ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 6 ಹುಲಿ ಮರಿಗಳ ಜನನ
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರಾಣಿಗಳ ಸರಣಿ ಸಾವಿನ ಬಳಿಕ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೂತನ ಅತಿಥಿಗಳ ಆಗಮನವಾಗಿದ್ದು, ಪ್ರಾಣಿ ಪ್ರಿಯರು ಸೇರಿದಂತೆ ಉದ್ಯಾನವನದ ಸಿಬ್ಬಂದಿ ಸಂತಸಗೊಂಡಿದ್ದಾರೆ. ಅಷ್ಟಕ್ಕೂ ಯಾರು ಆ ನೂತನ ಅತಿಥಿಗಳು? ಈ ಸುದ್ದಿ ಓದಿ.
ಆನೆಕಲ್, ಮಾರ್ಚ್ 10: ಅಪರೂಪದ ವನ್ಯಜೀವಿಗಳ ಅಶ್ರಯ ತಾಣವಾಗಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ (Bannerughatta Biological Park) ಮತ್ತೆ ಜೀವ ಕಳೆ ಬಂದಿದೆ. ಪ್ರಾಣಿಗಳ ಸರಣಿ ಸಾವಿನಿಂದ ಸೂತಕನ ಮನೆಯಾಗಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿ (Tiger) ಮರಿಗಳ ಜನನ ಸಂತಸಕ್ಕೆ ಕಾರಣವಾಗಿದೆ. ಹಿಮಾ ಮತ್ತು ಆರುಣ್ಯ ಹೆಣ್ಣು ಹುಲಿಗಳು ಆರು ಮರಿಗಳಿಗೆ ಜನ್ಮ ನೀಡಿವೆ. ತಮಿಳುನಾಡಿನ ಅಣ್ಣಾ ಮೃಗಾಲಯದಿಂದ ತಂದಿದ್ದ ಬಿಳಿ ಹುಲಿ ವೀರ್ ಮತ್ತು ಅರುಣ್ಯಾ ಹೆಣ್ಣು ಹುಲಿ ಜೋಡಿಗೆ ಎರಡು ಮರಿಗಳ ಜನನವಾಗಿದ್ದು, ತಾಯಿ ಮತ್ತು ಮರಿಗಳು ಆರೋಗ್ಯವಾಗಿವೆ. ಗಂಡು ಹುಲಿ ವೀರ್ನಿಂದ ತಾಯಿ ಮತ್ತು ಮರಿಗಳನ್ನು ಪ್ರತ್ಯೇಕಿಸಿ ಆರೈಕೆ ಮಾಡಲಾಗುತ್ತಿದೆ.
ಇನ್ನು, ಮತ್ತೊಂದು ಹೆಣ್ಣು ಹುಲಿ ಹಿಮಾ ಇದೇ ಮೊದಲ ಬಾರಿಗೆ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಗಂಡು ಹುಲಿ ಸಂಜಯ್ ಮತ್ತು ಹಿಮಾ ಜೋಡಿಯಾಗಿದ್ದು, 2024 ರಲ್ಲಿಯೂ ಸಂಜಯ್ ಮತ್ತು ಹಿಮಾ ಜೋಡಿಗೆ ಎರಡು ಮರಿಗಳು ಜನಿಸಿದ್ದವು. ಆದರೆ, ಈ ಬಾರಿ ಹಿಮಾ ಮರಿಗಳ ಬಳಿ ಸುಳಿಯುತ್ತಿಲ್ಲ. ಹೀಗಾಗಿ, ಮರಿಗಳನ್ನು ಉದ್ಯಾನವನದ ಆಸ್ಪತ್ರೆ ಸಿಬ್ಬಂದಿ ಮೇಕೆ ಹಾಲು ನೀಡಿ ಪೋಷಣೆ ಮಾಡುತ್ತಿದ್ದು, ನಾಲ್ಕೂ ಮರಿಗಳು ಆರೋಗ್ಯವಾಗಿವೆ. ಈ ವರ್ಷ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಒಟ್ಟು 8 ಹುಲಿ ಮರಿಗಳ ಜನನವಾಗಿದೆ.
ಒಟ್ಟಿನಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸೂತಕದ ನಡುವೆ ಹುಲಿ ಮರಿಗಳ ಜನನವಾಗಿದ್ದು, ಒಟ್ಟು ಹುಲಿಗಳ ಸಂಖ್ಯೆ 27 ಕ್ಕೆ ಏರಿಕೆಯಾಗಿದೆ. ಉದ್ಯಾನವನದ ಸಿಬ್ಬಂದಿ ಮುತುವರ್ಜಿಯಿಂದ ಹುಲಿ ಮರಿಗಳ ಪಾಲನೆ ಮಾಡಬೇಕಿದೆ.