ವಿಜಯನಗರ ಟ್ರಾಫಿಕ್ ಇನ್ಸ್ಪೆಕ್ಟರ್ ರೌಡಿ ವರ್ತನೆ: ಕೊಟ್ಟ ಏಟಿಗೆ ಬೈಕ್ ಸವಾರ ಆಸ್ಪತ್ರೆ ಪಾಲು
ಬೆಂಗಳೂರಿನ ಟ್ರಾಫಿಕ್ ಪೊಲೀಸರ ಮೇಲೆ ಆಗಾಗ ಲಂಚದ ಆರೋಪಗಳು ಕೇಳಿ ಬರುತ್ತಲೇ ಇವೆ. ಅದರಂತೆಯೇ ಇದೀಗ ಮತ್ತೊಂದು ಆರೋಪ ಕೇಳಿಬಂದಿದ್ದು, ಹಣ ಕೊಟ್ಟಿಲ್ಲ ಎಂದು ಬೈಕ್ ಸವಾರನೊಬ್ಬನ್ನು ಠಾಣೆಗೆ ಎಳೆದೊಯ್ದು ಬೂಟು ಕಾಲಿನಿಂದ ಒದ್ದು ಗಂಭೀರವಾಗಿ ಹಲ್ಲೆ ಮಾಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟಕ್ಕೂ ಆ ಪೊಲೀಸರು ಯಾರು..? ಏಟು ತಿಂದ ಬೈಕ್ ಸವಾರ ಡೀಟೇಲ್ಸ್ ಇಲ್ಲಿದೆ ನೋಡಿ..

ಬೆಂಗಳೂರು, (ಮಾರ್ಚ್ 17): ಬೆಂಗಳೂರಿನ ವಿಜಯನಗರ ಟ್ರಾಫಿಕ್ ಪೊಲೀಸರ (Vijayanagara Traffic Police ) ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ. ಕೋರ್ಟ್ಗೆ ದಂಡ ಕಟ್ಟಿ ಸೀಜ್ ಆಗಿದ್ದ ಬೈಕ್ ಬಿಡಿಸಿಕೊಳ್ಳಲು ಬಂದಾಗ ಸಬ್ ಇನ್ಸ್ಪೆಕ್ಟರ್ ಶಾಂತರಾಮ್ ಹಾಗೂ ಸಿಬ್ಬಂದಿ ಸಿದ್ದಕಿ ಸೇರಿಕೊಂಡು ಬೈಕ್ ಸವಾರ ಈಶ್ವರ್ ಎಂಬುವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದ ಅಸ್ವಸ್ಥರಾಗಿ ಬಿದ್ದ ಈಶ್ವರ್ ಅವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಈ ರೀತಿ ರೌಡಿ ವರ್ತನೆ ಮಾಡಿದ ಪೊಲೀಸರಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಬೈಕ್ ಸವಾರ ಈಶ್ವರ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಘಟನೆ ಸಂಬಂಧ ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಅನಿತಾ ಹದ್ದಣ್ಣನವರು, ಎಸಿಪಿಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಅಸಲಿಗೆ ಆಗಿದ್ದೇನು?
ಕಳೆದ ಎರಡು ದಿನಗಳ ಹಿಂದೆ ಅಂದ್ರೆ ಮಾರ್ಚ್ 14 ರ ರಾತ್ರಿ ವಿಜಯನಗರ ಟ್ರಾಫಿಕ್ ಪೊಲೀಸರು, ಇಲ್ಲಿನ ಜಿಟಿ ಮಾಲ್ ಬಳಿ ಡ್ರಿಂಕ್ ಅಂಡ್ ಡ್ರೈವ್ ಪರಿಶೀಲನೆ ಮಾಡ್ತಿದ್ರು. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಬೈಕ್ ಸವಾರ ಈಶ್ವರ್ ಅನ್ನೋ ಯುವಕ ಕುಡಿದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಕುಡಿದಿರೋದು ಕನ್ಪರ್ಮ್ ಮಾಡಿಕೊಂಡ ಪೊಲೀಸರು, ಕೋರ್ಟ್ ಗೆ ಹೋದ್ರೆ ಹತ್ತು ಸಾವಿರ, ಇಲ್ಲೇ ಆದ್ರೆ ಮೂರು ಸಾವಿರ ಆಯ್ಕೆ ನಿಂದೆ ಎಂದು ಹೇಳಿದ್ದರಂತೆ. ಪೊಲೀಸರ ಡೀಲ್ ಗೆ ಒಪ್ಪಿಕೊಂಡ ಬೈಕ್ ಸವಾರ ಈಶ್ವರ್, ಮೂರು ಸಾವಿರ ಗೂಗಲ್ ಪೇ ಮಾಡೋಕೆ ಮುಂದಾಗಿದ್ದ. ಇದಕ್ಕೆ ಪೊಲೀಸರು, ಇಲ್ಲ ಇಲ್ಲ, ಗೂಗಲ್ ಪೇ ಬೇಡ ಕ್ಯಾಶ್ ಕೊಡು ಎಂದು ಹೇಳಿದ್ದರಂತೆ. ನನ್ನ ಹತ್ತಿರ ಕ್ಯಾಶ್ ಇಲ್ಲ, ಕೋರ್ಟ್ ಗೆ ಫೈನ್ ಕಟ್ಟುತ್ತೇನೆ ಬಿಡಿ ಎಂದಿದ್ದಾನೆ. ಈ ವೇಳೆ ಬೈಕ್ ಸೀಜ್ ಮಾಡಿ ದಂಡದ ರಶೀದಿ ಕೊಟ್ಟ ಈಶ್ವರ್ ನ ಕಳುಹಿಸಿದ್ದಾರೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಪೊಲೀಸ್ರ ಕೊಂಕು ಮಾತು: ನ್ಯಾಯಕ್ಕಾಗಿ ಕಮಿಷನರ್ ಕಚೇರಿ ಮೆಟ್ಟಿಲೇರಿದ
ಇದಾದ ಮಾರನೇ ದಿನ ಕೋರ್ಟ್ ಗೆ ದಂಡದ ಹಣ ಹತ್ತು ಸಾವಿರ ಇತರೆ ಉಲ್ಲಂಘನೆ ಮೂರು ಸಾವಿರ ಸೇರಿ ಹದಿಮೂರು ಸಾವಿರ ದಂಡ ಕಟ್ಟಿ ರಶೀದಿ ತೆಗೆದುಕೊಂಡು ಬೈಕ್ ಬಿಡಿಸಿಕೊಳ್ಳಲು ವಿಜಯ ನಗರ ಟ್ರಾಫಿಕ್ ಪೊಲೀಸ್ ಠಾಣೆ ಬಳಿ ಹೋಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಸಬ್ ಇನ್ಸ್ಪೆಕ್ಟರ್ ಶಾಂತರಾಮ್, ಸಿಬ್ಬಂದಿ ಸಿದ್ದಕಿ ಎನ್ನುವರು ಈಶ್ವರ್ನನ್ನು ಬೈಯ್ಯೋಕೆ ಶುರು ಮಾಡಿದ್ದಾರೆ.
ನಾವ್ ಹೇಳಿದಾಗಲೇ ಮೂರು ಸಾವಿರ ಕೊಟ್ಟಿದ್ರೆ ಹತ್ತು ಸಾವಿರ ಊಳಿತಿತ್ತ ಎಂದು ಅಪಹಾಸ್ಯ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಬಳಿಕ ಬೈಕ್ ಸವಾರ ಈಶ್ವರ್ ಅವರನ್ನ ಠಾಣೆ ಒಳಗೆ ಎಳೆದುಕೊಂಡು ಹೋಗಿ ಪೊಲೀಸರು ಬೂಟು ಕಾಲಿನಿಂದ ಒದ್ದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಏಟು ತಿಂದ ಈಶ್ವರ್ ಏಕಾಏಕಿ ಕುಸಿದುಬಿದ್ದು ಠಾಣೆಯಲ್ಲೇ ಪ್ರಜ್ಞೆ ಕಳೆದುಕೊಂಡಿದ್ದಾನೆ. ತಕ್ಷಣ ಪೊಲೀಸರು ಆಟೋ ಕರೆಸಿ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆಗ ಎಲ್ಲ ಘಟನೆ ನೋಡುತ್ತಿದ್ದ ಜನರು, ಪೊಲೀಸರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತಗೊಂಡಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸಿದ್ರೆ ಕೇಸ್ ಹಾಕುವುದು ಸಾಮಾನ್ಯ ಆದ್ರೆ, ರಕ್ಷಕರಾದ ಪೋಲಿಸರೇ ಈ ರೀತಿ ರೌಡಿಗಳಂತೆ ವರ್ತಿಸಿರುವುದು ವಿಪರ್ಯಾಸವೇ ಸರಿ. ಇನ್ನು ಈ ಪರಿ ಹಿಂಸೆ ನೀಡಿದ್ದು ಸರಿಯೇ..? ಹಿರಿಯ ಅಧಿಕಾರಿಗಳ ನಿಸ್ಪಕ್ಷಪಾತ ತನಿಖೆಯಿಂದಷ್ಟೇ ಅಸಲಿಯತ್ತು ಹೊರಬರಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:37 pm, Mon, 17 March 25