ಒಂಟಿ ವೃದ್ಧೆಯ ಕೊಲೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಸಹಾಯ ಮಾಡಿದ ‘ಕಿಂಗ್ ಕೊಹ್ಲಿ’

|

Updated on: Jun 04, 2023 | 10:44 AM

82 ವರ್ಷದ ವೃದ್ಧೆಯ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಆಟೋರಿಕ್ಷಾದ ಹಿಂಬದಿಯಲ್ಲಿ ಬರೆದಿದ್ದ ಕಿಂಗ್ ಕೊಹ್ಲಿ ಎಂಬ ನಾಮಫಲಕ ಸಹಾಯ ಮಾಡಿದೆ. ಅದರಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಒಂಟಿ ವೃದ್ಧೆಯ ಕೊಲೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಸಹಾಯ ಮಾಡಿದ ಕಿಂಗ್ ಕೊಹ್ಲಿ
ಬೆಂಗಳೂರಿನಲ್ಲಿ ನಡೆದ ಒಂಟಿ ವೃದ್ಧೆಯ ಕೊಲೆ ಪ್ರಕರಣದ ಆರೋಪಿಗಳು ಅರೆಸ್ಟ್
Follow us on

ಬೆಂಗಳೂರು: ನಗರದ ಮಹಾಲಕ್ಷ್ಮಿಪುರಂನಲ್ಲಿ ನಡೆದಿದ್ದ 82 ವರ್ಷದ ವೃದ್ಧೆಯ ಕೊಲೆ (Murder) ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಆಟೋರಿಕ್ಷಾದ ಹಿಂಬದಿಯಲ್ಲಿ ಬರೆದಿದ್ದ ಕಿಂಗ್ ಕೊಹ್ಲಿ ಎಂಬ ನಾಮಫಲಕ ಸಹಾಯ ಮಾಡಿದೆ. ಅದರಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಲಗ್ಗೆರೆಯ ಸಿದ್ದರಾಜು ಸಿ.ಎಂ (34) ಮತ್ತು ಪ್ಲಂಬರ್ ಆರ್.ಅಶೋಕ್ (40) ಮತ್ತು ಕಾಮಾಕ್ಷಿಪಾಳ್ಯದ ಸಿ.ಅಂಜನಮೂರ್ತಿ (33) ಎಂಬ ಆರೋಪಿಗಳನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾಲಕ್ಷ್ಮಿಪುರಂ ನಿವಾಸಿ ಕಮಲಾ ಎನ್ ರಾವ್ (ಕಮಲಮ್ಮ) ಅವರ ಶವ ಕೆಲವು ದಿನಗಳ ಹಿಂದೆ ತಮ್ಮ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದರು. ಪರಿಶೀಲನೆ ವೇಳೆ ಆಕೆಯ ಕೈ ಮತ್ತು ಕಾಲುಗಳನ್ನು ಕಟ್ಟಿ ಮತ್ತು ಬಾಯಿಯನ್ನು ಟೇಪ್‌ನಿಂದ ಮುಚ್ಚಲಾಗಿತ್ತು. ಮೇ 27 ರಂದು ಕೊಲೆ ನಡೆದಿದ್ದು, ನಂತರ ವಿಷಯ ಬೆಳಕಿಗೆ ಬಂದಿದ್ದರೂ ಪೊಲೀಸರು ಶಂಕಿಸಿದ್ದರು.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಪಿ (ಉತ್ತರ) ಶಿವಪ್ರಕಾಶ್ ದೇವರಾಜು, ಸಾಲ ತೀರಿಸಲು ಆರೋಪಿಗಳು ಸಂಚು ರೂಪಿಸಿ ವೃದ್ಧೆಯನ್ನು ಕೊಂದಿದ್ದಾರೆ ಎಂದರು. ಆರೋಪಿ ಅಶೋಕ್, ಕಮಲಾ ಅವರ ಮನೆಗೆ ಪ್ಲಂಬಿಂಗ್ ಕೆಲಸಕ್ಕಾಗಿ ಭೇಟಿ ನೀಡಿದ್ದ. ಈ ವೇಳೆ ಒಬ್ಬಂಟಿಯಾಗಿ ವಾಸಿಸುತ್ತಿರುವುದನ್ನು ಗಮನಿಸಿದ ಆತ ಕಮಲಮ್ಮ ಅವರ ಪತಿ ಕಳೆದ ಅಕ್ಟೋಬರ್‌ನಲ್ಲಿ ನಿಧನರಾಗಿರುವುದನ್ನೂ ತಿಳಿದುಕೊಂಡ.

ಇದನ್ನೂ ಓದಿ: ಹಾವೇರಿ: ಪ್ರೇಯಸಿ ಸಹೋದರರಿಂದ ಟಾರ್ಚರ್, ಅಣ್ಣನ ಲವ್ ಸ್ಟೋರಿಗೆ ಬಲಿಯಾದ ತಮ್ಮ

ಈ ವಿಚಾರವನ್ನು ಕೆಲ ದಿನಗಳ ಹಿಂದೆ ಬಾರ್‌ನಲ್ಲಿ ತನ್ನ ಸಹಚರರಿಗೆ ಬಹಿರಂಗಪಡಿಸಿದ್ದಾನೆ. ಆಗ ಸಿದ್ದರಾಜು ಸಾಲ ತೀರಿಸಲು ಕಮಲಾ ಅವರ ಚಿನ್ನಾಭರಣಗಳನ್ನು ದೋಚಲು ದುಷ್ಟ ಸಲಹೆಯನ್ನು ನೀಡುತ್ತಾನೆ. ಅದರಂತೆ ಆರೋಪಿಗಳು ಸಂಚು ರೂಪಿಸುತ್ತಾರೆ.

ಮೇ 27ರಂದು ಬೆಳಗ್ಗೆ ಆರೋಪಿಗಳು ಅಂಜನಮೂರ್ತಿ ಅವರ ಆಟೋರಿಕ್ಷಾದ ನಂಬರ್ ಪ್ಲೇಟ್ ತೆಗೆದು ಹಿಂಭಾಗದಲ್ಲಿ ‘ಕಿಂಗ್ ಕೊಹ್ಲಿ’ ಎಂದು ಬರೆದು ಸ್ಥಳ ಬಾಡಿಗೆಗೆ ಕೇಳುವ ನೆಪದಲ್ಲಿ ಕಮಲಮ್ಮ ಅವರ ಮನೆಗೆ ನುಗ್ಗಿದ್ದಾರೆ. ಹೀಗೆ ನುಗ್ಗಿದ ಆರೋಪಿಗಳು ಕಮಲಮ್ಮ ಅವರ ಕೈ ಕಾಲುಗಳನ್ನು ಕಟ್ಟಿ, ಆಕೆಯ ಬಾಯಿಯನ್ನು ಟೇಪ್‌ನಿಂದ ಮುಚ್ಚಿ ಕೊಂದಿದ್ದಾರೆ. ಕೃತ್ಯದ ವೇಳೆ ಅಶೋಕ್, ಕಮಲಮ್ಮ ಅವರ ನಿವಾಸದ ಹೊರಗೆ ಕಾಯಲು ನಿಂತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದಾಗ ಆರೋಪಿಗಳ ಚಲನವಲನ ಸೆರೆಯಾಗಿರುವುದು ಕಂಡುಬಂದಿದೆ. ಅದರಂತೆ ತನಿಖಾಧಿಕಾರಿಗಳು ಆರೋಪಿಗಳ ಜಾಡು ಹಿಡಿದಿದ್ದಾರೆ. ನಾವು ಕಮಲಾ ಅವರ ನಿವಾಸದ ಬಳಿ ದೃಶ್ಯಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಬೆಳಿಗ್ಗೆ ಅದೇ ರಸ್ತೆಯಲ್ಲಿ ಆಟೋರಿಕ್ಷಾ ಹಲವಾರು ಸುತ್ತುಗಳನ್ನು ಮಾಡುವುದನ್ನು ಗಮನಿಸಿದ್ದೇವೆ. ಆಟೊರಿಕ್ಷಾದಲ್ಲಿ ಕಿಂಗ್ ಕೊಹ್ಲಿ ಎಂಬ ಪದವಿತ್ತು ಆದರೆ ನೋಂದಣಿ ಸಂಖ್ಯೆ ಇರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ನಾವು ಆ ದಿನ ಬೆಳಿಗ್ಗೆ ಆಟೋದ ಚಲನವಲನಗಳನ್ನು ಗಮನಿಸಿದೆವು ಮತ್ತು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅಂಜನಮೂರ್ತಿ ವಾಹನದ ನಂಬರ್ ಪ್ಲೇಟ್ ತೆಗೆದುಹಾಕುವುದು ಸೆರೆಯಾಗಿದೆ. ಹೀಗಾಗಿ ನಾವು ಆಟೋರಿಕ್ಷಾದ ನೋಂದಣಿ ಸಂಖ್ಯೆಯನ್ನು ಪತ್ತೆಹಚ್ಚಿದೆವು. ಅದರ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಯಿತು. ‘ಕಿಂಗ್ ಕೊಹ್ಲಿ’ ಎಂಬ ಪದಗಳು ನಮಗೆ ವಾಹನವನ್ನು ಗುರುತಿಸಲು ಸಹಾಯ ಮಾಡಿತು” ಎಂದು ಅಧಿಕಾರಿ ಹೇಳಿದರು.

ಕ್ರೈಂ ನ್ಯೂಸ್​ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ