ಬೆಂಗಳೂರು ಟ್ರಾಫಿಕ್ ಕಡಿಮೆ ಮಾಡಲು ಬರಲಿದೆ ಎಲಿವೇಟೆಡ್ ಕಾರಿಡಾರ್: ಮತ್ತೆ ಮುನ್ನೆಲೆಗೆ ಬಂದ ಚರ್ಚೆ

|

Updated on: Jul 19, 2024 | 11:36 AM

2018ರಲ್ಲಿ ಸಾರ್ವಜನಿಕರ, ತಜ್ಞರ ವಿರೋಧದ ಕಾರಣ ಸ್ಥಗಿತವಾಗಿದ್ದ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಸದ್ದಿಲ್ಲದೇ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆಯೇ? ಹೀಗೊಂದು ಅನುಮಾನ ಇದೀಗ ವ್ಯಕ್ತವಾಗಿದೆ. ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದ ಪ್ರಸ್ತಾವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ ಎಂದು ವರದಿಯಾಗಿದೆ.

ಬೆಂಗಳೂರು ಟ್ರಾಫಿಕ್ ಕಡಿಮೆ ಮಾಡಲು ಬರಲಿದೆ ಎಲಿವೇಟೆಡ್ ಕಾರಿಡಾರ್: ಮತ್ತೆ ಮುನ್ನೆಲೆಗೆ ಬಂದ ಚರ್ಚೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜುಲೈ 19: ಡಬಲ್ ಡೆಕ್ಕರ್ ಫ್ಲೈಓವರ್ ಪ್ರಾಯೋಗಿಕ ಸಂಚಾರಕ್ಕೆ ಮುಕ್ತವಾದ ನಂತರ ಇದೀಗ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಕಡಿಮೆ ಮಾಡುವ ಸಲುವಾಗಿ ಶೀಘ್ರದಲ್ಲೇ ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾಗಲಿದೆ ಎಂದು ವರದಿಯಾಗಿದೆ. ಈ ಮೂಲಕ ಐದು ವರ್ಷಗಳ ಹಿಂದಿನ 102 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿಯೇ ಈ ವಿಷಯ ಚರ್ಚಿಸಲಾಗಿದೆ. ಪ್ರಸ್ತಾವನೆಯನ್ನು ವಿಸ್ತೃತವಾಗಿ ಚರ್ಚಿಸಲಾಗಿದೆಯಾದರೂ, ಸರ್ಕಾರವು ತನ್ನ ನಿರ್ಧಾರವನ್ನು ಬಹಿರಂಗಪಡಿಸಲಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಎಲಿವೇಟೆಡ್ ಕಾರಿಡಾರ್ ಯೋಜನೆಯಡಿ ಸುರಂಗ ರಸ್ತೆಗಳು ಮತ್ತು ಮಳೆನೀರು ಚರಂಡಿಗಳ ಬಫರ್ ಜೋನ್‌ನಲ್ಲಿ ರಸ್ತೆಗಳನ್ನು ನಿರ್ಮಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ ಎನ್ನಲಾಗಿದೆ.

ಎಲಿವೇಟೆಡ್ ಕಾರಿಡಾರ್ ಯೋಜನೆ ಸಂಬಂಧಿತ ವಿಷಯಗಳನ್ನು ರಾಜ್ಯ ಸಚಿವ ಸಂಪುಟದ ಮುಂದೆ ಇಡಲಾಗುವುದು ಮತ್ತು ಸಂಪುಟ ಸಹೋದ್ಯೋಗಿಗಳಿಂದ ಸಲಹೆಗಳನ್ನು ಪಡೆಯಲು ಸಭೆ ಕರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಜುಲೈ 27 ರಂದು ರಾಜ್ಯದ ನಗರ ಮೂಲದ ಶಾಸಕರೊಂದಿಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಲಾಗುವುದು ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಜಾಮ್​ಗೆ ಬ್ರೇಕ್, ಜನ್ರಿಗೆ ಖುಷ್: ಡಬಲ್ ಡೆಕ್ಕರ್ ಫ್ಲೈಓವರ್​ ಬಗ್ಗೆ ಸವಾರರು ಹೇಳಿದ್ದಿಷ್ಟು

2018ರಲ್ಲೇ ಚರ್ಚೆಯಾಗಿದ್ದ ಎಲಿವೇಟೆಡ್ ಕಾರಿಡಾರ್

ಉತ್ತರ ಮತ್ತು ದಕ್ಷಿಣ ಹಾಗೂ ಪೂರ್ವ ಮತ್ತು ಪಶ್ಚಿಮಕ್ಕೆ ಸಂಪರ್ಕ ಕಲ್ಪಿಸಲು ಎಲಿವೇಟೆಡ್ ಕಾರಿಡಾರ್ ನಿರ್ಮಿಸುವ ಪ್ರಸ್ತಾವನೆಯನ್ನು 2018 ರಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮೊದಲು ಘೋಷಿಸಿದ್ದರು. ನಂತರ ಸಾರಿಗೆ ತಜ್ಞರು ಮತ್ತು ನಾಗರಿಕ ಗುಂಪುಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಟೆಂಡರ್‌ಗಳನ್ನು ರದ್ದುಗೊಳಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ