
ಬೆಂಗಳೂರು, ನವೆಂಬರ್ 14: ಬೆಂಗಳೂರಿನಲ್ಲಿ ಇ-ಖಾತಾ ಅಕ್ರಮ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ಇ-ಖಾತಾ ವಿತರಿಸಿದ ಆರೋಪದ ಮೇಲೆ ಸಹಾಯಕ ಆಯುಕ್ತ ಬಸವರಾಜ್ ಎನ್. ಮಾಘಿ ಸೇರಿದಂತೆ ಒಟ್ಟು 31 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಜಿಬಿಎ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ನೀಡಿದ ದೂರಿನ ಆಧಾರದ ಮೇಲೆ ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬ್ಯಾಂಕ್‌ಗಳಿಗೆ ಮಾತ್ರ ಸೀಮಿತವಾಗಿದ್ದ ವಿಶೇಷ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು ಅನರ್ಹ ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸಾಮಾನ್ಯವಾಗಿ SARFAESI ಕಾಯ್ದೆಯಡಿ ಬ್ಯಾಂಕ್‌ಗಳು ಸಾಲ ಮರುಪಾವತಿಯಾಗದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡು ಹರಾಜು ಹಾಕುವ ಪ್ರಕ್ರಿಯೆಯಲ್ಲಿ ಇ-ಖಾತಾ ಪಡೆಯಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಈ ಸೌಲಭ್ಯವನ್ನು ಕೆಲವು ಅಧಿಕಾರಿಗಳು ಕಟ್ಟಡ ನಿರ್ಮಾಣಕಾರರು ಮತ್ತು ಖಾಸಗಿ ಅರ್ಜಿದಾರರೊಂದಿಗೆ ಸೇರಿಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪವಿದೆ.
ನಿಯಮದ ಪ್ರಕಾರ ಸಲ್ಲಿಸಬೇಕಾದ SARFAESI ಆದೇಶ ಅಥವಾ ಮಾರಾಟ ಪ್ರಮಾಣಪತ್ರದ ಬದಲಿಗೆ ಸಾಮಾನ್ಯ ಮಾರಾಟ ಪತ್ರ, ಜಂಟಿ ಅಭಿವೃದ್ಧಿ ಒಪ್ಪಂದ ಸೇರಿದಂತೆ ಇತರೆ ದಾಖಲೆಗಳನ್ನು ಅಪ್‌ಲೋಡ್ ಮಾಡಲಾಗಿದೆ. ಇವುಗಳ ಆಧಾರದ ಮೇಲೆ ಅರ್ಹತೆ ಇಲ್ಲದ ನಿವೇಶನ ಹಾಗೂ ಕಟ್ಟಡಗಳಿಗೆ ಇ-ಖಾತಾ ಮಂಜೂರು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೆ.ಆರ್. ಪುರಂ ವಿಭಾಗದ ಸಹಾಯಕ ಆಯುಕ್ತ ಹಾಗೂ ಪ್ರಭಾರ ಕಂದಾಯ ಅಧಿಕಾರಿ ಬಸವರಾಜ್ ಮಾಘಿ ವಿರುದ್ಧ ಪ್ರಮುಖ ಆರೋಪ ಕೇಳಿಬಂದಿದೆ. ಜನವರಿ 29ರಿಂದ ಜೂನ್ 19, 2026ರವರೆಗೆ ಅವರ ಲಾಗಿನ್ ಮೂಲಕ ಹೊರಮಾವು ಮತ್ತು ಕೆ.ಆರ್. ಪುರಂ ಪ್ರದೇಶಗಳಲ್ಲಿ 98 ಅನರ್ಹ ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ ಎನ್ನಲಾಗಿದೆ. ಈ ಅಕ್ರಮದಲ್ಲಿ ಒಟ್ಟು 31 ಮಂದಿಯ ಹೆಸರು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.
ಈ ಪ್ರಕರಣದಲ್ಲಿ ಕ್ರಿಮಿನಲ್ ಸಂಚು, ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ಅವುಗಳನ್ನು ನೈಜ ದಾಖಲೆಗಳಂತೆ ಬಳಕೆ ಮಾಡಿದ ಆರೋಪಗಳ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಈ ಹಿಂದೆ ಕೆಂಗೇರಿ ವಿಭಾಗದ ಸಹಾಯಕ ಆಯುಕ್ತೆ ಲೋಕಮಾತಾ ಡಿ.ಎಸ್. ಮತ್ತು ಬಸವರಾಜ್ ಮಾಘಿ ಅವರನ್ನು ಅಮಾನತುಗೊಳಿಸಲು ಶಿಫಾರಸು ಮಾಡಲಾಗಿತ್ತು. ಇದೀಗ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಇ-ಖಾತಾ ಅಕ್ರಮದಲ್ಲಿ ಇನ್ನೂ ಯಾರ‍್ಯಾರ ಕೈವಾಡವಿದೆ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ