
ಬೆಂಗಳೂರು, ಡಿಸೆಂಬರ್ 27: ಬೆಂಗಳೂರಿನಲ್ಲಿ (Bengaluru) ಕಸ್ಟಮ್ಸ್ ಅಧಿಕಾರಿಗಳಂತೆ ನಟಿಸಿ ಜನರನ್ನು ವಂಚಿಸುವ ವಂಚನಾ ಜಾಲ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆ ಸಾರ್ವಜನಿಕರಿಗೆ ಹೈ ಅಲರ್ಟ್ ನೀಡಿದೆ. ವಂಚಕರ ಜಾಲದಿಂದ ತಪ್ಪಿಸಿಕೊಳ್ಳಲು ಜಾಗರೂಕರಾಗಿರುವುದರ ಜೊತೆಗೆ ವಂಚನೆಗೊಳಗಾದ ಸಮದರ್ಭದಲ್ಲಿ ಸೈಬರ್ ಕ್ರೈಂ ಹೆಲ್ಪ್‌ಲೈನ್ಗೆ ಕರೆ ಮಾಡುವಂತೆ ಕಸ್ಟಮ್ಸ್ ಇಲಾಖೆ ಎಚ್ಚರಿಸಿದೆ.
ಕಸ್ಟಮ್ಸ್ ಅಧಿಕಾರಿಗಳೆಂದು ಹೇಳಿಕೊಂಡು, ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ಕಸ್ಟಮ್ಸ್‌ನಲ್ಲಿ ತಡೆಹಿಡಿದಿದ್ದೇವೆ ಎಂದು ಸುಳ್ಳು ಹೇಳಿ, ಸಮಸ್ಯೆ ಬಗೆಹರಿಸಲು ಹಣ ಪಾವತಿಸಬೇಕು ಎಂದು ಬೆದರಿಸಿ ಹಣ ದೋಚಲಾಗುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ವಂಚಕರು ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರನ್ನು ಗುರಿಯಾಗಿಸಿಕೊಂಡು, ಫೋನ್ ಕರೆ, ಸಾಮಾಜಿಕ ಜಾಲತಾಣ ಮತ್ತು ಮೆಸೇಜಿಂಗ್ ಆ್ಯಪ್‌ಗಳ ಮೂಲಕ ಭಯ ಸೃಷ್ಟಿಸಿ ವಂಚನೆ ಮಾಡುತ್ತಿದ್ದಾರೆ. ಪ್ರಯಾಣಿಕನೊಬ್ಬ ಕಸ್ಟಮ್ಸ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ, ತಕ್ಷಣ ದಂಡ ಅಥವಾ ಸುಂಕ ಪಾವತಿಸದಿದ್ದರೆ ಜೈಲು ಶಿಕ್ಷೆ ಅಥವಾ ಕಿರುಕುಳ ಎದುರಾಗಲಿದೆ ಎಂದು ಬೆದರಿಸುತ್ತಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಸ್ಟಮ್ಸ್ ಕಮಿಷನರ್, ಕಸ್ಟಮ್ಸ್ ಅಧಿಕಾರಿಗಳು ಎಂದಿಗೂ ಫೋನ್, ವಾಟ್ಸಾಪ್ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಹಣ ಕೇಳುವುದಿಲ್ಲ. ವೈಯಕ್ತಿಕ ಬ್ಯಾಂಕ್ ಖಾತೆ, ಯುಪಿಐ ಅಥವಾ ಡಿಜಿಟಲ್ ವಾಲೆಟ್‌ಗೆ ಹಣ ವರ್ಗಾಯಿಸಲು ಹೇಳುವುದಿಲ್ಲ. ಎಲ್ಲಾ ಸರ್ಕಾರಿ ಪಾವತಿಗಳು ಅಧಿಕೃತ ಕೌಂಟರ್ ಅಥವಾ ಆನ್‌ಲೈನ್ ಪೋರ್ಟಲ್ ಮೂಲಕ ರಸೀದಿಯೊಂದಿಗೆ ಮಾತ್ರ ನಡೆಯುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.
ವಂಚಕರ ಜಾಲವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಧಿಕಾರಿಗಳು, ಮೊದಲಿಗೆ ಆನ್‌ಲೈನ್‌ನಲ್ಲಿ ಸಂಪರ್ಕಿಸಿ ನಂತರ ಸಂಬಂಧಿಕ ಅಥವಾ ಸ್ನೇಹಿತ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ ಎಂದು ಹೇಳುತ್ತಾರೆ. ಹಣ ವರ್ಗಾವಣೆ ಮಾಡಿದ ತಕ್ಷಣ ಸಂಪರ್ಕ ಕಡಿತಗೊಳಿಸುತ್ತಾರೆ ಎಂದು ವಿವರಿಸಿದ್ದಾರೆ.
ಸುಂಕ ಪಾವತಿ ವಿಚಾರದಲ್ಲಿ ಯಾವುದೇ ಪ್ರಯಾಣಿಕನಿಗೂ ಕಿರುಕುಳ ನೀಡುವುದಿಲ್ಲವೆಂದು ಹೇಳಿರುವ ಕಸ್ಟಮ್ಸ್ ಇಲಾಖೆ, ಎಲ್ಲಾ ಪ್ರಕ್ರಿಯೆಗಳು ಸಿಸಿಟಿವಿ ಮೇಲ್ವಿಚಾರಣೆಯಲ್ಲೇ ನಡೆಯುತ್ತವೆ ಎಂದು ತಿಳಿಸಿದೆ. ಇಂತಹ ವಂಚನೆಯ ಕರೆಗಳು ಬಂದಲ್ಲಿ commrapacc-cusblr@gov.in ಗೆ ಇಮೇಲ್ ಮಾಡುವಂತೆ ಅಥವಾ ಸೈಬರ್ ಕ್ರೈಂ ಹೆಲ್ಪ್‌ಲೈನ್ 1930 ಗೆ ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ವಂಚಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.