ್ಲೆಟಿಕ್ಸ್, 2. ಶಿಖಾ ಗೌತಮ್-ಬ್ಯಾಡ್ಮಿಂಟನ್, 3.ಕೀರ್ತಿ ರಂಗಸ್ವಾಮಿ-ಸೈಕ್ಲಿಂಗ್, 4. ಅದಿತಿ ವಿಕ್ರಾಂತ್ ಪಾಟೀಲ್-ಫೆನ್ಸಿಂಗ್, 5. ಅಮೃತ್ ಮುದ್ರಾಬೆಟ್-ಜಿಮ್ನಾಸ್ಟಿಕ್, 6. ಶೇಷೇಗೌಡ-ಹಾಕಿ, 7. ರೇಷ್ಮಾ ಮರೂರಿ-ಲಾನ್ ಟೆನಿಸ್, 8. ಟಿ.ಜೆ.ಶ್ರೀಜಯ್-ಶೂಟಿಂಗ್, 9. ತನೀಷ್ ಜಾರ್ಜ್ ಮ್ಯಾಥ್ಯೂ-ಈಜು, 10.ಹರಿಪ್ರಸಾದ್-ವಾಲಿಬಾಲ್, 11. ಯಶಸ್ವಿನಿ ಘೋರ್ಪಡೆ-ಟೇಬಲ್ ಟೆನಿಸ್, 12. ಸೂರಜ್ ಸಂಜು ಅಣ್ಣಿಕೇರಿ-ಕುಸ್ತಿ, 13. ಹೆಚ್.ಎಸ್.ಸಾಕ್ಷತ್-ನೆಟ್ ಬಾಲ್, 14. ಬಿ.ಎಂ.ಮನೋಜ್-ಬಾಸ್ಕೆಟ್ ಬಾಲ್, 15. ಎಂ.ರಾಘವೇಂದ್ರ-ಪ್ಯಾರಾ ಅಥ್ಲೆಟಿಕ್ಸ್
2021ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ
1. ಅಲ್ಕಾ ಎನ್.ಪಡುತಾರೆ-ಸೈಕ್ಲಿಂಗ್, 2. ಬಿ.ಆನಂದ ಕುಮಾರ್-ಪ್ಯಾರಾ ಬ್ಯಾಡ್ಮಿಂಟನ್, 3. ಶೇಖರಪ್ಪ-ಯೋಗ, 4. ಕೆ.ಸಿ.ಅಶೋಕ್-ವಾಲಿಬಾಲ್, 5. ರವೀಂದ್ರ ಶೆಟ್ಟಿ-ಕಬಡ್ಡಿ, 6. ಬಿ.ಜೆ.ಅಮರನಾಥ್-ಯೋಗ
2022ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ
1. ಬಿಎಂಎಸ್ ಮಹಿಳಾ ಕಾಲೇಜು-ಬೆಂಗಳೂರು ನಗರ ಜಿಲ್ಲೆ 2. ಮಂಗಳಾ ಫ್ರೆಂಡ್ಸ್ ಸರ್ಕಲ್-ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ 3. ನಿಟ್ಟೆ ಎಜುಕೇಷನ್ ಟ್ರಸ್ಟ್-ಉಡುಪಿ ಜಿಲ್ಲೆ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Tue, 6 December 22