ಬನ್ನೇರುಘಟ್ಟ ಉದ್ಯಾನವನದಲ್ಲಿ 3 ತಿಂಗಳಲ್ಲಿ ಹುಲಿ, ಚಿರತೆ ಸೇರಿ 20ಕ್ಕೂ ಅಧಿಕ ವನ್ಯಜೀವಿಗಳು ಸಾವು
ಅದು ಎರಡು ಸಾವಿರಕ್ಕೂ ಅಧಿಕ ಅಪರೂಪದ ವನ್ಯಜೀವಿಗಳ ಆಶ್ರಯ ತಾಣ. ಆದರೆ ಇತ್ತೀಚೆಗೆ ಅಲ್ಲಿ ಸರಣಿಯಾಗಿ ಪ್ರಾಣಿಗಳು ಸಾವನ್ನಪ್ಪುತ್ತಿವೆ. ಇದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಸಲಿ ಕಥೆ. ಹಾಗಿದ್ದರೆ ಈ ಜೈವಿಕ ಉದ್ಯಾನವನದಲ್ಲಿ ಇಂತಹ ಅಯೋಮಯ ಸ್ಥಿತಿಗೆ ಕಾರಣ ಎಂಬ ನಿಮ್ಮ ಪ್ರಶ್ನೆ ಉತ್ತರ ಇಲ್ಲಿದೆ.

ಆನೇಕಲ್, ಮಾರ್ಚ್ 17: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerghatta National Park) ಯಾರಿಗೆ ತಾನೇ ಗೊತ್ತಿಲ್ಲ. ಪ್ರತಿದಿನ ಸಾವಿರಾರು ಮಂದಿ ಪ್ರವಾಸಿಗರು (Tourists) ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಜೈವಿಕ ಉದ್ಯಾನವನದ ಆಡಳಿತ ಹಳಿ ತಪ್ಪಿದೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಪ್ರಮುಖ ಕಾರಣ ಎರಡು ಸಾವಿರಕ್ಕೂ ಅಧಿಕ ಅಪರೂಪದ ವನ್ಯಜೀವಿಗಳ ಆಶ್ರಯ ತಾಣವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿರುವ ಪ್ರಾಣಿಗಳ ಸರಣಿ ಸಾವು.
ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 6 ಹುಲಿ ಮರಿಗಳ ಜನನ
ಕಳೆದ ಮೂರು ತಿಂಗಳಲ್ಲಿ ಹುಲಿ, ಚಿರತೆ, ಕರಡಿ ಸೇರಿದಂತೆ 20 ಕ್ಕೂ ಅಧಿಕ ವನ್ಯಜೀವಿಗಳು ಸಾವನ್ನಪ್ಪಿವೆ. ಸೂಕ್ತ ಪಾಲನೆ ಪೋಷಣೆ ಇಲ್ಲದೆ ಪ್ರಾಣಿಗಳು ದಾರುಣವಾಗಿ ಅಸುನೀಗುತ್ತಿವೆ ಅನ್ನೋದು ಪ್ರಾಣಿಪ್ರಿಯರ ಆರೋಪ. ಎರಡು ಸಾವಿರ ಪ್ರಾಣಿಗಳ ಪೋಷಣೆಗೆ ಕನಿಷ್ಟ ನಾಲ್ವರು ನುರಿತ ವೈದ್ಯರು ಬೇಕು. ಆದರೆ ಇಲ್ಲಿರೋದು ಕೇವಲ ಒಬ್ಬ ವೈದ್ಯರು ಮಾತ್ರ. ಈ ಒಬ್ಬ ವೈದ್ಯರಿಂದ ಎಲ್ಲಾ ಪ್ರಾಣಿಗಳನ್ನು ಪಾಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಇರುವ ವೈದ್ಯರಿಂದ ಪ್ರಾಣಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯದೆ ಹುಲಿ, ಚಿರತೆ ಮತ್ತು ಕರಡಿ ಸಾವನ್ನಪ್ಪಿದೆ ಅನ್ನೋದು ಪ್ರಾಣಿಪ್ರಿಯರಾದ ಮಂಜುನಾಥ್ ಅವರ ಆರೋಪವಾಗಿದೆ.
ಕೆಲಸ ನಿರ್ವಹಿಸಲು ಅಧಿಕಾರಿ ವರ್ಗ ಹಿಂದೇಟು
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕೆಲಸ ನಿರ್ವಹಿಸಲು ಅಧಿಕಾರಿ ವರ್ಗ ಹಿಂದೇಟು ಹಾಕುತ್ತಿದೆ. ಈಗಾಗಲೇ ಓರ್ವ ಡೆಪ್ಯುಟಿ ಡೈರೆಕ್ಟರ್, ಇಬ್ಬರು ಆರ್.ಎಫ್.ಓ, ಇಬ್ಬರು ವೈದ್ಯರು, ಹತ್ತು ಗಾರ್ಡ್, ಹತ್ತು ಮಂದಿ ವಾಚರ್ಗಳ ಹುದ್ದೆ ಕಳೆದ ಒಂದು ವರ್ಷದಿಂದ ಖಾಲಿ ಬಿದ್ದಿವೆ. ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಆಡಳಿತ ವೈಖರಿಗೆ ಬೇಸತ್ತು ಅಧಿಕಾರಿಗಳು ಮತ್ತು ಸಿಬ್ಬಂದಿ ತಾವಾಗಿಯೇ ವರ್ಗ ಮಾಡಿಸಿಕೊಂಡು ಹೋಗುತ್ತಿದ್ದಾರೆ.
ಉದ್ಯಾನವನದ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸುವಲ್ಲಿ ಹಿರಿಯ ಅಧಿಕಾರಿಗಳು ವಿಫಲವಾಗಿದ್ದಾರೆ. ಅಲ್ಲದೆ ಉದ್ಯಾನವನದಲ್ಲಿ ಅನಗತ್ಯ ಮತ್ತು ಅವೈಜ್ಞಾನಿಕ ಕಾಮಗಾರಿಗಳದ್ದೇ ಕಾರುಬಾರು ಜೋರಾಗಿದ್ದು, ಪ್ರಾಣಿಗಳ ಪಾಲನೆಗಿಂತ ಕಾಮಗಾರಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುತ್ತಿದೆಯಂತೆ. ಸದ್ಯ ಜೈವಿಕ ಉದ್ಯಾನವನದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕೊರತೆ ಇದೆ ಅನ್ನೋದನ್ನು ಖುದ್ದು ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಮೈಸೂರು ಮಹಾರಾಜರಿಂದ ರಕ್ಷಿಸಲ್ಪಟ್ಟಿದ್ದ ಹೆಣ್ಣು ಚಿರತೆ ದಿಢೀರ್ ಸಾವು
ಒಟ್ಟಿನಲ್ಲಿ ಈ ಹಿಂದೆ ಆಡಳಿತ ನಡೆಸಿದ ಅಧಿಕಾರಿಗಳು ಪ್ರಾಣಿಗಳ ಪಾಲನೆ, ಪೋಷಣೆ, ಸಿಬ್ಬಂದಿ ಯೋಗಕ್ಷೇಮ ಜೊತೆಗೆ ಪ್ರವಾಸಿಗರ ಸುರಕ್ಷತೆ ಮತ್ತು ಮೂಲಭೂತ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಆದರೆ ಈಗ ಪ್ರಾಣಿಗಳ ಮೂಕ ರೋದನೆಗೆ ಸ್ಪಂದನೆ ಇಲ್ಲವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.