
ಬೆಂಗಳೂರು, ಏಪ್ರಿಲ್ 24: ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪಿನ ನಡುವೆ ನಡೆದ ಜಗಳವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ (Bengaluru) ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಾರಿವಾಳ ಕಳ್ಳತನದ ವಿಚಾರವಾಗಿ ಉಂಟಾದ ಕಿರಿಕ್‌ನಲ್ಲಿ ಆಟೋ ಚಾಲಕ ಮಲ್ಲಿಕಾರ್ಜುನ್ (24) ಎಂಬಾತ ಕೊಲೆಯಾಗಿದ್ದಾರೆ.
ಲಗ್ಗೆರೆಯ ನಿವಾಸಿಗಳಾದ ಶಂಕರ್ ರಾವ್ ಮತ್ತು ಅನ್ನಪೂರ್ಣ ದಂಪತಿಯ ಪುತ್ರ ಮಲ್ಲಿಕಾರ್ಜುನ್ ಕಳೆದ ಸೋಮವಾರ ರಾತ್ರಿ ಕೊಲೆಯಾದ ದುರ್ದೈವಿ. ಸೋಮವಾರ ಸಂಜೆ ಮಲ್ಲಿಕಾರ್ಜುನ್ ಸ್ನೇಹಿತ ಪ್ರಶಾಂತ್ ಎಂಬಾತ ಸಾಕಿದ್ದ ಪಾರಿವಾಳವನ್ನು ಅದೇ ಏರಿಯಾದ ಸುರೇಂದ್ರ, ದರ್ಶನ್ ಹಾಗೂ ಮಹೇಂದ್ರ ಎಂಬುವವರ ಗುಂಪು ಕಳ್ಳತನ ಮಾಡಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಎರಡೂ ಗುಂಪುಗಳ ನಡುವೆ ಜಗಳ ಆರಂಭವಾಗಿತ್ತು.
ಈ ವೇಳೆ ಸ್ನೇಹಿತ ಪ್ರಶಾಂತ್ ಕರೆ ಮಾಡಿದ್ದಾನೆಂದು ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಮಲ್ಲಿಕಾರ್ಜುನ್ ಧಾವಿಸಿದ್ದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಆರೋಪಿಗಳ ಗುಂಪು ಮಲ್ಲಿಕಾರ್ಜುನ್ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಬೆನ್ನು ಮತ್ತು ದೇಹದ ಹಲವು ಭಾಗಗಳಿಗೆ ಚಾಕುವಿನಿಂದ ಇರಿದ ಪರಿಣಾಮ ಮಲ್ಲಿಕಾರ್ಜುನ್ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದರು.
ತೀವ್ರವಾಗಿ ಗಾಯಗೊಂಡಿದ್ದ ಮಲ್ಲಿಕಾರ್ಜುನ್‌ರನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು ಆರು ಬಾಟಲ್ ರಕ್ತ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕೇವಲ ಒಂದು ವಾರದ ಹಿಂದಷ್ಟೇ ಪೋಷಕರು ಮಗನಿಗೆ ಹೊಸ ಆಟೋ ಕೊಡಿಸಿದ್ದರು. ಈಗ ಮಗನ ಶವದ ಮುಂದೆ ಪೋಷಕರು ಕಣ್ಣೀರು ಹಾಕುತ್ತಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಜಗೋಪಾಲನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸುರೇಂದ್ರ, ದರ್ಶನ್ ಮತ್ತು ಮಹೇಂದ್ರ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಉದ್ಯಮಿ ಜತೆ ಡೇಟಿಂಗ್, ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್ಮೇಲ್ ಆರೋಪ: ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿರುದ್ಧ ದೂರು
‘ಪಾರಿವಾಳದ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ, ಸದ್ಯ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ’ ಎಂದು ವಾಯುವ್ಯ ವಿಭಾಗದ ಡಿಸಿಪಿ ಡಿ.ಎಲ್. ನಾಗೇಶ್ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ