
ಬೆಂಗಳೂರು, ನವೆಂಬರ್ 15: ಕಬ್ಬನ್ ಪಾರ್ಕ್‌ನ (Cubbon park) ‘ಡಾಗ್ ಪಾರ್ಕ್ನಲ್ಲಿ’ ನಡೆಯುತ್ತಿರುವ ಚಟುವಟಿಕೆಗಳ ವಿರುದ್ಧ ಸ್ಥಳೀಯ ವಾಕರ್ಸ್ ಹಾಗೂ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಾಗ್ ಪಾರ್ಕ್ ಅನ್ನು ಹೆಚ್ಚಾಗಿ ವಾಣಿಜ್ಯ ಚಟುವಟಿಕೆಗಳಲ್ಲಿ ಬಳಸಲಾಗುತ್ತಿದ್ದು, ಸಾಕುಪ್ರಾಣಿ ಮಾಲೀಕರ ನಿರ್ಲಕ್ಷ್ಯದಿಂದ ಪಾರ್ಕ್‌ನಲ್ಲಿನ ಹಿರಿಯರು ಮತ್ತು ಮಕ್ಕಳಿಗೆ ಅಪಾಯ ಉಂಟಾಗಿದೆ ಎಂದು ಸಿಪಿಡಬ್ಲ್ಯೂಎ(Cubbon Park Walkers Association) ಅಧ್ಯಕ್ಷ ಎಸ್. ಉಮೇಶ್ ಕುಮಾರ್ ತಿಳಿಸಿದ್ದಾರೆ.
ಸಾಕು ನಾಯಿಗಳನ್ನು ಲೀಶ್ ಹಾಕದೆ ಉದ್ಯಾನವನದೆಲ್ಲೆಡೆ ಬಿಡಲಾಗುತ್ತಿದೆ. ಮಾರ್ಗಗಳು ನಾಯಿಗಳ ಮಲಮೂತ್ರದಿಂದ ಕೂಡಿದ್ದು, ಅದನ್ನು ಮಾಲೀಕರು ಸ್ವಚ್ಛಗೊಳಿಸಲು ಮುಂದೆ ಬರುತ್ತಿಲ್ಲ. ಈ ಕುರಿತು ಮಾಲೀಕರನ್ನು ಪ್ರಶ್ನಿಸಿದಲ್ಲಿ ಅವರು ದುರಹಂಕಾರದಿಂದ ಪ್ರತಿಕ್ರಿಯಿಸುತ್ತಾರೆಯೇ ಹೊರತು, ಸ್ವಚ್ಛತೆಗೆ ಮುಂದಾಗುವುದಿಲ್ಲ. ಪ್ರತಿಬಾರಿಯೂ ತೋಟಗಾರಿಕೆ ಸಿಬ್ಬಂದಿಯೇ ಸ್ವಚ್ಛತೆ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯನ್ನು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ಡಿಡಿ ಕುಸುಮಾ, ಜೆಡಿ ಜಗದೀಶ್ ಹಾಗೂ ಪ್ರಧಾನ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ಅವರಿಗೆ ಹಲವು ಬಾರಿ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಉಮೇಶ್ ದೂರಿದ್ದಾರೆ.
ಕಬ್ಬನ್ ಪಾರ್ಕ್‌ನಲ್ಲಿ ವಾಣಿಜ್ಯ ಚಟುವಟಿಕೆ ಅನಧಿಕೃತವಾಗಿದ್ದರೂ ‘ಡಾಗ್ ಪಾರ್ಕ್’ ಹೆಸರಿನಲ್ಲಿ ಈ ರೀತಿಯ ಚಟುವಟಿಕೆ ನಡಸಲಾಗುತ್ತಿದೆ. ಇದೇ ಮಾದರಿಯಲ್ಲಿ ಲಾಲ್‌ಬಾಗ್‌ನಲ್ಲಿ ಡಾಗ್ ಪಾರ್ಕ್ ಏಕೆ ತೆರೆಯಲಾಗುವುದಿಲ್ಲ ಎಂಬ ಪ್ರಶ್ನೆಯನ್ನೂ ಸಂಸ್ಥೆ ಎತ್ತಿದೆ. ‘ನಾವು ಪ್ರಾಣಿ ವಿರೋಧಿಗಳು ಅಲ್ಲ. ನಾನೇ ಪ್ರತಿದಿನ 15–20 ಬೀದಿ ನಾಯಿಗಳಿಗೆ ಆಹಾರ ನೀಡುತ್ತೇನೆ ಹಾಗೂ 10 ಸಾಕು ಬೆಕ್ಕುಗಳನ್ನು ಸಾಕುತ್ತಿದ್ದೇನೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಉದ್ಯಾನವನದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಲು ಮೀಸಲಾದ ಪ್ರತ್ಯೇಕ ಸ್ಥಳ ಇರಬೇಕು, ಅದನ್ನು ನಾವು ಬೆಂಬಲಿಸುತ್ತೇವೆ’ ಎಂದು ಉಮೇಶ್ ಕುಮಾರ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಡಾಗ್ ಪಾರ್ಕ್ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಸಿಪಿಡಬ್ಲ್ಯೂಎ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.