Raichur: ರಾಯಚೂರು ಜಿಲ್ಲೆಗೆ ಎಂಟ್ರಿಯಾಗ್ತಿದೆ ಆಂಧ್ರ-ತೆಲಂಗಾಣದ ಭತ್ತ! ಸ್ಥಳೀಯ ರೈತರು ಕಂಗಾಲು
ರಾಯಚೂರು ಜಿಲ್ಲೆಯಲ್ಲಿ ಭತ್ತ ಬೆಳೆದ ರೈತರು ಸಂಕಷ್ಟ ಎದುರಿಸೊ ಲಕ್ಷಣಗಳು ಗೋಚರಿಸುತ್ತಿವೆ. ಸ್ಥಳೀಯ ರೈತರಿಗಿಂತಲೂ ಆಂಧ್ರ, ತೆಲಂಗಾಣ ರೈತರ ಭತ್ತವೇ ಹೆಚ್ಚಾಗಿ ಬರ್ತಿದೆ.
ಜಿಲ್ಲೆಯಲ್ಲಿ ಹತ್ತಿ ಬೆಳೆಗಾರರ ಗೋಳಾಯ್ತು, ಈಗ ಭತ್ತ ಬೆಳೆದ ರೈತರಿಗೂ (Raichur paddy farmers) ಸಮಸ್ಯೆ ಎದುರಾಗೋ ಲಕ್ಷಣಗಳು ಗೋಚರಿಸುತ್ತಿವೆ.. ಯಾಕಂದ್ರೆ ಆ ಗಡಿ ಭಾಗದ ಜಿಲ್ಲೆಯಲ್ಲಿ ಹೊರ ರಾಜ್ಯದ ಭತ್ತ ಅತೀ ಹೆಚ್ಚಾಗಿ ಆಗಮಿಸುತ್ತಿದ್ದು, ಭತ್ತದ ದರ ಕುಸಿಯೋ ಭೀತಿ ಎದುರಾಗಿದೆ. ಇಲ್ಲಿನ ಕೆಲ ರೈತರು ತಮ್ಮ ಸರತಿ ಸಾಲು ಯಾವಾಗ ಬರತ್ತೆ.. ಯಾವಾಗ ತಮ್ಮ ಸ್ಟಾಕ್ ಅನ್ನ ಮಾರಾಟ ಮಾಡಿ, ಕಂತೆ ಕಂತೆ ಹಣ ಎಣಿಸೋದು ಅಂತ ಕಾಯುತ್ತಾ ಇದ್ದರೆ..ಇನ್ನೂ ಕೆಲ ರೈತರು ಯಾವಾಗಪ್ಪ ಮನೆ ಸೇರ್ತಿವಿ ಅಂತ ಭತ್ತ (paddy) ಮಾರಾಟ ಕೇಂದ್ರಗಳಲ್ಲಿಯೇ ಕಾಲ ಕಳೆಯುತ್ತಿದ್ದಾರೆ.. ಅಷ್ಟಕ್ಕೂ ಈ ದೃಶ್ಯಗಳಿಗೆ ಸಾಕ್ಷಿಯಾಗಿರುವುದು ರಾಯಚೂರು.
ರಾಯಚೂರು ಜಿಲ್ಲೆಗೆ ಎಂಟ್ರಿಯಾಗ್ತಿದೆ ಆಂಧ್ರ-ತೆಲಂಗಾಣದ ಭತ್ತ!
ಹೌದು.. ಈ ಬಾರಿ ರಾಯಚೂರಿನಲ್ಲಿ ಅತೀ ಹೆಚ್ಚು ಹತ್ತಿ, ಭತ್ತ ಬೆಳೆಯಲಾಗಿದೆ.. ಹತ್ತಿ ಬೆಳೆದಿದ್ದ ರೈತರು ಇಳುವರಿ ಸಮಸ್ಯೆ ಎದುರಿಸಿದರೂ.. ಒಳ್ಳೆಯ ರೇಟ್ ಇದ್ರೂ ಹತ್ತಿ ಬೆಳೆಯ ಇಳುವರಿ ಮಾತ್ರ ಕುಂಠಿತವಾಗಿತ್ತು.. ಈಗ ಅದೇ ರೀತಿ ಭತ್ತ ಬೆಳೆದ ರೈತರ ಸ್ಥಿತಿಯೂ ಅದೇ ಆಗ್ತಿದೆ.. ಭತ್ತ ಬೆಳೆದ ರೈತರು ಸಂಕಷ್ಟ ಎದುರಿಸೊ ಲಕ್ಷಣಗಳು ಗೋಚರಿಸುತ್ತಿವೆ.. ಯಾಕಂದ್ರೆ, ಸ್ಥಳೀಯ ರೈತರಿನ್ನೂ ಭತ್ತ ಕಟಾವು ಮಾಡಿಲ್ಲ.. ಕೆಲವು ಕಡೆ ಮಾತ್ರ ಕಟಾವು ಮಾಡಲಾಗ್ತಿದ್ದು, ಬಹುತೇಕ ಕಡೆ ಬೆಳೆ ಕಟಾವಿನ ಹಂತಕ್ಕೆ ಬಂದಿವೆ.. ಸ್ಥಳೀಯ ರೈತರ ಭತ್ತ ಮಾರುಕಟ್ಟೆ ತಲುಪೋದು ವಿಳಂಬವಾಗ್ತಿದೆ..
ಈ ಮಧ್ಯೆ ರಾಯಚೂರಿಗೆ ಸ್ಥಳೀಯ ರೈತರಿಗಿಂತಲೂ ಆಂಧ್ರ, ತೆಲಂಗಾಣ ರೈತರ ಭತ್ತವೇ ಹೆಚ್ಚಾಗಿ ಬರ್ತಿದೆ. ಆಂಧ್ರ, ತೆಲಂಗಾಣಗಳಲ್ಲಿ ಬೆಂಬಲ ಬೆಲೆಗೆ ಭತ್ತ ಖರೀದಿಯಾದ್ರೂ, ಸೂಕ್ತ ಸಮಯಕ್ಕೆ ಹಣ ಕೈಸೇರೋಲ್ಲ, ವಿಳಂಬಾಗುತ್ತಿದೆ. ಹೀಗಾಗಿ ರಾಯಚೂರಿನಲ್ಲಿ ಖರೀದಿಯಾದ ತಕ್ಷಣವೇ ಹಣ ಕೈ ಸೇರುತ್ತೆ. ಹೀಗಾಗಿ ಆಂಧ್ರ, ತೆಲಂಗಾಣದ ರೈತರು ಭತ್ತದ ಮಾಲಿನೊಂದಿಗೆ ರಾಯಚೂರಿಗೆ ಲಗ್ಗೆ ಇಟ್ಟಿದ್ದಾರೆ.
ಹೌದು..ರಾಯಚೂರು ಜಿಲ್ಲೆಯಲ್ಲಿ ಈ ಬಾರಿ 9.8 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ಇದರಿಂದ ಸುಮಾರು 49.82 ಲಕ್ಷ ಟನ್ ಭತ್ತದ ನಿರೀಕ್ಷೆಯಿದೆ. ಆದ್ರೆ ಭತ್ತ ನಾಟಿ ವೇಳೆ ಮಳೆಯ ಅಭಾವ, ಹವಾಮಾನ ವೈಪರೀತ್ಯ ಹಿನ್ನೆಲೆ ಭತ್ತ ನಾಟಿ ಮಾಡೋದು ಈ ಬಾರಿ ಸ್ವಲ್ಪ ವಿಳಂಬವಾಗ್ತಿದೆ.. ಹೀಗಾಗಿ ಸ್ಥಳೀಯ ರೈತರು ಪೂರ್ಣ ಪ್ರಮಾಣದಲ್ಲಿ ಭತ್ತ ಕಟಾವು ಮಾಡಿ, ಭತ್ತವನ್ನ ಮಾರುಕಟ್ಟೆ ಸಾಗಿಸೋದು ವಿಳಂಬವಾಗುತ್ತೆ.
ಈ ಮಧ್ಯೆ ಆಂದ್ರೆ ತೆಲಂಗಾಣದದಲ್ಲಿ ಒಂದು ಕ್ವಿಂಟಾಲ್ ಭತ್ತಕ್ಕೆ 2 ಸಾವಿರ ಇದೆ.. ಆದ್ರೆ ರಾಯಚೂರಿನಲ್ಲಿ 2,600 ರೂ ಇದೆ. ಹೀಗಾಗಿ ನೆರೆ ರಾಜ್ಯದ ರೈತರು ರಾಯಚೂರಿಗೆ ಭತ್ತ ತರ್ತಿದ್ದಾರೆ. ನಮ್ಮ ಜಿಲ್ಲೆಯ ರೈತರ ಪಾಲಾಗಬೇಕಿದ್ದ ಲಾಭವೀಗ ನೆರೆರಾಜ್ಯದ ರೈತರ ಪಾಲಾಗುತ್ತಿದೆ. ನಿತ್ಯ ನೆರೆ ರಾಜ್ಯಗಳಿಂದ ಪ್ರತಿಚೀಲದಲ್ಲಿ 70 ಕೆಜಿಯುಳ್ಳ 38 ಸಾವಿರ ಚೀಲಗಳಷ್ಟು ಭತ್ತ ರಾಯಚೂರಿಗೆ ಬರ್ತಿದೆ. ಭತ್ತದ ಸ್ಟಾಕ್ ಹೆಚ್ಚಾದಂತೆ ದರ ಕುಸಿಯೋ ಸಾಧ್ಯತೆಯಿದೆ. ಹೀಗಾಗಿ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕುವ ಲಕ್ಷಣಗಳು ಗೋಚರಿಸುತ್ತಿವೆ ಎನ್ನುತ್ತಾರೆ ರೈತ ತಿಮ್ಮಪ್ಪ.
ಅದೆನೇ ಇರಲಿ ಕೂಡಲೇ ಸರ್ಕಾರ ನಮ್ಮ ರೈತರ ಹಿತದೃಷ್ಟಿಯಿಂದ ಬೆಂಬಲ ಬೆಲೆಯಡಿ ಭತ್ತ ಖರೀದಿ ಕೇಂದ್ರ ಸ್ಥಾಪಿಸಬೇಕಿದೆ. ಇಲ್ಲವಾದ್ರೆ, ದರ ಕುಸಿತದಿಂದ ನಮ್ಮ ರೈತರ ಸ್ಥಿತಿ ಅಯೋಮಯವಾಗೋದಂತು ಸತ್ಯ. (ವರದಿ: ಭೀಮೇಶ್ ಪೂಜಾರ್, ಟಿವಿ 9, ರಾಯಚೂರು)
ಇದನ್ನೂ ಓದಿ: ಉತ್ತರ ಕನ್ನಡ: ಅಂಕೋಲದ ನಾಲ್ಕೈದು ಕುಡಿಯುವ ನೀರಿನ ಬಾವಿಗಳಲ್ಲಿ ಡೀಸೆಲ್ ಯುಕ್ತ ನೀರು, ಜನರ ಪರದಾಟ